More

    ಕಟ್ಟಿನಗುಂಡಿಗಿಲ್ಲ ಸಂಪರ್ಕ ಕೊಂಡಿ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
    120ಕ್ಕೂ ಹೆಚ್ಚಿನ ಮನೆ, 800ರಷ್ಟು ಜನಸಂಖ್ಯೆಯಿರುವ ಕಂಡ್ಲೂರು ಗುಲ್ವಾಡಿ ಪ್ರದೇಶದ ಜನ ಮೂರು ತಿಂಗಳಿಂದ ಕೊಂಕಣ ಸುತ್ತಿ ಮೈಲಾರ ಸೇರಿದ ಹಾಗೆ ಸೇರಬೇಕಾದ ಸ್ಥಳಕ್ಕೆ ತಲುಪಬೇಕು. ಗುಲ್ವಾಡಿ ಗ್ರಾಮದ ಕಟ್ಟಿನಗುಂಡಿ ಹೊಳೆ ದಾಟಲು ಬಳಸುತ್ತಿದ್ದ ಕಿರು ಅಣೆಕಟ್ಟು ಮಳೆಗಾಲದಲ್ಲಿ ಕುಸಿತಗೊಂಡಿರುವುದು ಇದಕ್ಕೆ ಕಾರಣ.
    ಬೈಂದೂರು ವಿಧಾನಸಭಾ ಕ್ಷೇತ್ರ ಕಂಡ್ಲೂರು, ಗುಲ್ವಾಡಿ ಸೌಕೂರು ನಡುವಿನ ಕಟ್ಟಿನಗುಂಡಿ ಪ್ರದೇಶದಲ್ಲಿ ಉಪ್ಪು ನೀರು ತಡೆಗಾಗಿ ಆರು ದಶಕ ಹಿಂದೆ ಕುಬ್ಜಾ ನದಿಗೆ ನಿರ್ಮಿಸಿದ್ದ ಕಿರು ಅಣೆಕಟ್ಟು ಕುಂದ ಕುಸಿದಿದ್ದರಿಂದ ಇಡೀ ಊರಿನ ಸಂಪರ್ಕ ತಪ್ಪಿದೆ. ಸೌಕೂರಿನಿಂದ ಕಂಡ್ಲೂರಿಗೆ ಬರಲು ಮೂರ್ನಾಲ್ಕು ಕಿ.ಮೀ ಸುತ್ತಿ ಬರುತ್ತಿದ್ದ ಈ ಭಾಗದ ಜನರಿಗೆ ಕಿರು ಅಣೆಕಟ್ಟು ನಿರ್ಮಾಣದ ತರುವಾಯ ಸಂಪರ್ಕ ಸೇತುವೆಯಾಗಿತ್ತು. ಈ ಅಣೆಕಟ್ಟಿನ ಮೇಲೆ ಮೊಣಕಾಲಿನವರೆಗೂ ನೀರು ಇರುವಾಗ ಅದರಲ್ಲೇ ದಾಟುತ್ತಿದ್ದರು. ಈವರೆಗೆ ಕಟ್ಟಿನಗುಂಡಿ ಹೊಳೆ ದಾಟುವ ಸಂದರ್ಭ ಬ್ಯಾಲೆನ್ಸ್ ತಪ್ಪಿ ನೀರಿಗೆ ಬಿದ್ದು ಪ್ರಾಣ ಕಳೆದುಕೊಂಡವರ ಸಂಖ್ಯೆ 60ರಷ್ಟು. ಮೊನ್ನೆ ಮೊನ್ನೆ ಬಾಲಕನೊಬ್ಬ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ. ಕುಸಿತ ಬಳಿಕ ಕಾವ್ರಾಡಿ ಗ್ರಾಮ ಪಂಚಾಯಿತಿ ಸೇತುವೆ ಮೇಲೆ ಸಂಚಾರ ಮಾಡಬಾರದು ಎಂಬ ನಾಮಫಲಕ ಹಾಕಿದೆ.

    ಪದೇಪದೆ ಎಚ್ಚರಿಸಿದ್ದ ವಿಜಯವಾಣಿ
    ವಿಜಯವಾಣಿ ಪತ್ರಿಕೆ ಮೂರು ಬಾರಿ ಕಟ್ಟಿನಗುಂಡಿ ಅಪಾಯದ ನಡಿಗೆ ಬಗ್ಗೆ ಎಚ್ಚರಿಸಿತ್ತು. ಕಂಡ್ಲೂರು ಗ್ರಾಮ ದರ್ಶನ ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರ ಪರಿಚಯದ ಸಂದರ್ಭ ಕಟ್ಟಿನಗುಂಡಿ ಸೌಕೂರು, ಕಂಡ್ಲೂರು ಸಂಚಾರಿಗಳ ಸಮಸ್ಯೆ ಬಗ್ಗೆ ಎಚ್ಚರಿಸಿತ್ತು. ಆದರೆ ಗ್ರಾಪಂ, ಜಿಪಂ, ತಾಲೂಕು ಮತ್ತು ಜಿಲ್ಲಾಡಳಿತ ಮಾತ್ರ ಕಟ್ಟಿನ ಗುಂಡಿ ಅಪಾಯದ ನಡಿಗೆ ಬಗ್ಗೆ ಆಸಕ್ತಿ ವಹಿಸಲಿಲ್ಲ.

    ಕಟ್ಟಿನಗುಂಡಿ ಹೊಳೆ ದಾಟುವಾಗ 60ರಿಂದ 70 ಜನ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಪಾದಚಾರಿಗಳಿಗೆ ಕಟ್ಟಿನಗುಂಡಿ ಹತ್ತಿರದ ಕಾಲು ದಾರಿ. ಉಪ್ಪು ನೀರು ತಡೆ ಸೇತುವೆ ಕುಸಿದಿದ್ದರಿಂದ ಮೊಳಕಾಲು ಮೊಟ್ಟ ನೀರಿನಲ್ಲಿ ಸೇತುವೆ ದಾಟಬೇಕಿತ್ತು. ಈಗ ಕುಂದ ಕುಸಿದಿದ್ದರಿಂದ ಸಂಚಾರ ಬಂದ್ ಆಗಿ, ಸುತ್ತಿ ಬಳಸಿ, ಕಂಡ್ಲೂರು ಸೇರಬೇಕು. ಹಿಂದಿನ ಶಾಸಕ ಗೋಪಾಲ ಪೂಜಾರಿ ಹಾಗೂ ಪ್ರಸಕ್ತ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಅವರಿಗೂ ಈ ಬಗ್ಗೆ ಮನವಿ ಮಾಡಿದ್ದೇವೆ.
    -ಬಸವಣ್ಣ, ಹಿರಿಯ ಕೃಷಿಕ, ಕುಚ್ಚಟ್ಟು

    ಕಟ್ಟಿನಗುಂಡಿ ಕುಚ್ಚಟ್ಟು, ಗುಲ್ವಾಡಿ, ಕುದ್ರು, ಸೌಕೂರು, ಚಿಕ್ಕಪೇಟೆ ಪ್ರದೇಶ ಜನರ ಸಂಪರ್ಕ ಕೊಂಡಿಯಾಗಿದೆ. ಕೆಲಸಕ್ಕೆ ಶಾಲೆಗೆ ಹೋಗುವವರಿಗೆ ಸಮಸ್ಯೆ ಆಗಿದೆ. ಸೇತುವೆ, ರಸ್ತೆಯಿಲ್ಲದೆ ನೆರೆ ಪ್ರದೇಶವಾಗಿದ್ದು, ನೆರೆ ಬಂದರೆ ಕಷ್ಟ. ಪರಿಸರದ ಜನರಿಗೆ ಅನಾರೋಗ್ಯ ಕಾಡಿದರೆ ಕಂಬಳಿ ಜೋಲಿಯೇ ಗತಿ.
    -ಮಾಲತಿ, ಗೃಹಿಣಿ, ಕುಚ್ಚಟ್ಟು

    ಅಂಗೈಯಲ್ಲಿ ಜೀವ ಹಿಡಿದು ಕಟ್ಟಿನಗುಂಡಿ ಸೇತುವೆ ದಾಟಬೇಕಿದ್ದು, ಮಳೆಗಾಲದಲ್ಲಿ ಶಾಲೆಗೆ ಹೋಗುವ ಮಕ್ಕಳನ್ನು ದಾಟಿಸಿ, ಸಂಜೆ ಮತ್ತೆ ಕರೆದುಕೊಂಡು ಬರಬೇಕಿತ್ತು. ರೇಶನ್, ಆಸ್ಪತ್ರೆ ದೈನಿಕ ವ್ಯವಹಾರಕ್ಕೆ ಕಂಡ್ಲೂರಿಗೆ ಹೋಗದಿದ್ದರೆ ಮನೆ ನಡೆಯೋದಿಲ್ಲ. ಹೊಸ ಸೇತುವೆ ನಿರ್ಮಿಸಿ ಜನರ ನೆರವಿಗೆ ಬರಬೇಕು.
    -ಶಾರದಾ, ಕೃಷಿಕ ಮಹಿಳೆ ಕುಚ್ಚಟ್ಟು

    ಕುಚ್ಚಟ್ಟು, ಕುದ್ರು ಸಣ್ಣ ಮಳೆಗೂ ನೆರೆ ಬರುತ್ತಿದ್ದು, ಜೋರು ನೆರೆ ಬಂದರೆ ನಮಗೆ ಭಾರಿ ಕಷ್ಟ. ಹಿಂದಿನ ಶಾಸಕ ಗೋಪಾಲ ಪೂಜಾರಿ ಸಹಿತ ಹಲವಾರು ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದೆವು. ಪ್ರಸಕ್ತ ಶಾಸಕ ಸುಕುಮಾರ ಶೆಟ್ಟಿ ಸೇತುವೆ ಮಾಡಿಕೊಡುವ ಭರವಸೆ ನೀಡಿದ್ದಾರೆ. ಸೇತುವೆ ಕಡೆಗಣಿಸಿದರೆ ಮುಂದೆ ಬರುವ ಗ್ರಾಪಂ ಜಿಪಂ ಹಾಗೂ ತಾಪಂ ಚುನಾವಣೆ ಬಹಿಷ್ಕರಿಸುತ್ತೇವೆ.
    -ಮಹೇಶ್ ಪೂಜಾರಿ, ಕೃಷಿಕ ಕುಚ್ಚಟ್ಟು

    ಕಟ್ಟಿನಗುಂಡಿ ಸೇತುವೆ ಗುಲ್ವಾಡಿ ಗ್ರಾಮ ಪ್ರಮುಖ ಸಂಚಾರ ಸಂಪರ್ಕ. ಹತ್ತಾರು ಚುನಾವಣೆ, ನಾಲ್ಕಾರು ಶಾಸಕರು ಆಯ್ಕೆ ಆಗಿದ್ದನ್ನು ಕಂಡಿದ್ದು, ಸೇತುವೆ ಮಾಡಿಕೊಡುವ ಭರವಸೆ ನೀಡಿದ್ದು, ಬಿಟ್ಟರೆ ಮತ್ತೇನೂ ಆಗಿಲ್ಲ. ಕುಬ್ಜಾ ನದಿಗೆ ಕಿರು ಸೇತುವೆ ಜೊತೆ ನದಿ ತೀರದಲ್ಲಿ ರಸ್ತೆ ಮಾಡಿಕೊಡುವ ಮೂಲಕ ನಮ್ಮ ಸಂಕಷ್ಟಕ್ಕೊಂದು ಪರಿಹಾರ ನೀಡಬೇಕು.
    -ಕೃಷ್ಣಿ, ಹಿರಿಯ ಕೃಷಿಕ ಮಹಿಳೆ, ಕುಚ್ಚಟ್ಟು

    ಕಟ್ಟಿನಗುಂಡಿ ಸೇತುವೆ ಹಾಗೂ ಹೊಳೆ ಬದಿ ತಡೆಗೋಡೆ ನಿರ್ಮಿಸಿ ರಸ್ತೆ ನಿರ್ಮಾಣಕ್ಕೆ ದೊಡ್ಡ ಮಟ್ಟದ ಅನುದಾನ ಬೇಕಿದ್ದು, ಗ್ರಾಮ ಪಂಚಾಯಿತಿ ಮಾಡಲು ಅಸಾಧ್ಯ. ಸೇತುವೆ ಹಾಗೂ ರಸ್ತೆ ಅವಶ್ಯವಾಗಿದ್ದು, ಸೇತುವೆ ಹಾಗೂ ರಸ್ತೆ ನಿರ್ಮಾಣಕ್ಕೆ ಒತ್ತುಕೊಟ್ಟು ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯ ಕೈಗೊಂಡು ಸ್ಥಳೀಯ ಶಾಸಕರ ಹಾಗೂ ಸರ್ಕಾರ ಗಮನಕ್ಕೆ ತರಲಾಗುತ್ತದೆ.
    -ಗೌರಿ ಶ್ರೀಯಾನ್, ಅಧ್ಯಕ್ಷರು, ಕಾವ್ರಾಡಿ ಗ್ರಾಪಂ

    ಶಾಸಕರು ಬಗೆಹರಿಸುವರೆಂಬ ನಿರೀಕ್ಷೆ
    ಕಟ್ಟಿನಗುಂಡಿ ಸೇತುವೆ ಬೇಡಿಕೆ ಹಲವು ವರ್ಷಗಳದ್ದು. ಚುನಾವಣೆ ಸಂದರ್ಭ ಭರವಸೆ ನೀಡಿದ್ದರೂ ಸೇತುವೆಯೂ ಆಗಿಲ್ಲ, ರಸ್ತೆಯೂ ಆಗಿಲ್ಲ. ಇದರಿಂದ ಬೇಸತ್ತ ಜನ ವಿಧಾನಸಭಾ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದರು. ಸ್ಥಳಕ್ಕೆ ಬಂದಿದ್ದ ಬಿ.ಎಂ.ಸುಕುಮಾರ ಶೆಟ್ಟಿ ಗೆದ್ದರೆ ಸೇತುವೆ ಮಾಡಿಸುವ ಭರವಸೆ ನೀಡಿದ್ದರಿಂದ ಜನ ಅವರನ್ನು ಬೆಂಬಲಿಸಿದ್ದರು. ಈಗ ಅವರು ಆಯ್ಕೆ ಆಗಿದ್ದಾರೆ. ಅವರು ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಸೇತುವೆ ವಿಷಯದಲ್ಲಿ ಅವರು ಕ್ರಿಯಾಶೀಲರಾಗಿದ್ದು, ಸೇತುವೆ ಮಂಜೂರು ಮಾಡಿಸುವ ಭರವಸೆ ಇದೆ. ಸೇತುವೆ ಮಂಜೂರಾಗದಿದ್ದರೆ, ಮುಂದೆ ನಡೆಯುವ ಸ್ಥಳೀಯ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಸ್ಥಳಿಯರು ಎಚ್ಚರಿಸಿದ್ದಾರೆ. ಪರಿಸರ ನಿವಾಸಿಗಳು ಸೇತುವೆ ಕುರಿತು ಪ್ರಧಾನಿಗೂ ಪತ್ರ ಬರೆದಿದ್ದು, ಅದರ ಪರಿಣಾಮ ಸ್ಥಳಕ್ಕೆ ಅಧಿಕಾರಿಗಳು ಬಂದು ಹೋಗಿದ್ದು, ಸೇತುವೆ ಹೊಸ ಕನಸು ಹುಟ್ಟಿಕೊಂಡಿದೆ.-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts