More

    ಕಂದಾಯ ಇಲಾಖೆ ಆದೇಶ ಹಿಂಪಡೆಯಲು ಆಗ್ರಹ

    ಶಿರಸಿ: ತಾಲೂಕಿನ ನಾರಾಯಣಗುರುನಗರದ ಸರ್ವೆ ನಂಬರ್ 53ರ ನಿವೇಶನಗಳು ಡಿಸ್ ಫಾರೆಸ್ಟ್ ಆಗಿಲ್ಲ ಎಂಬ ಕಾರಣ ನೀಡಿ ಯಾವುದೇ ವ್ಯವಹಾರ ನಡೆಸದಂತೆ ಕಂದಾಯ ಇಲಾಖೆಯಿಂದ ಹೊರಡಿಸಲಾಗಿರುವ ಆದೇಶವನ್ನು ಹಿಂಪಡೆಯಬೇಕು ಎಂದು ನಾರಾಯಣಗುರುನಗರ ಹಿತರಕ್ಷಣಾ ಸಮಿತಿಯಿಂದ ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

    ನಗರದ ವಿಕಾಸಾಶ್ರಮ ಬೈಲಿನಿಂದ ಉಪವಿಭಾಗಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ಮೂಲಕ ತೆರಳಿದ ಪ್ರತಿಭಟನಾಕಾರರು ಬಳಿಕ ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ ಅವರಿಗೆ ಮನವಿ ಸಲ್ಲಿಸಿದರು.

    5 ದಶಕಗಳಿಂದ ನಾರಾಯಣಗುರು ನಗರದಲ್ಲಿ ಜನರು ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಅಲ್ಲದೆ, ಕಂದಾಯ ಇಲಾಖೆಯಿಂದಲೇ ಇಲ್ಲಿನ ನಿವೇಶನಗಳಿಗೆ ಪಟ್ಟಾ ನೀಡಿ ಹಂಚಿಕೆ ಮಾಡಲಾಗಿದೆ. ಆದರೆ, ಸುಮಾರು ಒಂದೂವರೆ ವರ್ಷದ ಹಿಂದೆ ಇದ್ದಕ್ಕಿದ್ದಂತೆ ಇಲ್ಲಿನ ನಿವೇಶನಗಳು ಡಿ ಫಾರೆಸ್ಟ್ ಆಗಿಲ್ಲದ ಕಾರಣ ನಿವೇಶನಗಳ ಮಾರಾಟ ಕೊಳ್ಳುವಿಕೆ, ಬ್ಯಾಂಕ್ ವ್ಯವಹಾರ ಇತ್ಯಾದಿಯನ್ನು ನಿಷೇಧಿಸಿ ತಹಸೀಲ್ದಾರರು ಆದೇಶ ನೀಡಿದ್ದಾರೆ. ಇದರಿಂದ ನಿವೇಶನದ ಮೇಲೆ ಲಕ್ಷಾಂತರ ರೂ. ಸಾಲ ಮಾಡಿ ಮನೆ ಕಟ್ಟಿಕೊಂಡವರಿಗೆ, ಇದೊಂದೇ ಸಣ್ಣ ಆಸ್ತಿಯನ್ನು ನಂಬಿ ಬದುಕುತ್ತಿರುವ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸಂಕಷ್ಟವಾಗಿದೆ. ಹಾಗಾಗಿ ತಹಸೀಲ್ದಾರ್ ಹೊರಡಿಸಿರುವ ಆದೇಶವನ್ನು ಹಿಂಪಡೆಯಲು ಕೂಡಲೇ ಕ್ರಮ ವಹಿಸಬೇಕು. ಒಂದೊಮ್ಮೆ ನಮ್ಮ ಬೇಡಿಕೆ ಈಡೇರಿಸಲು ಶೀಘ್ರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯನ್ನು ತೀವೃಗೊಳಿಸಲಾಗುವುದು ಮತ್ತು ಬರುವ ಗ್ರಾಮ ಪಂಚಾಯಿತಿ ಚುನಾವಣಾ ಮತದಾನದಿಂದ ನಾರಾಯಣಗುರುನಗರ ಜನತೆ ಬಹಿಷ್ಕರಿಸಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

    ಸಮಿತಿ ಅಧ್ಯಕ್ಷ ಗೌರೀಶ ನಾಯ್ಕ, ಪ್ರದಾನಕಾರ್ಯದರ್ಶಿ ಉಮೇಶ ಬಂಕಾಪುರ, ಜೀವನ ಪೈ, ನಾಗರಾಜ ಭುಜಂಗ ಶೆಟ್ಟಿ, ರಾಮಾ ಪೂಜಾರಿ, ಯೋಗೀಶ ನಾಯ್ಕ, ಸದಾನಂದ ಗೌಡರ, ಸುನಂದಾ ಗೌಡ, ನವೀನ ಶೆಟ್ಟಿ, ನಾಗರಾಜ ಶೆಟ್ಟಿ, ಪ್ರದೀಪ ಮೈಸೂರು, ಶಾಂತಲಾ ಶೆಟ್ಟಿ ಸೇರಿದಂತೆ 500ಕ್ಕೂ ಹೆಚ್ಚು ಸ್ಥಳೀಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts