More

    ಔಷಧ ಸಿಂಪಡಣೆಗೆ ಡ್ರೋನ್

    ಸಿದ್ದಾಪುರ: ಅಡಕೆ ಬೆಳೆಗಾರರಿಗೆ ಮಳೆಗಾಲ ಬಂತೆಂದರೆ ಅವ್ಯಕ್ತ ಆತಂಕ ಆರಂಭವಾಗುತ್ತದೆ. ಕಾರಣ, ಅಡಕೆಗೆ ಬರುವ ಕೊಳೆ ರೋಗ. ಅಲ್ಲದೆ, ಅದಕ್ಕೆ ಔಷಧ ಸಿಂಪಡಣೆ ಮಾಡುವ ಕೆಲಸಗಾರರ ಕೊರತೆ.

    ಈ ಸಮಸ್ಯೆಯನ್ನು ಬಹಳ ವರ್ಷದಿಂದ ಗಮನಿಸುತ್ತ ಬಂದಿರುವ ಯುವಕನೋರ್ವ ಮರವನ್ನು ಹತ್ತದೇ ಔಷಧ ಸಿಂಪಡಣೆ ಮಾಡುವ ಉಪಾಯವನ್ನು ಕಂಡು ಹಿಡಿದಿದ್ದಾರೆ. ಡ್ರೋನ್ ಮೂಲಕ ಔಷಧ ಸಿಂಪಡಣೆ ಮಾಡುವುದೇ ಈ ಹೊಸ ತಂತ್ರ.

    ಹೌದು, ತಾಲೂಕಿನ ಚಟ್ನಳ್ಳಿ ಊರಿನ ಕೃಷಿಕರಾದ ದತ್ತಾತ್ರೇಯ ಭಟ್ಟ ಅವರ ಪುತ್ರ ವಸಂತ ಭಟ್ಟ ಈ ತಂತ್ರಜ್ಞಾನವನ್ನು ಕೃಷಿ ಕ್ಷೇತ್ರಕ್ಕೆ ತಂದವರು. ವಸಂತ ಓದಿರುವುದು ಕೇವಲ ದ್ವಿತೀಯ ಪಿಯುಸಿ! ನಂತರದ ದಿನಗಳಲ್ಲಿ ಬೆಂಗಳೂರು ಸೇರಿ ಸಾಫ್ಟ್​ವೇರ್ ಅಭಿವೃದ್ಧಿ ಮತ್ತು ವೆಬ್​ಸೈಟ್ ತಯಾರಿಕೆಯನ್ನು ಕರಗತ ಮಾಡಿಕೊಂಡರು. 3ಥೀ ಎಂಬ ಕಂಪನಿಯನ್ನೂ ಆರಂಭಿಸಿದರು. ಈ ಸಮಯದಲ್ಲಿ ವಸಂತ ಅವರ ಮನಸ್ಸಿಗೆ ಬಂದಿದ್ದು, ತಮ್ಮ ನೆಲದ ಸಮಸ್ಯೆಯಾದ ಅಡಕೆ ಕೊಳೆರೋಗಕ್ಕೆ ಔಷಧ ಸಿಂಪಡೆಣೆಯ ಸುಲಭದ ವಿಧಾನವನ್ನು ಕಂಡು ಹಿಡಿಯಬೇಕು ಎಂಬುದು. ಆಗ ಹೊಳೆದಿದ್ದು, ಡ್ರೋನ್ ಮೂಲಕ ಔಷಧ ಸಿಂಪಡಣೆ ಮಾಡುವುದು. ಊರಿನವರ ಒತ್ತಾಯದ ಮೇರೆಗೆ ಪ್ರಾಯೋಗಿಕವಾಗಿಯೂ ಔಷಧ ಸಿಂಪಡಣೆ ಮಾಡಿ ಯಶಸ್ವಿಯಾದರು.

    ಡೋನ್ ಕೆಲಸ ಹೇಗೆ?: ಡ್ರೋನ್ ಯಂತ್ರಕ್ಕೆ 10 ಲೀಟರ್ ಟ್ಯಾಂಕ್ ಅಳವಡಿಕೆ ಮಾಡಲಾಗಿದೆ. ಅಲ್ಲದೆ, ಪುಟ್ಟ ಪಂಪ್ ಕೂಡ ಇದೆ. ಡ್ರೋನ್​ನ ಎಲ್ಲ ರೆಕ್ಕೆಗಳಲ್ಲೂ ಸಿಂಪಡಣೆಯಾಗುವ ಸಾಧನ ಜೋಡಿಸಲಾಗಿದೆ. ಇದು ಬ್ಯಾಟರಿ ಮೂಲಕ ಚಾಲನೆಯಾಗುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ 10 ತಾಸು ಡ್ರೋನ್ ಅನ್ನು ಚಲಾಯಿಸಬಹುದಾಗಿದೆ. ಒಮ್ಮೆ ಔಷಧವನ್ನು ಟ್ಯಾಂಕಿನೊಳಗೆ ಹಾಕಿ ಡ್ರೋನ್ ಅನ್ನು ಮೇಲೆ ಹಾರಿಸಿ ಬಿಟ್ಟ ನಂತರ ಕೆಳಗಿನಿಂದ ರೀಮೊಟ್ ಮೂಲಕ ನಿಯಂತ್ರಣ ಮಾಡಲಾಗುತ್ತದೆ. 1 ಎಕರೆ ಅಡಕೆ ತೋಟಕ್ಕೆ ಅರ್ಧ ಗಂಟೆಯಲ್ಲಿ ಔಷಧ ಸಿಂಪಡಿಸಬಹುದು. ಈ ವ್ಯವಸ್ಥೆಯಿಂದ ಕೃಷಿಕರಿಗೆ ಕೂಲಿ, ಸಮಯ, ಹಣ, ಔಷಧದ ಪ್ರಮಾಣ ಹಾಗೂ ಅದಕ್ಕೆ ಸೇರಿಸುವ ನೀರಿನ ಪ್ರಮಾಣವೂ ಕಡಿಮೆ ಇರುತ್ತದೆ.

    ಸಂಘ- ಸಂಸ್ಥೆಗಳು ಕೈಜೋಡಿಸಬೇಕು
    ಡ್ರೋನ್ ಔಷಧ ಸಿಂಪಡಣೆ ಯಂತ್ರದ ಬೆಲೆ ಸುಮಾರು 10 – 12 ಲಕ್ಷ ರೂಪಾಯಿ ಇದೆ. ಅಲ್ಲದೆ, ಈ ಯಂತ್ರಕ್ಕೆ ವಿಮೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಇದನ್ನು ರೈತನೊಬ್ಬ ಖರೀದಿ ಮಾಡಲು ಕಷ್ಟ ಸಾಧ್ಯ. ಆದರೆ, ಅಡಕೆ ಬೆಳೆಯುವ ಪ್ರದೇಶದಲ್ಲಿ ಇರುವ ಸಹಕಾರಿ ಸಂಘಗಳು ಖರೀದಿ ಮಾಡಿ ಬಾಡಿಗೆಗೆ ನೀಡಬಹುದು. ಇದರಿಂದ ಹಲವು ರೈತರಿಗೆ, ಸಣ್ಣ ಹಿಡುವಳಿದಾರರಿಗೆ ಅನುಕೂಲವಾಗುತ್ತದೆ. ಡ್ರೋನ್ ಬಳಕೆ ಮೂಲಕ ಔಷಧ ಸಿಂಪಡಿಸುವುದರಿಂದ ಹೆಚ್ಚು ಅನುಕೂಲವೂ ಇದೆ. ಹೆಚ್ಚಿನ ಮಾಹಿತಿಗಾಗಿ ಡಿಡಿಡಿ.3ಠಿಜಜಿ.ಟಞ ಅಥವಾ ವಸಂತ ಭಟ್ಟ. 3ಥೀ ರೊಬೋಟಿಕ್ ಕಂಪನಿ ಬೆಂಗಳೂರು ಇವರನ್ನು ಸಂರ್ಪಸಬಹುದು.

    ಎಂಟು ರಾಜ್ಯದಲ್ಲಿ ಬಳಕೆ: ಈಗಾಗಲೇ ವಸಂತ ಭಟ್ಟ ಅವರು ಎಂಟು ತಂಡ ರಚಿಸಿಕೊಂಡಿದ್ದಾರೆ. ಈ ತಂಡವು ಗುಜರಾತ್, ರಾಜಸ್ಥಾನ, ಹರಿಯಾಣ, ಪಂಜಾಬ, ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ ರಾಜ್ಯದಲ್ಲಿ ಡ್ರೋನ್ ಮೂಲಕ ವಿವಿಧ ಬೆಳೆಗಳಿಗೆ ಔಷಧ ಸಿಂಪರಣೆ ಮಾಡುತ್ತಿವೆ. ಅಲ್ಲಿನ ರೈತರಿಂದ ಡ್ರೋನ್ ಮೂಲಕ ಔಷಧ ಸಿಂಪರಣೆ ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಡ್ರೋನ್ ಮೂಲಕ ಬೋಡೋ ದ್ರಾವಣ ಅಥವಾ ಬಯೋಫೈಟ್ ಸಿಂಪಡಣೆ ಮಾಡುವುದು ಅಡಕೆ ಬೆಳೆಗಾರರಿಗೆ ಅನುಕೂಲವಾಗಿದೆ. ಕೇವಲ ಕೊಳೆ ರೋಗ ನಿಯಂತ್ರಣ ಮಾತ್ರ ಅಲ್ಲ. ಸಮಯ, ಹಣ, ಕೂಲಿಯಲ್ಲಿಯೂ ಉಳಿತಾಯವಾಗುತ್ತದೆ.
    | ಉಮಾಪತಿ ಹೆಗಡೆ ಸಣ್ಣಮನೆ ಅಡಕೆ ಬೆಳೆಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts