More

    ಕಟ್ಟಿಗೆ ಮುಕ್ತವಾಗಲಿದೆ ರುದ್ರಭೂಮಿ

    ಅನ್ಸಾರ್ ಇನೋಳಿ ಉಳ್ಳಾಲ
    ಉಳ್ಳಾಲ ಭಾಗದ ಅತಿದೊಡ್ಡ ಹಿಂದು ರುದ್ರಭೂಮಿ ಶೀಘ್ರ ಕಟ್ಟಿಗೆ ಮುಕ್ತವಾಗಲಿದೆ. ಇಲ್ಲಿ ವಿದ್ಯುತ್ ಚಿತಾಗಾರ ಶೀಘ್ರ ಆಗಲಿದ್ದು, ಇದಕ್ಕೆ ಇನ್ಫೋಸಿಸ್ ಸಂಸ್ಥೆ ಸರ್ಕಾರದ ಜತೆ ಕೈಜೋಡಿಸಲಿದೆ.

    ಪ್ರಸ್ತುತ ಹೆಚ್ಚಿನ ಗ್ರಾಮಗಳಲ್ಲಿ ಹಿಂದು ರುದ್ರಭೂಮಿಗಳಿದ್ದರೂ ಚಿತಾಗಾರಗಳಿಗೆ ಶಾಶ್ವತ ಸಿಬ್ಬಂದಿ ಇಲ್ಲ. ಕೆಲವು ಶಿಥಿಲವಾಗಿವೆ. ಕೆಲವದರಲ್ಲಿ ಸ್ಥಳೀಯರೇ ಮೃತದೇಹ ಸಂಸ್ಕಾರದ ಜವಾಬ್ದಾರಿ ವಹಿಸಿದ್ದಾರೆ. ಚೆಂಬುಗುಡ್ಡೆ ರುದ್ರಭೂಮಿ ಪುರಾತನವಾಗಿದ್ದು, ಇಲ್ಲಿ ಶಾಶ್ವತ ಸಿಬ್ಬಂದಿ ಇದ್ದಾರೆ. ಇಲ್ಲಿ ಏಕಕಾಲಕ್ಕೆ ಮೂರು ಮೃತದೇಹಗಳ ದಹನಕ್ಕೆ ಅವಕಾಶ ಇದೆ. ಸಂಸ್ಕಾರಕ್ಕೂ ವಿಶಾಲ ಜಮೀನು ಇದೆ.

    ಇನ್ಫೋಸಿಸ್ ಅಧಿಕಾರಿಗಳು ಕಾರ್ಯಪ್ರವೃತ್ತ: ಉಳ್ಳಾಲದ ಅಭಿವೃದ್ಧಿ, ಜನಸಂಖ್ಯೆಗೆ ತಕ್ಕಂತೆ ಆಧುನಿಕ ಚಿತಾಗಾರ ಬೇಕೆಂಬ ಬೇಡಿಕೆ ಸಮಿತಿಯದ್ದು. ಅದಕ್ಕೆ ಸ್ಪಂದಿಸಿರುವ ಶಾಸಕರು, ಇನ್ಫೋಸಿಸ್ ಜತೆ ಚರ್ಚೆ ನಡೆಸಿದ್ದು ಫಲ ನೀಡಿದೆ. ಸರಿಸುಮಾರು 80 ಲಕ್ಷ ರೂ. ವೆಚ್ಚದ ಚಿತಾಗಾರ ನಿರ್ಮಿಸುವಂತೆ ಜಿಲ್ಲಾಧಿಕಾರಿ, ಇನ್ಫೋಸಿಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಅದರಂತೆ ಅಧಿಕಾರಿಗಳು ಸರ್ವೇ ಮಾಡಿದ್ದು, ಯಾವ ಮಾದರಿಯ ಚಿತಾಗಾರ ನಿರ್ಮಿಸಬೇಕು, ಎಷ್ಟು ಖರ್ಚು, ವಿನ್ಯಾಸ ಹೇಗೆ ಎಂಬ ಬಗ್ಗೆ ಮುಖ್ಯಸ್ಥರಿಗೆ ಮಾಹಿತಿ ನೀಡಲಿದ್ದು, ಅಲ್ಲಿಂದ ಹಸಿರು ನಿಶಾನೆ ಬಂದ ಬಳಿಕ ಕಾಮಗಾರಿ ಆರಂಭಿಸಲಿದ್ದಾರೆ. ಸದ್ಯಕ್ಕೆ ಬೋಳಾರದಲ್ಲಿ ಮಾತ್ರ ವಿದ್ಯುತ್ ಚಿತಾಗಾರವಿದ್ದು, ಚೆಂಬುಗುಡ್ಡೆಯಲ್ಲಿ ನಿರ್ಮಾಣವಾದರೆ ಮಂಗಳೂರಿನ ಆಸುಪಾಸಿನಲ್ಲಿ ಎರಡನೇ ವಿದ್ಯುತ್ ಚಿತಾಗಾರ ಎನಿಸಲಿದೆ.

    60 ಸೆಂಟ್ಸ್ ಸರ್ಕಾರಕ್ಕೇ ಹಸ್ತಾಂತರ: ಇಲ್ಲಿನ ಹಿಂದು ರುದ್ರಭೂಮಿಗೆ ಸುಮಾರು ಒಂದೂವರೆ ಎಕರೆ ಜಮೀನು ಹಿಂದಿನಿಂದಲೇ ಇದೆ. ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣ ಮತ್ತು ಎತ್ತರದ ಪ್ರದೇಶದಲ್ಲಿ ಬೇರೆಲ್ಲೂ ರುದ್ರಭೂಮಿ ಜಮೀನು ಇಲ್ಲ. ಉಳ್ಳಾಲದ ಆಸುಪಾಸು ಬೃಹತ್ ಟ್ಯಾಂಕ್ ನಿರ್ಮಾಣಕ್ಕೆ ಜಮೀನಿನ ಸಮಸ್ಯೆ ಎದುರಾದಾಗ ಸಿಕ್ಕಿದ್ದು ಚೆಂಬುಗುಡ್ಡೆಯ ಹಿಂದು ರುದ್ರಭೂಮಿ. ಜಮೀನು ನೀಡಲು ಸಮಿತಿ ಒಪ್ಪಿದ್ದರಿಂದ 50 ಸೆಂಟ್ಸ್ ಜಮೀನಿನಲ್ಲಿ 70 ಲಕ್ಷ ಲೀಟರ್‌ನ ಬೃಹತ್ ಟ್ಯಾಂಕ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಇಲ್ಲಿನ 10 ಸೆಂಟ್ಸ್ ಜಮೀನಿನಲ್ಲಿ ನೆಲದಡಿಯ ಟ್ಯಾಂಕ್ ಕೂಡ ಇದೆ.

    ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಜಮೀನು ನೀಡುವಂತೆ ಸಭೆ ನಡೆಸಿದಾಗ ವಿದ್ಯುತ್ ಚಿತಾಗಾರದ ಬೇಡಿಕೆ ಬಂದಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿ, ಇನ್ಫೋಸಿಸ್‌ಗೆ ಮನವಿ ಮಾಡಲಾಗಿತ್ತು. ಅದರಂತೆ ಇನ್ಫೋಸಿಸ್‌ನಿಂದ 80 ಲಕ್ಷದಿಂದ ಕೋಟಿ ರೂ. ವೆಚ್ಚದ ವಿದ್ಯುತ್ ಚಿತಾಗಾರ ನಿರ್ಮಾಣವಾಗಲಿದೆ.
    ಯು.ಟಿ.ಖಾದರ್, ಶಾಸಕ 

    ಉಳ್ಳಾಲ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದ್ದು ಜನಸಂಖ್ಯೆಯೂ ಹೆಚ್ಚುತ್ತಿದೆ. ನೀರಿನ ಸಮಸ್ಯೆ ಪರಿಹಾರಕ್ಕಾಗಿ ಎರಡು ಟ್ಯಾಂಕ್‌ಗಳಿಗೆ ರುದ್ರಭೂಮಿಯ 60 ಸೆಂಟ್ಸ್ ಜಮೀನು ಬಿಟ್ಟುಕೊಡಲಾಗಿದೆ. ಆಧುನಿಕ ಮಾದರಿಯ ವಿದ್ಯುತ್ ಚಿತಾಗಾರ ನಿರ್ಮಿಸುವಂತೆ ಹಿಂದೆಯೇ ಶಾಸಕರು ಮತ್ತು ಜಿಲ್ಲಾಧಿಕಾರಿಗೆ ಬೇಡಿಕೆ ಸಲ್ಲಿಸಲಾಗಿತ್ತು.
    ಚಂದ್ರಹಾಸ ಉಳ್ಳಾಲ್ ಅಧ್ಯಕ್ಷ, ಹಿಂದು ರುದ್ರಭೂಮಿ ನಿರ್ವಹಣಾ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts