More

    ಕಣವಿ ವೀರಭದ್ರೇಶ್ವರ ಅದ್ದೂರಿ ಜಾತ್ರೆ

    ಬಾಗಲಕೋಟೆ: ನಗರದ ಬಿವಿವಿ ಸಂಘದ ಆವರಣದಲ್ಲಿರುವ ಕಣವಿ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವವು ಬುಧವಾರ ಸಂಜೆ ಯುಗಾದಿ ಹಬ್ಬದ ದಿನದಂದು ಸಂಭ್ರಮದಿಂದ ಜರುಗಿತು. ಜಾತ್ರೆಯ ಅಂಗವಾಗಿ ಗುರುವಾರ ನಡೆದ ಅಗ್ಗಿ ಉತ್ಸವದಲ್ಲಿ ಸಹಸ್ರಾರು ಭಕ್ತರು ಅಗ್ಗಿ ಹಾಯ್ದರು.

    ಜಾತ್ರೆಯ ಅಂಗವಾಗಿ ಕಣವಿ ವೀರಭದ್ರೇಶ್ವರನಿಗೆ ವಿಶೇಷ ಅಲಂಕಾರ, ಪೂಜೆ, ಆರತಿ, ಅಭಿಷೇಕ ಮತ್ತು ಪಾಲಕಿ ಸೇವೆ ಜರುಗಿತು. ಯುಗಾದಿ ಪಾಡ್ಯದ ದಿನವಾದ ಬುಧವಾರ ಸಹಸ್ರಾರು ಭಕ್ತರ ಜಯಘೋಷಣೆಗಳ ನಡುವೆ ವೀರಭದ್ರೇಶ್ವರ ರಥೋತ್ಸವ ಸಂಭ್ರಮದಿಂದ ನಡೆಯಿತು.ದೇವಸ್ಥಾನದಿಂದ ಆರಂಭವಾದ ರಥೋತ್ಸವ ಮೆರವಣಿಗೆ ಬನ್ನಿ ಗಿಡದ ವರೆಗೆ ಸಾಗಿತು. ಈ ವೇಳೆ ನೆರೆದ ಭಕ್ತರು ಉತ್ತತ್ತಿ, ಬಾಳೆಹಣ್ಣು ರಥಕ್ಕೆ ಅರ್ಪಿಸಿ ಇಷ್ಠಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು.

    ರಥಕ್ಕೆ ತಳಿರುವ ತೋರಣಗಳ ಮೂಲಕ ವಿಶೇಷ ಅಲಂಕಾರ ಮಾಡಲಾಗಿತ್ತು. ನಗರದ ಎರಡನೇ ಅತಿದೊಡ್ಡ ಜಾತ್ರೆ ಎಂದೇ ಪ್ರಸಿದ್ದಿ ಪಡೆದಿರುವ ಕಣವಿ ವೀರಭದ್ರೇಶ್ವರ ರಥೋತ್ಸವಕ್ಕೆ ಬಾಗಲಕೋಟೆ, ನವನಗರ, ವಿದ್ಯಾಗಿರಿ ಸೇರಿದಂತೆ ಸುತ್ತಮುತ್ತ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ಹರಕೆ ಸಲ್ಲಿಸಿದರು. ಜಾತ್ರೆಯ ಅಂಗವಾಗಿ ದೇವಸ್ಥಾನದ ಮುಂಭಾಗದಲ್ಲಿ ನಡೆದ ಅಗ್ಗಿ ಹಾಯುವ ಕಾರ್ಯಕ್ರಮ ಅದ್ಧೂರಿ ಜರುಗಿತು. ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ಇದಕ್ಕೂ ಮುನ್ನ ಹಳಪೇಟೆಯಿಂದ ಕಣವಿ ವೀರಭದ್ರೇಶ್ವರ ದೇವಸ್ಥಾನದವರೆಗೆ ಪುರವಂತರವನ್ನು ಸಕಲ ವಾದ್ಯ ವೈಭವಗಳೊಂದಿಗೆ ಕರೆತಲಾಯಿತು. ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿದ ಮೇಲೆ ಪುರವಂತರು ಮತ್ತು ಪಲ್ಲಕ್ಕಿ ಹೊತ್ತವರು ಅಗ್ಗಿ ಹಾಯ್ದರು. ನಂತರ ಭಕ್ತ ಸಮುದಾಯ ಖಡೇ ಖಡೇ ವೀರಭದ್ರ ಎನ್ನುತ್ತಾ ಅಗ್ಗಿ ಹಾಯ್ದರು. ಜಯ, ಘೋಷಗಳು ಮೊಳಗಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts