More

    ಕಣ್ಣೀರು ಸುರಿಸುತ್ತಿದ್ದಾನೆ ಉಳ್ಳಾಗಡ್ಡಿ ಬೆಳೆಗಾರ

    ನರೇಗಲ್ಲ: ಲಾಕ್​ಡೌನ್ ಹಿನ್ನೆಲೆಯಲ್ಲಿ ಸೂಕ್ತ ಮಾರುಕಟ್ಟೆ ಹಾಗೂ ಫಸಲಿಗೆ ಯೋಗ್ಯ ದರ ಇಲ್ಲದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಪಟ್ಟಣದ ಅನೇಕ ರೈತರು ನೀರಾವರಿ ಜಮೀನಿನಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಉಳ್ಳಾಗಡ್ಡಿ ಬೆಳೆದಿದ್ದಾರೆ. ಉತ್ತಮ ಫಸಲು ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ದರ ಇಲ್ಲ. ಹೀಗಾಗಿ, ಉಳ್ಳಾಗಡ್ಡಿಯ ಮುಂದೆ ಕುಳಿತು ಕಣ್ಣೀರು ಹಾಕುವ ಪರಿಸ್ಥಿತಿ ರೈತರದ್ದಾಗಿದೆ.

    ಪಟ್ಟಣದ ರೈತ ಶಿವಪ್ಪ ಗೋಡಿ ಎಂಬುವರು 4 ಎಕರೆಯಲ್ಲಿ ಉಳ್ಳಾಗಡ್ಡಿ ಬೆಳೆದಿದ್ದಾರೆ. ಬೀಜ, ರಸಗೊಬ್ಬರ, ಕಳೆ ನಿರ್ವಹಣೆಗೆ ರಾಸಾಯನಿಕ ಸಿಂಪಡಣೆ ಹಾಗೂ ಇತರೆ ಖರ್ಚು ಸೇರಿ 1.5 ಲಕ್ಷ ರೂ. ವ್ಯಯ ಮಾಡಿದ್ದಾರೆ. ಉತ್ತಮ ಫಸಲು ಬಂದಿದೆ. ಆದರೆ, ಲಾಕ್​ಡೌನ್​ನಿಂದಾಗಿ ಉತ್ತಮ ದರ ಸಿಗುತ್ತಿಲ್ಲ. ಈಗಾಗಲೇ 1 ಎಕರೆಯಲ್ಲಿನ 100 ಚೀಲ ಉಳ್ಳಾಗಡ್ಡಿ ಮಾರಾಟಕ್ಕೆ ಸಿದ್ಧವಾಗಿದೆ. ಇನ್ನುಳಿದ 3 ಎಕರೆಯಲ್ಲಿನ ಉಳ್ಳಾಗಡ್ಡಿ ಕಟಾವಿಗೆ ಬಂದಿದೆ. ಆದರೆ, ಕಟಾವು ಮಾಡಿದ ಕೂಲಿ ಹಣ ಕೂಡ ಮರಳಿ ಬಾರದ ಪರಿಸ್ಥಿತಿ ಒಂದೆಡೆಯಾದರೆ, ಮತ್ತೊಂದೆಡೆ ಜಮೀನಿನಲ್ಲಿಯೇ ಉಳ್ಳಾಗಡ್ಡಿ ಕೊಳೆಯುತ್ತಿದೆ.

    ಇಲ್ಲಿನ ಉಳ್ಳಾಗಡ್ಡಿಯನ್ನು ಗದಗ, ಬೆಂಗಳೂರು ಮತ್ತು ಹೈದರಾಬಾದ್ ಮಾರುಕಟ್ಟೆಯಲ್ಲಿ ಮಾರಲಾಗುತ್ತಿತ್ತು. ಕರೊನಾ ಪ್ರಭಾವದಿಂದ ಸದ್ಯ ಬೆಂಗಳೂರು ಮತ್ತು ಹೈದರಾಬಾದ್ ಮಾರುಕಟ್ಟೆಗೆ ಒಯ್ಯಲಾಗುತ್ತಿಲ್ಲ. ಸದ್ಯ ಗದಗ ಮಾರುಕಟ್ಟೆಯಲ್ಲಿ ಕ್ವಿಂಟಾಲ್​ಗೆ 400 ರಿಂದ 500 ರೂ. ಬೆಲೆ ಇದೆ.

    ಹಗಲು-ರಾತ್ರಿ ನೀರು ಹಾಯಿಸಿ ಉಳ್ಳಾಗಡ್ಡಿ ಬೆಳೆಸಿದ್ದೇನೆ. ಸರಿ ಸುಮಾರು 300 ರಿಂದ 400 ಚೀಲ ಉಳ್ಳಾಗಡ್ಡಿ ಫಸಲು ಬಂದಿದೆ. ಅಂದಾಜು 4 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿತ್ತು. ಮಾರುಕಟ್ಟೆಯಲ್ಲಿ ಚೀಲಕ್ಕೆ 200 ರಿಂದ 300 ರೂ.ಗಳಿಗೆ ಕೇಳುತ್ತಾರೆ. ಉಳ್ಳಾಗಡ್ಡಿ ಬೀಜ, ಗೊಬ್ಬರ, ಇತರೆ ಖರ್ಚು ಲೆಕ್ಕ ಹಾಕಿದರೆ, ಕೇವಲ ಕಟಾವು ಮಾಡಿದ ಕೂಲಿಯೂ ಬರುವುದಿಲ್ಲ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಅರ್ಜಿ ಸಲ್ಲಿಸಿದ್ದೇನೆ. ತೋಟಕ್ಕೆ ಭೇಟಿ ನೀಡುವುದಾಗಿ ತಿಳಿಸಿ ವಾರ ಕಳೆದರೂ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ. ದಯವಿಟ್ಟು ಅಧಿಕಾರಿಗಳು ಭೇಟಿ ನೀಡಿ ಪರಿಹಾರ ನೀಡಬೇಕು. ಇಲ್ಲದಿದ್ದರೆ ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಳ್ಳುವುದೊಂದೇ ದಾರಿ.

    | ಶಿವಪ್ಪ ಗೋಡಿ, ರೈತ

    ರೋಣ/ಗಜೇಂದ್ರಗಡ ತಾಲೂಕಿನ ತೋಟಗಾರಿಕೆ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ದರವಿಲ್ಲದ ಬಗ್ಗೆ ಮಾಹಿತಿ ಇದೆ. ಈಗಾಗಲೇ ಅನೇಕ ತೋಟಗಳಿಗೆ ಭೇಟಿ ನೀಡಿ ಸ್ಥಾನಿಕ ಪರಿಶೀಲನೆ ಕೈಗೊಳ್ಳಲಾಗಿದೆ. ಇನ್ನುಳಿದ ತೋಟಗಳಿಗೆ ಭೇಟಿ ನೀಡಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ.

    | ಮಹಮ್ಮದರಫಿ ತಾಂಬೋಟಿ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ ರೋಣ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts