More

    ಕಗ್ಗದ ಬೆಳಕು| ಹರಿದರಷ್ಟೇ ನದಿಗೆ ಬದುಕು…

    ಕಗ್ಗದ ಬೆಳಕು| ಹರಿದರಷ್ಟೇ ನದಿಗೆ ಬದುಕು...

    ಜಗ ಬೆಳೆದು ಚಿಗುರುತಿರೆ ಶಾಸ್ತ್ರ ಕರಟಿರಲಹುದೆ? |

    ನಿಗಮ ಸಂತತಿಗೆ ಸಂತತಿಯಾಗದಿಹುದೆ? ||

    ಬಗೆಬಗೆಯ ಜೀವಸತ್ತ್ವವಿಕಾಸವಾಗುತಿರ- |

    ಲೊಗೆವುದೈ ವಿಜ್ಞಾನ – ಮಂಕುತಿಮ್ಮ ||

    ‘ಜಗತ್ತು ಬೆಳೆದು ಚಿಗುರುತ್ತಿರಲು ಶಾಸ್ತ್ರವು ಕರಟಿರಲು ಸಾಧ್ಯವೆ? ವೇದಗಳಿಂದ ಹೊಸಹುಟ್ಟು ಆಗದೆ ಇರಬಹುದೆ? ಬಗೆಬಗೆಯ ಜೀವಸತ್ತ್ವಗಳ ವಿಕಾಸವು ಆಗುತ್ತಿರಲು ವಿಶೇಷ ಜ್ಞಾನವು ಹುಟ್ಟಿಕೊಳ್ಳುತ್ತದೆ’ ಎನ್ನುತ್ತದೆ ಈ ಕಗ್ಗ.

    ಎರಡು ವರ್ಷಗಳ ಹಿಂದೆ ನೋಡಿದ್ದ ಊರನ್ನು ಮತ್ತೊಮ್ಮೆ ಹೋದರೆ ಎಷ್ಟೋ ಬದಲಾವಣೆಗಳನ್ನು ಗಮನಿಸುತ್ತೇವೆ. ದಿನಗಳು ಸರಿದಂತೆ ಜನರ ಜೀವನಶೈಲಿಯೂ ಸದ್ದಿಲ್ಲದೆ ಬದಲಾಗುತ್ತದೆ. ಜಗತ್ತು ಪರಸ್ಪರ ಹತ್ತಿರವಾದಂತೆ ವಿಸ್ತಾರವಾಗುತ್ತದೆ. ಒಂದರ ಮೇಲೆ ಇನ್ನೊಂದು ಭಾಷೆ, ಸಂಸ್ಕೃತಿಗಳು ಪ್ರಭಾವ ಬೀರುತ್ತವೆ. ಸತ್ತ್ವಯುತವಾದ್ದು ಉಳಿಯುತ್ತದೆ, ಆಕರ್ಷಕವಾಗಿರುವವು ಒಂದಷ್ಟು ಕಾಲ ಪ್ರಚಲಿತದಲ್ಲಿದ್ದು ಮರೆಯಾಗುತ್ತವೆ. ಜಗತ್ತು ಬೆಳೆಯುತ್ತಿದ್ದಂತೆ ಜನಜೀವನದ ನೀತಿ-ನಿಯಮಗಳು, ಧರ್ವಚರಣೆಗಳು ಬದಲಾಗದಿರಲು ಸಾಧ್ಯವಿಲ್ಲ. ಅನ್ಯ ಸಿದ್ಧಾಂತಗಳ, ಜೀವನ ಮೌಲ್ಯಗಳ ಪ್ರಭಾವಕ್ಕೆ ಒಳಗಾಗಿ ಧರ್ವಚರಣೆಗಳಲ್ಲೂ ವ್ಯತ್ಯಾಸಗಳಾಗುವುದು ಸ್ವಾಭಾವಿಕ. ಸಮಾಜವನ್ನು ಆಳುವ ಶಾಸ್ತ್ರ-ನೀತಿಗಳು ಅಂತೆಯೇ ಉಳಿಯುವುದಿಲ್ಲಲ್ಲ. ಅವುಗಳೂ ಹೊಸತನವನ್ನು ಮೇಳೈಸಿಕೊಂಡು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಲು ಬಲಗೊಳ್ಳುತ್ತವೆ.

    ವೇದಗಳು ಜೀವನದರ್ಥವನ್ನು, ಸಾರ್ಥಕತೆಯ ಹಾದಿಯನ್ನು ತೋರುವ ಅಮೂಲ್ಯ ಸನಾತನ ಕೃತಿಗಳು. ವೇದದಿಂದ ಪ್ರಭಾವಿತರಾಗಿ ಅದರ ಸಾರವನ್ನು ಪಡೆದು ಹೊಸ ಕಾಣ್ಕೆಯನ್ನು ರೂಪಿಸುವ ಮೂಲಕ ಅನೇಕ ಹೊಸ ಮಾರ್ಗಗಳ ನಿರ್ವಣವಾಗಿದೆ. ಹಲವರು ನಡೆಯತೊಡಗಿದ ಮಾರ್ಗ ಕವಲೊಡೆದು ಇನ್ನೊಂದಾಗುವುದೂ ಉಂಟು. ಅವು ಪ್ರತಿಪಾದಿಸುವ ತತ್ತ್ವ-ಸಿದ್ಧಾಂತಗಳಲ್ಲಿ ವ್ಯತ್ಯಾಸವಿದ್ದರೂ ಉದ್ದೇಶ ಒಂದೇ ಆಗಿರುತ್ತದೆ. ಹಲವು ಹಾದಿಗಳು ಬೇರೆಬೇರೆಯಾಗಿಯೇ ಉಳಿದರೂ ಕೊನೆಗೆ ಸೇರುವ ತಾಣವು ಒಂದೇ. ಪುಟ್ಟ ಹನಿ ಇನ್ನೊಂದು ಹನಿಯೊಡನೆ ಸೇರಿ ಝುರಿಯಾಗಿ, ತೊರೆಯಾಗಿ, ನದಿಯಾಗಿ ವಿಶಾಲವಾಗಿ ಹರಿಯುತ್ತ ಸಾಗುತ್ತದೆ. ಕಾಲ ಕಳೆದಂತೆ ಸಹಜವಾಗಿಯೇ ನದಿಯ ಸ್ವರೂಪದಲ್ಲಿ ಬದಲಾವಣೆಗಳಾಗುತ್ತವೆ. ಹೊಸ ಝುರಿಗಳು ಸೇರಿಕೊಳ್ಳಬಹುದು, ವಿಶಾಲವಾಗಿ ಹರಿಯಬಹುದು. ಉಪನದಿ ಹುಟ್ಟಬಹುದು. ಏನೇ ಆದರೂ ಅವೆಲ್ಲದರ ಗಮ್ಯ ಸಾಗರವೇ ಆಗಿರುತ್ತದೆ. ಹೀಗಾಗದೆ ಪುಟ್ಟ ಕೊಳದಲ್ಲಿ ನಿಂತ ನೀರು ಕೊಳೆತು ನಾರುತ್ತದೆ.

    ಮರ-ಗಿಡಗಳು ದಿನದಿನವೂ ಚಿಗುರುತ್ತ, ರೆಂಬೆ-ಕೊಂಬೆಗಳನ್ನು ಬೆಳೆಸಿಕೊಂಡು ವಿಶಾಲವಾಗಿ ಬೆಳೆಯುತ್ತವೆ. ಅಂತೆಯೇ ಹಳೆಯ ಆಚಾರ-ವಿಚಾರಗಳ ನೆಲೆಯಲ್ಲಿ ಹೊಸದು ಪ್ರಕಟವಾಗುತ್ತದೆ. ಇದು ಇದ್ದಕ್ಕಿದ್ದಂತೆ ನಡೆಯುವ ಪ್ರಕ್ರಿಯೆಯಲ್ಲ. ಜೀವಸತ್ತ್ವದ ವಿಕಸನವು ನಿಧಾನವಾಗಿ ಆದರೆ ನಿರಂತರವಾಗಿ ನಡೆಯುತ್ತಿರುತ್ತದೆ. ಪ್ರಕೃತಿಯು ಮತ್ತೆಮತ್ತೆ ಹೊಸತನದಿಂದ ಕಂಗೊಳಿಸುತ್ತಾಳೆ. ಜನಜೀವನದಲ್ಲೂ ಹೊಸ ವಿಚಾರಧಾರೆಗಳು, ಚಿಂತನೆಗಳು ಕಾಣಿಸಿಕೊಳ್ಳುತ್ತದೆ. ಹೀಗೆ ಜೀವನವು ನಿಂತ ನೀರಾಗದೆ ಬದಲಾವಣೆಯನ್ನು ಒಪ್ಪಿಕೊಳ್ಳುತ್ತ, ಸತ್ತ್ವಯುತವಾದುದನ್ನು ಸ್ವೀಕರಿಸುತ್ತ ಹೋಗುವುದರಿಂದ ವಿಶೇಷ ಜ್ಞಾನ ಪ್ರಾಪ್ತವಾಗುತ್ತದೆ. ಬೆಟ್ಟದೆತ್ತರದಲ್ಲಿರುವ ಗುಡಿಯನ್ನು ಕಾಣಲು ಹಲವು ಹಾದಿಗಳಿರುತ್ತವೆ. ಮುಖ್ಯ ಹಾದಿಯೇ ಕವಲೊಡೆದು ಇನ್ನೊಂದಾಗಿರುವುದೂ ಉಂಟು. ಆದರೆ ಎಲ್ಲ ಹಾದಿಗಳು ಕೊನೆಗೊಳ್ಳುವದು ಆ ಗುಡಿಯನ್ನು ಸೇರಿದಾಗಲೇ. ಜೀವಸತ್ತ್ವದ ವಿಕಸನ, ಆಯ್ಕೆ ಮಾಡಿಕೊಳ್ಳುವ ಸಿದ್ಧಾಂತ, ಅನುಸರಿಸುವ ಮಾರ್ಗಗಳು ವಿಭಿನ್ನವಾಗಿದ್ದರೂ ಅವೆಲ್ಲದರ ಗುರಿಯು ಒಂದೇ. ಈ ನಾವೀನ್ಯತೆಯ ಶೋಧನೆಯೇ ಜೀವನವನ್ನು ಕ್ರಿಯಾಶೀಲವಾಗಿಸುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts