More

    ಕಡಿಮೆಯಾದ ಮಳೆ, ನಿಲ್ಲದ ಹಾನಿ ಪ್ರಮಾಣ

    ಕಾರವಾರ: ಜಿಲ್ಲೆಯಲ್ಲಿ ಮಳೆ ಕಡಿಮೆಯಿದೆ. ಆದರೆ, ಕಳೆದ ವಾರ ಸಂಭವಿಸಿದ ಪ್ರವಾಹ ಹಾಗೂ ಭಾರಿ ಗಾಳಿ ಮಳೆಯ ಪ್ರಭಾವದಿಂದ ಇದುವರೆಗೂ ಮನೆಗಳು ಉರುಳಿ ಬೀಳುತ್ತಿವೆ.

    ಸೋಮವಾರ ಬೆಳಗಿನ ವರದಿಯಂತೆ ಹಳಿಯಾಳದಲ್ಲಿ 11, ಯಲ್ಲಾಪುರದಲ್ಲಿ 3, ಕುಮಟಾದಲ್ಲಿ 2, ಭಟ್ಕಳ, ದಾಂಡೇಲಿ, ಶಿರಸಿ, ಸಿದ್ದಾಪುರದಲ್ಲಿ ತಲಾ 1 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಯಲ್ಲಾಪುರದ 1 ಮನೆ ಸಂಪೂರ್ಣ ಬಿದ್ದು ಹೋಗಿದೆ. ಈ ವರ್ಷದಲ್ಲಿ ಇದುವರೆಗೆ 300 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 34 ಮನೆಗಳು ಸಂಪೂರ್ಣ ಬಿದ್ದು ಹೋಗಿವೆ.

    ನೀರು ಹೊರ ಬಿಡುವ ಮುನ್ನೆಚ್ಚರಿಕೆ: ಶರಾವತಿ ನದಿ ಪಾತ್ರಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಲಿಂಗನಮಕ್ಕಿ ಅಣೆಕಟ್ಟೆಗೆ 42770 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 1819 ಅಡಿ ಗರಿಷ್ಠ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಇದುವರೆಗೆ 1801 ಅಡಿ ನೀರು ತುಂಬಿದೆ. ನೀರಿನ ಒಳ ಹರಿವು ಇದೇ ರೀತಿ ಇದ್ದಲ್ಲಿ ಯಾವುದೇ ಕ್ಷಣದಲ್ಲೂ ಹೊರ ಬಿಡುವ ಸಾಧ್ಯತೆ ಇದೆ. ಲಿಂಗನಮಕ್ಕಿಯಿಂದ ನೀರು ಹೊರ ಬಿಟ್ಟಲ್ಲಿ ಗೇರುಸೊಪ್ಪ ಅಣೆಕಟ್ಟೆ ಬೇಗನೇ ತುಂಬಲಿದ್ದು, ಶರಾವತಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಕೆಪಿಸಿ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.

    ಕಾಳಿ ಜಲವಿದ್ಯುತ್ ಯೋಜನೆಯ ಕದ್ರಾ ಅಣೆಕಟ್ಟೆಯಿಂದ ನೀರಿನ ಹೊರ ಹರಿವು ಮುಂದುವರಿದಿದೆ. ಅಣೆಕಟ್ಟೆಗೆ 29638 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಗೇಟ್ ತೆರೆದು ಹಾಗೂ ವಿದ್ಯುತ್ ಉತ್ಪಾದನೆ ಮಾಡಿ 37661 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.

    ತಾಲೂಕುವಾರು ಮಳೆ ಪ್ರಮಾಣ: ಅಂಕೋಲಾದಲ್ಲಿ 20.4, ಭಟ್ಕಳ- 44, ಹಳಿಯಾಳ- 6.6, ಹೊನ್ನಾವರ- 29.1, ಕಾರವಾರ- 19.2, ಕುಮಟಾ- 18.2, ಮುಂಡಗೋಡ- 4.4, ಸಿದ್ದಾಪುರ- 43.4, ಶಿರಸಿ- 25.5, ಜೊಯಿಡಾ- 13, ಯಲ್ಲಾಪುರದಲ್ಲಿ 22.6. ಮಿಮೀ ಮಳೆಯಾಗಿದೆ.

    ಶೇ. 60ರಷ್ಟು ಭರ್ತಿಯಾದ ಸೂಪಾ ಜಲಾಶಯ: ಜೊಯಿಡಾ ತಾಲೂಕಿನ ಹಲವು ಕಡೆ ಮಳೆಯಿಂದಾಗಿ ಹಾನಿ ಸಂಭವಿಸುತ್ತಿದ್ದರೂ ಸೂಪಾ ಜಲಾಶಯಕ್ಕೆ ಮಾತ್ರ ಕಳೆದ ವರ್ಷಕ್ಕಿಂತ ನೀರಿನ ಮಟ್ಟ ಸುಮಾರು 13 ಮೀ. ಕಡಿಮೆ ಇದೆ. ಕಳೆದ ವರ್ಷ ಆಗಷ್ಟ್ ತಿಂಗಳಲ್ಲಿ ಸೂಪಾ ಭರ್ತಿಯಾಗಿ ಮೂರು ಗೇಟ್ ತೆರೆದು ನೀರು ಹೊರಬಿಡಲಾಗಿತ್ತು. ಸೂಪಾ ಜಲಾಶಯದಲ್ಲಿ ಈ ವರ್ಷ 548.85 ಮೀ. ನೀರು ಸಂಗ್ರಹವಾಗಿದ್ದು, ಕಳೆದ ವರ್ಷ ಇದೇ ದಿನಕ್ಕೆ 562.53 ಮೀ. ನೀರು ಸಂಗ್ರಹವಿತ್ತು. ಶೇ. 60ರಷ್ಟು ಜಲಾಶಯದಲ್ಲಿ ನೀರು ಭರ್ತಿಯಾಗಿದೆ. ಖಾನಾಪುರ, ಕುಂಡಲ, ಡಿಗ್ಗಿ, ಕ್ಯಾಸಲ್ ರಾಕ್ ಭಾಗದಲ್ಲಿ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಿದೆ. ಇವತ್ತಿಗೆ 38201.088 ಕ್ಯೂಸೆಕ್ ನೀರಿನ ಒಳಹರಿವು ದಾಖಲಾಗಿದೆ.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts