More

    ಕಠಿಣ ನಿಯಮ ಜಾರಿ ಎಚ್ಚರಿಕೆ

    ಧಾರವಾಡ: ಕೋವಿಡ್ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ. ಮಾಸ್ಕ್ ಧರಿಸದಿರುವುದು, ಪರಸ್ಪರ ಅಂತರ ಇಲ್ಲದಿರುವುದು ಹಾಗೂ ಕೋವಿಡ್ ಮಾರ್ಗಸೂಚಿ ಪಾಲಿಸದಿರುವುದೇ ಕಾರಣ. ಜನರು ಸರ್ಕಾರದ ಮುಂಜಾಗ್ರತೆ ಕ್ರಮಗಳನ್ನು ಪಾಲಿಸದಿದ್ದರೆ ಜಿಲ್ಲೆಯಲ್ಲಿ ಕಠಿಣ ನಿಯಮ ಜಾರಿಗೆ ತರಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಎಚ್ಚರಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಆರೋಗ್ಯ ಪಡೆ ಹಾಗೂ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರಕರಣಗಳು ಹೆಚ್ಚುತ್ತಿರುವುದರಿಂದ ಕೋವಿಡ್ ಸಂದರ್ಭದಲ್ಲಿ ರಚಿಸಿದ್ದ ಎಲ್ಲ ತಂಡಗಳನ್ನು ಮರುಸ್ಥಾಪಿಸಿ ಕಾರ್ಯಗಳ ಹಂಚಿಕೆ ಮತ್ತು ಪರಿಶೀಲಿಸುವಂತೆ ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದರು.

    ಡಿಸಿ ಕಚೇರಿಯಲ್ಲಿ ಕಂಟ್ರೋಲ್ ರೂಂ ಸೇವೆ ಮುಂದುವರಿಸಲಾಗುವುದು. ಕೋವಿಡ್ ಪರೀಕ್ಷಿಸುವ ಪ್ರಯೋಗಾಲಯಗಳಿಗೆ ಅಗತ್ಯ ಮಾನವ ಸಂಪನ್ಮೂಲದ ಬೇಡಿಕೆ ಸಲ್ಲಿಸುವಂತೆ ಸೂಚಿಸಿದರು.

    ಕೋವಿಡ್ ನಿಯಂತ್ರಣಕ್ಕೆ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜಿಸಿ ತಂಡ ರಚಿಸಲಾಗಿದೆ. ಕೆಲ ಅಧಿಕಾರಿ ಮತ್ತು ಸಿಬ್ಬಂದಿ ನೇಮಿಸಿದ ಕಾರ್ಯಕ್ಕೆ ಹಾಜರಾಗದೆ ನಿರ್ಲಕ್ಷಿಸಿದ್ದಾರೆ. ಸಂಬಂಧಿಸಿದ ತಂಡಗಳ ಮುಖ್ಯಸ್ಥರು ಕರ್ತವ್ಯಕ್ಕೆ ಹಾಜರಾಗದವರ ವರದಿ ಸಲ್ಲಿಸಿದರೆ ಸೇವೆಯಿಂದ ವಜಾಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

    ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಮತ್ತು ಕೆಲ ಖಾಸಗಿ ಆಸ್ಪತ್ರೆಗಳಲ್ಲಿ 250 ರೂ.ಗೆ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ದಾಸ್ತಾನು ಇದೆ ಎಂದರು.

    ಜಿಲ್ಲೆಗೆ ಪ್ರತಿದಿನ ವಿವಿಧ ಖಾಸಗಿ ಹಾಗೂ ಸರ್ಕಾರಿ ಬಸ್ ಮೂಲಕ ಹೊರ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರು ಕೋವಿಡ್ ನೆಗೆಟಿವ್ ವರದಿ ಹೊಂದಿರಬೇಕು. ಇಲ್ಲವಾದಲ್ಲಿ ಪ್ರಯಾಣಿಕರಿಗೆ ಆರ್​ಟಿಪಿಸಿಆರ್ ಮೂಲಕ ಸ್ಥಳದಲ್ಲೇ ಟೆಸ್ಟ್ ಮಾಡಬೇಕು. ಇದು ಪ್ರತಿ ದಿನ ಪುನರಾವರ್ತನೆಯಾದರೆ ಅಂತಹ ಬಸ್ ಮಾಲೀಕರಿಗೆ ಎಚ್ಚರಿಕೆ ನೀಡಿ ಬಸ್​ಅನ್ನು ಪ್ರಯಾಣಿಕರ ಸಮೇತ ಮರಳಿ ಕಳುಹಿಸಬೇಕು ಅಥವಾ ಸೀಜ್ ಮಾಡುವಂತೆ ಪಾಲಿಕೆ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

    ಜಿಪಂ ಸಿಇಒ ಡಾ. ಬಿ. ಸುಶೀಲಾ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಡಾ. ಬಿ. ಗೋಪಾಲಕೃಷ್ಣ, ಕಿಮ್್ಸ ನಿರ್ದೇಶಕ ಡಾ.ರಾಮಚಂದ್ರ ಅಂಟರತಾನಿ, ಲಕ್ಷ್ಮೀಕಾಂತ ಲೋಕರೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ ಮದೀನಕರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಕುಮಾರ್ ಮಾನಕರ, ತಹಸೀಲ್ದಾರರು, ಇತರರು ಇದ್ದರು.

    ಲಸಿಕಾಕರಣ ಚುರುಕುಗೊಳಿಸಲು ತಂಡ ರಚನೆ:

    ಧಾರವಾಡ: ಲಸಿಕಾಕರಣ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಚುರುಕುಗೊಳಿಸಲು ಗ್ರಾಮೀಣ ಮಟ್ಟದಲ್ಲಿ ಪಿಡಿಒಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ ಎಂದು ಜಿಪಂ ಸಿಇಒ ಡಾ. ಬಿ. ಸುಶೀಲಾ ಹೇಳಿದರು. ಈಗಾಗಲೇ ಈ ಕುರಿತು ತಾಪಂ ಇಒ ಹಾಗೂ ಪಿಡಿಒಗಳ ಸಭೆ ನಡೆಸಿ ನಿರ್ದೇಶನ ನೀಡಲಾಗಿದೆ. ಪ್ರತಿ ತಾಲೂಕಿನ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ಆಯಾ ತಾಲೂಕಿಗೆ ಉಸ್ತುವಾರಿಗಳನ್ನಾಗಿ ನೇಮಿಸಿ ಪ್ರತಿದಿನ ಗ್ರಾಮವಾರು ಲಸಿಕೆ ಪಡೆದವರ ವರದಿ ನೀಡುವಂತೆ ಸೂಚಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಲಸಿಕಾಕರಣ ಯಶಸ್ವಿಗೊಳಿಸಲು ಗ್ರಾಪಂ ಸದಸ್ಯರ, ಗ್ರಾಮದ ಮುಖಂಡರ ಹಾಗೂ ಜನಪ್ರತಿನಿಧಿಗಳ ಸಹಕಾರದಲ್ಲಿ ಕ್ರಿಯಾಯೋಜನೆ ಸಿದ್ಧಗೊಳಿಸಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts