More

    ಔಷಧ ಸಿಂಪಡಿಸುವಾಗ ಇರಲಿ ಎಚ್ಚರ

    ಬೀದರ್: ಉದ್ದು, ಹೆಸರು ಮತ್ತು ಸೋಯಾಬೀನ್ ಬೆಳೆಗಳಿಗೆ ಕೀಟ, ರೋಗ ಬಾಧೆ ತಡೆಗಟ್ಟಲು ಕೀಟನಾಶಕ ಸಿಂಪಡಿಸುವಾಗ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದ ಕಾರಣ ಜಿಲ್ಲೆಯ ಕೆಲ ರೈತರು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ರೈತರು ಮುನ್ನೆಚ್ಚರಿಕೆ ವಹಿಸುವಂತೆ ಜಂಟಿ ಕೃಷಿ ನಿರ್ದೇಶಕ ಸಿ.ವಿದ್ಯಾನಂದ ಕೋರಿದ್ದಾರೆ.
    ಬೆಳೆಗೆ ಶಿಫಾರಸು ಮಾಡಿದ ಔಷಧ ಮಾತ್ರ ಸಿಂಪಡಿಸಬೇಕು. ಒಂದಕ್ಕಿಂತ ಹೆಚ್ಚು ಔಷಧ ಮಿಶ್ರಣ ಮಾಡುವಾಗ ಕೃಷಿ ತಜ್ಞರ ಸಲಹೆ ಪಡೆಯಬೇಕು. ಔಷಧ ಬಳಸುವಾಗ ಕೈಗಳು ಒಣಗಿದ್ದು, ಯಾವುದೇ ಗಾಯಗಳಿರಬಾರದು. ಹರಳು ರೂಪದ ಔಷಧ ಸಿಂಪಡಣೆ ಮಾಡುವ ಮುನ್ನ 36-48 ಗಂಟೆ ತೆಳ್ಳಗೆ ನೀರು ನಿಲ್ಲುವಂತೆ ನೋಡಿಕೊಳ್ಳಬೇಕು. ಕೀಟ ಮತ್ತು ರೋಗ ಬಾಧೆ ಕಂಡಾಗ ಮಾತ್ರ ಸಸ್ಯ ಸಂರಕ್ಷಣಾ ಕ್ರಮ ಅನುಸರಿಸಬೇಕು. ಗಾಳಿ ವಿರುದ್ಧ ದಿಕ್ಕಿನಲ್ಲಿ ಸಿಂಪಡಣೆ ಮಾಡಬಾರದು. ಗಾಳಿ ಹೆಚ್ಚಾಗಿದ್ದರೂ ಸಿಂಪಡಣೆ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.
    ಔಷಧ ಸಿಂಪಡಣೆ ಬೆಳಗ್ಗೆ ಮತ್ತು ಸಂಜೆ ಮಾಡುವುದು ಉತ್ತಮ. ಸಿಂಪಡಣೆ ವೇಳೆ ಕನ್ನಡಕ, ಮುಖವಾಡ, ಕೈಚೀಲ ಧರಿಸಿಕೊಳ್ಳಬೇಕು ಹಾಗೂ ಯಾವುದೇ ತರಹದ ತಿಂಡಿ, ತಿನಿಸು ಸೇವಿಸಬಾರದು. ಧೂಮಪಾನ, ತಂಬಾಕು ಸೇವನೆ ಮಾಡಬಾರದು. ಸಿಂಪಡಣೆಯಾದ ತಕ್ಷಣ ಉಪಕರಣಗಳನ್ನು ತೊಳೆದು ಒಣಗಿಸಿ ಇಡಬೇಕು. ಸಿಂಪಡಣೆ ವೇಳೆ ಧರಿಸಿದ ಬಟ್ಟೆ ಬದಲಾಯಿಸಬೇಕು ಮತ್ತು ಕೈ,ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಂಡ ನಂತರವೇ ಊಟ, ಉಪಚಾರ ಮಾಡಬೇಕು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts