More

    ಕಣ್ಣೀರಲ್ಲಿ ಕೈ ತೊಳೆಯುತ್ತಿದೆ ಬಿಇಒ ಕುಟುಂಬ

    ಧಾರವಾಡ: ‘ಅವರು ಪ್ರೌಢಶಾಲೆ ಮುಖ್ಯಾಧ್ಯಾಪಕರಾಗಿ ಶಿಕ್ಷಕ ವೃತ್ತಿ ಆರಂಭಿಸಿದವರು. ವೃತ್ತಿಯಲ್ಲಿ ಏಳಿಗೆ ಸಾಧಿಸಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ, ಡಯಟ್ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ವೃತ್ತಿನಿರತರಾಗಿದ್ದ ವೇಳೆಯಲ್ಲಿ ಬಂದೆರಗಿದ ಅನಾರೋಗ್ಯ ಸಮಸ್ಯೆ ಅವರನ್ನು ಹಾಸಿಗೆ ಹಿಡಿಯುವಂತೆ ಮಾಡಿದೆ. ಆ ಶಿಕ್ಷಣಾಧಿಕಾರಿಯ ಕುಟುಂಬ ಸರ್ಕಾರದ ನೆರವಿಗೆ ಹೋರಾಡುತ್ತಿದ್ದರೂ ಪ್ರಯೋಜನವಾಗಿಲ್ಲ.

    ಇಲ್ಲಿಯ ನಿರ್ಮಲ ನಗರದ ನಿವಾಸಿ ಮಹಾದೇವ ಮಾಳಗಿ ಕುಟುಂಬದ ಕರುಣಾಜನಕ ಕಥೆ ಇದು. 1999ರ ಬ್ಯಾಚ್​ನಲ್ಲಿ ಕೆಇಎಸ್ ತೇರ್ಗಡೆಯಾದ ಮಹಾದೇವ, ಶಿಕ್ಷಣ ಇಲಾಖೆಯ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಹುಕ್ಕೇರಿ ತಾಲೂಕು ಉಳ್ಳಾಗಡ್ಡಿ ಖಾನಾಪುರದಲ್ಲಿ ಪ್ರೌಢಶಾಲಾ ಮುಖ್ಯಾಧ್ಯಾಪಕರಾಗಿ, ನಂತರ ಹಳಿಯಾಳದಲ್ಲಿ ಬಿಆರ್​ಸಿಯಾಗಿ ಕೆಲಸ ಮಾಡಿದ್ದಾರೆ. 2007ರಲ್ಲಿ ಬಿಇಒ ಹುದ್ದೆಗೆ ಬಡ್ತಿ ಪಡೆದು ಧಾರವಾಡ ಜಿಲ್ಲೆಯ ಕಲಘಟಗಿ, ಕಲಬುರಗಿ, ಯಾದಗಿರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ನಂತರ ಬೆಳಗಾವಿ ಡಯಟ್ ಹಿರಿಯ ಉಪನ್ಯಾಸಕರಾಗಿ ವರ್ಗಾವಣೆಗೊಂಡು ಕರ್ತವ್ಯದಲ್ಲಿದ್ದಾಗ 2015ರ ಜ. 15ರಂದು ಪರೀಕ್ಷಾ ಕೇಂದ್ರದಲ್ಲಿ ಬ್ರೖೆನ್ ಸ್ಟ್ರೋಕ್ ಆಗಿ ಆಸ್ಪತ್ರೆ ಸೇರಿದ್ದರು. ಅಂದಿನಿಂದ ಪತ್ನಿ ಪ್ರಭಾವತಿ, ಮಹಾದೇವ ಅವರಿಗೆ ಹಲವು ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದಾರೆ. ಲಕ್ಷಾಂತರ ರೂ. ಖರ್ಚು ಮಾಡಿದ ಪರಿಣಾಮ ಬದುಕಿದ್ದಾರೆಯೇ ಹೊರತು, ಇನ್ನೊಬ್ಬರ ನೆರವಿಲ್ಲದೆ ಏನೂ ಸಾಧ್ಯವಾಗುತ್ತಿಲ್ಲ.

    ಅವರ ಮಿದುಳು ಶೇ. 80ರಷ್ಟು ನಿಷ್ಕ್ರಿಯವಾಗಿದ್ದು, ಪತ್ನಿ, ಮಕ್ಕಳ ನೆರವಿನಿಂದಲೇ ದಿನ ದೂಡುತ್ತಿದ್ದಾರೆ. ಅವರು ಅನಾರೋಗ್ಯಪೀಡಿತರಾದ ನಂತರ, ವೇತನ ನಿಂತು ಹೋಗಿದೆ. ಇಬ್ಬರು ಕಾಲೇಜು ಓದುವ ಹೆಣ್ಣು ಮಕ್ಕಳಿದ್ದು, ಕುಟುಂಬ ನಿರ್ವಹಣೆಗೆ ಪತ್ನಿ ಪ್ರಭಾವತಿ ಪರದಾಡುವಂತಾಗಿದೆ. ಕುಟುಂಬ, ಮಕ್ಕಳ ವಿದ್ಯಾಭ್ಯಾಸ ನಿರ್ವಹಣೆಗಾಗಿ ತನಗೆ ಅನುಕಂಪದ ನೌಕರಿ ನೀಡುವಂತೆ 5 ವರ್ಷದಿಂದ ಸರ್ಕಾರವನ್ನು ಅಂಗಲಾಚುತ್ತಿದ್ದಾರೆ. ಆದರೂ ಅವರ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ. ಸರ್ಕಾರಿ ಉದ್ಯೋಗಿ ಮೃತಪಟ್ಟರೆ ಮಾತ್ರ ಕುಟುಂಬದವರೊಬ್ಬರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡುವ ಕಾನೂನಿನ ತೊಡಕು ಮಾಳಗಿ ಕುಟುಂಬಕ್ಕೆ ಮುಳುವಾಗಿದೆ.

    ಪ್ರಭಾವತಿಯವರ ಅಹವಾಲಿಗೆ ಸ್ಪಂದಿಸಿರುವ ಶಿಕ್ಷಣ ಸಚಿವ ಸುರೇಶಕುಮಾರ ಅವರು ಇತ್ತೀಚೆಗೆ ಖುದ್ದು ಕರೆ ಮಾಡಿ ವಿಚಾರಿಸಿ, ವಿಶೇಷ ಪ್ರಕರಣ ಎಂದು ಪರಿಗಣಿಸುವ ಭರವಸೆ ನೀಡಿದ್ದಾರೆ. ಅದು ಈಡೇರಲಿ ಎಂದು ಕುಟುಂಬದವರು ಒತ್ತಾಯಿಸಿದ್ದಾರೆ.

    ಪತಿ ಕರ್ತವ್ಯದಲ್ಲಿದ್ದಾಗ ಅನಾರೋಗ್ಯಪೀಡಿತರಾಗಿದ್ದಾರೆ. ಮಿದುಳು ನಿಷ್ಕ್ರಿಯವಾಗಿದ್ದು, ಇನ್ನೆಂದೂ ಸುಧಾರಿಸದು. ಅವರ ವೇತನ ನಿಂತಿದ್ದು, ಕುಟುಂಬ ನಿರ್ವಹಣೆ ಕಷ್ಟವಾಗಿದೆ. ನಾನು ಪದವೀಧರಳಾಗಿದ್ದು, ಅನುಕಂಪ ಆಧಾರದ ನೌಕರಿಗಾಗಿ ಎದುರು ನೋಡುತ್ತಿದ್ದೇನೆ. ಇತ್ತೀಚೆಗೆ ಸಚಿವರು ಸ್ಪಂದಿಸಿದ್ದು, ವಿಶ್ವಾಸ ಮೂಡಿದೆ.

    | ಪ್ರಭಾವತಿ, ಮಹಾದೇವ ಮಾಳಗಿ ಪತ್ನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts