More

    ಕಣ್ಮನ ಸೆಳೆಯುತ್ತಿದೆ ದೇವರಕಾಡು

    ರಾಜೇಂದ್ರ ಶಿಂಗನಮನೆ ಶಿರಸಿ: ಕ್ಷೀಣಿತ ಅರಣ್ಯದಲ್ಲಿ ಕ್ರಿಯಾತ್ಮಕ ಪರಿಸರಾಭಿವೃದ್ಧಿ ಕಾರ್ಯ ಸಾಧ್ಯ ಎಂಬುದಕ್ಕೆ ಕರ್ನಾಟಕದ ತಿರುಪತಿ ಖ್ಯಾತಿಯ ತಾಲೂಕಿನ ಮಂಜುಗುಣಿಯ ಪರಿಸರ ಸಾಕ್ಷಿಯಾಗಿದೆ.

    ಕೆನರಾ ಅರಣ್ಯ ವೃತ್ತದ ಜಾನ್ಮನೆ ವಲಯ ವ್ಯಾಪ್ತಿಯ ಮಂಜುಗುಣಿಯಲ್ಲಿ ವಿಶಿಷ್ಟವಾದ ದೇವರಕಾಡನ್ನು ನಿರ್ವಿುಸಲಾಗಿದೆ. ಅರಣ್ಯ ಇಲಾಖೆಯ ದೇವರಕಾಡು ಅನುದಾನದಡಿ ಅಂದಾಜು 78 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ದೇವರಕಾಡು ಮೈದಳೆದಿದೆ. ಸ್ಥಳೀಯರು ಹಾಗೂ ಮಂಜುಗುಣಿ ಕ್ಷೇತ್ರಕ್ಕೆ ಬರುವ ಭಕ್ತರಿಗೆ ವಿಶ್ರಾಂತಿ ಧಾಮ, ಮನರಂಜನೆ ಜತೆ ಮಂಜುಗುಣಿ ಸುತ್ತಮುತ್ತಲ ಜೀವವೈವಿಧ್ಯತೆ ಹಾಗೂ ಪರಿಸರದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಅರಣ್ಯ ಇಲಾಖೆ ದೇವರಕಾಡು ನಿರ್ವಿುಸಿದೆ.

    ಬಂಡೆಗಳ ರಕ್ಷಣೆ: ಇಲ್ಲಿನ ಅರಣ್ಯ ಸರ್ವೆ ನಂಬರ್ 20ರಲ್ಲಿ 6 ಹೆಕ್ಟೇರ್ ಪ್ರದೇಶದಲ್ಲಿರುವ ದೇವರಕಾಡಿನ ಪ್ರವೇಶದ್ವಾರ ಚಿತ್ತಾಕರ್ಷಕವಾಗಿದೆ. ಜತೆಗೆ ಕೃತಕ ಕೊಳ, ಅಲಂಕಾರಿಕ, ಔಷಧೀಯ ಸಸ್ಯರಾಶಿಗಳ ದರ್ಶನವಾಗುತ್ತದೆ. ಸಾರ್ವಜನಿಕರಲ್ಲಿ ಅರಣ್ಯ ಸಂರಕ್ಷಣೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಕಲ್ಲು ಬಂಡೆಗಳ ಮೇಲೆ, ಆವರಣ ಗೋಡೆಯ ಮೇಲೆ ಅತ್ಯಾಕರ್ಷಕ ಚಿತ್ರಗಳನ್ನು ಬಿಡಿಸಲಾಗಿದೆ. ಚಿಕ್ಕ ಮಕ್ಕಳಿಗೆ ಆಡಲು ಜೋಕಾಲಿ, ಜಾರುಬಂಡಿ, ತಿರುಗು ಚಕ್ರ ಸೇರಿದಂತೆ ವೈವಿಧ್ಯಮಯ ಆಟೋಪಕರಣಗಳನ್ನು ಅಳವಡಿಸಲಾಗಿದೆ. ಕೃತಕ ಸೇತುವೆ ನಿರ್ವಿುಸಿ ಅದರ ಮೇಲಿಂದ ಪರಿಸರ ವೀಕ್ಷಣೆಗೆ ಅವಕಾಶ ನೀಡಲಾಗಿದೆ. 1406 ಮೀಟರ್ ಉದ್ದದ ವಾಕಿಂಗ್ ಪಾಥ್ ನಿರ್ವಿುಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ, ಕುಳಿತುಕೊಳ್ಳಲು ಆಸನಗಳು, ಶೌಚಗೃಹಗಳನ್ನು ನಿರ್ವಿುಸಲಾಗಿದೆ. ದೇವರ ಕಾಡಿನ ಕೇಂದ್ರಬಿಂದುವಾಗಿ ರಾಧಾಕೃಷ್ಣರ ಶಿಲಾ ಮೂರ್ತಿಗಳು ಗಮನ ಸೆಳೆಯುತ್ತವೆ. ವಿಶೇಷವೆಂದರೆ ಈ ದೇವರಕಾಡಿನಲ್ಲಿರುವ ಪ್ರತೀ ಕಲ್ಲು ಬಂಡೆಯನ್ನು ಪ್ರಾಕೃತಿಕವಾಗಿಯೇ ಸಂರಕ್ಷಿಸಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಸದ್ಯ ಅರಣ್ಯ ಇಲಾಖೆಯ ಅಡಿ ದೇವರಕಾಡಿನ ನಿರ್ವಹಣೆಯಿದೆ.

    ವಿವಿಧ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ: ಭವಿಷ್ಯದಲ್ಲಿ ಸ್ಥಳೀಯವಾಗಿ ಬೆಳೆಯುವ ಹಣ್ಣು-ಹಂಪಲು ಹಾಗೂ ಧಾರ್ವಿುಕ ಪ್ರಾಮುಖ್ಯತೆ ಹೊಂದಿರುವ ಆಲ, ಅರಳಿ, ಅತ್ತಿ, ಬಸರಿ, ಮುತ್ತುಗ, ಎಕ್ಕ, ಸೀತಾ ಅಶೋಕ, ನೆಲ್ಲಿ, ಬಿಲ್ವಪತ್ರೆ, ಶಮೀಪತ್ರೆ, ರುದ್ರಾಕ್ಷಿ, ಹೂಸಂಪಿಗೆ, ನಾಗಸಂಪಿಗೆ, ಕಾಯಿದೂಪ, ಹಾಲಮಡ್ಡಿ ಮುಂತಾದ ಸಸಿಗಳನ್ನು ನೆಡಲು ನೀಲಿನಕ್ಷೆ ಸಿದ್ಧವಾಗಿದೆ. ಜತೆಗೆ, ಪೌರಾಣಿಕ ಸನ್ನಿವೇಶಗಳನ್ನು ನೆನಪಿಸುವ ಶಿಲ್ಪ ಕಲೆಗಳನ್ನು ಕಲ್ಲಿನಲ್ಲಿ ಚಿತ್ರಿಸಲು, ಚಿಟ್ಟೆ ಉದ್ಯಾನ ನಿರ್ವಿುಸಲು ಯೋಜನೆ ರೂಪುಗೊಂಡಿದೆ. 2019ರಲ್ಲಿ ಪ್ರಾರಂಭಗೊಂಡ ದೇವರಕಾಡು ನಿರ್ಮಾಣ ಕಾಮಗಾರಿ 9 ತಿಂಗಳಲ್ಲಿ ಪೂರ್ಣಗೊಂಡು ಸಾರ್ವಜನಿಕರ ವೀಕ್ಷಣೆಗೆ ಸಿದ್ಧವಾಗಿದೆ. ಶಿರಸಿ- ಕುಮಟಾ ರಾಜ್ಯ ಹೆದ್ದಾರಿಯ ಖೂರ್ಸೆ ಕ್ರಾಸ್​ನಿಂದ ಅಂದಾಜು 3 ಕಿ.ಮೀ. ಅಂತರದಲ್ಲಿದೆ. ಮಂಜುಗುಣಿವರೆಗೆ ಶಿರಸಿಯಿಂದ ಬಸ್ ವ್ಯವಸ್ಥೆ ಇದೆ.

    ರಾಜ್ಯದ ಪ್ರಸಿದ್ಧ ಮಂಜುಗುಣಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಜತೆಗೆ, ಸ್ಥಳೀಯವಾಗಿಯೂ ಸಾಕಷ್ಟು ಭಕ್ತರು ದೇವಾಲಯಕ್ಕೆ ನಡೆದು ಕೊಳ್ಳುತ್ತಾರೆ. ಭಕ್ತರಿಗೆ ಮನರಂಜನೆ ಜತೆ ಪರಿಸರದ ಮಹತ್ವ ತಿಳಿಸಲು ಅರಣ್ಯ ಇಲಾಖೆ ನಿರ್ಣಯಿಸಿ ದೇವರಕಾಡು ನಿರ್ವಿುಸಿದೆ. ಮುಂದಿನ ದಿನಗಳಲ್ಲಿ ದೇವರಕಾಡಿನ ನಿರ್ವಹಣೆಯನ್ನು ಮಂಜುಗುಣಿ ಗ್ರಾಮ ಅರಣ್ಯ ಸಮಿತಿಗೆ ವಹಿಸಿಕೊಡುವ ಚಿಂತನೆಯಿದೆ. | ಎಸ್.ಜಿ.ಹೆಗಡೆ ಡಿಎಫ್​ಒ ಶಿರಸಿ

    ಶಾಸ್ತ್ರ ಸಂಹಿತೆಗಳಲ್ಲಿ ಯಾವುದನ್ನು ನಾಶ ಮಾಡಬಾರದು ಎಂದಿದೆಯೋ ಅದು ಅರಣ್ಯ. ಹಾಗಾಗಿ ಅರಣ್ಯ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಕ್ಷೀಣಿತ ಅರಣ್ಯವನ್ನು ಹೊಂದಿರುವ ವೆಂಕಟರಮಣನ ಕ್ಷೇತ್ರವಾದ ಮಂಜುಗುಣಿಯ ನೆಲದಲ್ಲಿ ದೇವರಕಾಡು ನಿರ್ವಿುಸಿದ್ದು ಪರಿಸರ ಸಂರಕ್ಷಣೆ ವಿಷಯದಲ್ಲಿ ಉತ್ತಮ ಕಾರ್ಯ. | ಶ್ರೀನಿವಾಸ ಭಟ್ಟ ಮಂಜುಗುಣಿ ದೇವಾಲಯದ ಪ್ರಧಾನ ಅರ್ಚಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts