More

    ಓಡಾಟ ನಡೆಸಿದ 211 ಬಸ್​ಗಳು

    ಹಾವೇರಿ: ಕರೊನಾ ಸೋಂಕು ಹರಡದಂತೆ ತಡೆಯಲು ಸರ್ಕಾರ ಘೋಷಿಸಿದ್ದ ಲಾಕ್​ಡೌನ್ 3.0 ಅನ್ವಯ ಮೇ 4ರಿಂದ ಜಿಲ್ಲೆಯೊಳಗೆ ಆರಂಭಗೊಂಡಿದ್ದ ಬಸ್ ಸಂಚಾರ, ಲಾಕ್​ಡೌನ್ 4.0ರ ಅನ್ವಯ ಮಂಗಳವಾರದಿಂದ ಅಂತರ್ ಜಿಲ್ಲೆಗಳಿಗೂ ಸಂಚಾರ ವಿಸ್ತರಣೆಗೊಂಡಿತು.

    ಕರೊನಾ ಸೋಂಕು ನಿಯಂತ್ರಣಕ್ಕಾಗಿ ಮಾರ್ಚ್ 22ರಿಂದಲೇ ಸಂಪೂರ್ಣವಾಗಿ ಡಿಪೊ ಸೇರಿದ್ದ ಸಾರಿಗೆ ಸಂಸ್ಥೆಯ ಬಸ್​ಗಳು ಮೇ 4ರಿಂದ ಅಲ್ಪ ಪ್ರಮಾಣದಲ್ಲಿ ಅಂದರೆ 78 ಬಸ್​ಗಳು ರಸ್ತೆಗಿಳಿದಿದ್ದವು. ಮಂಗಳವಾರದಿಂದ ಅಂತರ್ ಜಿಲ್ಲೆಗಳ ಸಂಚಾರಕ್ಕೆ ಅನುಮತಿ ದೊರೆತಿದ್ದರಿಂದ ಜಿಲ್ಲೆಯಿಂದ ಬೆಂಗಳೂರು, ದಾವಣಗೆರೆ, ಮೈಸೂರ, ಹುಬ್ಬಳ್ಳಿ, ಗದಗ, ಕಲಬುರಗಿ, ದಕ್ಷಿಣಕನ್ನಡ, ಬಳ್ಳಾರಿ ಜಿಲ್ಲೆಗಳಿಗೆ ಬಸ್​ಗಳು ಸಂಚಾರ ನಡೆಸಿದವು. ಅದೇ ರೀತಿ ಬೇರೆ ಜಿಲ್ಲೆಗಳಿಂದಲೂ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಿಗೆ ಬಸ್ ಬಂದಿವೆ.

    ರಸ್ತೆಗಿಳಿದ 211 ಬಸ್: ಮಂಗಳವಾರ ಒಟ್ಟು 211 ಬಸ್​ಗಳು ಜಿಲ್ಲೆಯಲ್ಲಿ ಆರಂಭಗೊಂಡವು. ಸ್ಥಳೀಯವಾಗಿ 70 ಹಾಗೂ ಹೊರ ಜಿಲ್ಲೆಗಳಿಗೆ 140 ಎಕ್ಸ್​ಪ್ರೆಸ್ ಬಸ್​ಗಳು ಸಂಚರಿಸಿದವು. ಬೆಳಗ್ಗೆ 10 ಗಂಟೆಯೊಳಗೆ ಮಾತ್ರ ಬೆಂಗಳೂರು, ಕಲಬುರಗಿ ಹಾಗೂ ದೂರದ ಮಾರ್ಗಕ್ಕೆ ಬಸ್ ಬಿಡಲಾಯಿತು. 7 ಗಂಟೆ ಬಳಿಕ ಸಂಚಾರಕ್ಕೆ ನಿರ್ಬಂಧವಿರುವುದರಿಂದ ನಿಗದಿತ ಅವಧಿ ಮೀರದಂತೆ ಲೆಕ್ಕಾಚಾರ ಮಾಡಿ ಬಸ್ ಬಿಡಲಾಯಿತು. ಹಾನಗಲ್ಲ, ಹಿರೇಕೆರೂರ ತಾಲೂಕಿನಲ್ಲಿ ಬಸ್ ಸಂಚಾರಕ್ಕೆ ಪ್ರಯಾಣಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ತಾಲೂಕುಗಳಿಂದ ಹುಬ್ಬಳ್ಳಿ, ಗದಗ, ದಾವಣಗೆರೆ ಕಡೆ ಹೋಗುವ ಬಸ್​ಗಳಿಗೆ ಜನ ಹತ್ತಲೇ ಇಲ್ಲ. ಆದರೆ, ಇನ್ನುಳಿದ ತಾಲೂಕುಗಳಲ್ಲಿ ಪ್ರತಿ ಬಸ್​ನಲ್ಲಿ ಪರಸ್ಪರ ಅಂತರ ಕಾಯ್ದುಕೊಂಡು ಪ್ರಯಾಣಿಕರನ್ನು ಹತ್ತಿಸಿಕೊಂಡು ಬಸ್ ಓಡಾಡಿದವು.

    ಎಲ್ಲ ಮಾರ್ಗಗಳಿಗೆ ಬಸ್ ಬಿಡಲು ಸಂಸ್ಥೆ ಸಿದ್ಧತೆ ಮಾಡಿಕೊಂಡಿದೆ. ಆದರೆ, ಕೆಲವು ಮಾರ್ಗಗಳಿಗೆ ಪ್ರಯಾಣಿಕರಿಲ್ಲದ್ದರಿಂದ ಬಸ್ ಓಡಿಸಿಲ್ಲ. ಇದರಿಂದ ಬಸ್ ನಿಲ್ದಾಣಗಳಲ್ಲಿ ಖಾಲಿ ಬಸ್​ಗಳು ನಿಂತಿದ್ದವು. ಪ್ರಯಾಣಿಕರ ಸಂಖ್ಯೆಗಿಂತ ಚಾಲಕರು ಮತ್ತು ನಿರ್ವಾಹಕರೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು. ಮಾಸ್ಕ್ ಧರಿಸದೆ ನಿಲ್ದಾಣ ಪ್ರವೇಶಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಪ್ರಯಾಣಿಕರನ್ನು ಸ್ಕ್ರೀನಿಂಗ್ ಮಾಡಿ ಒಳಬಿಡಲಾಯಿತು. ಆದರೆ, ನಿಲ್ದಾಣಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಇರಲಿಲ್ಲ.

    ಆಟೋ ಸಂಚಾರ ಆರಂಭ: ಕಳೆದ 55 ದಿನಗಳಿಂದ ನಿಂತಲ್ಲಿಯೇ ನಿಂತಿದ್ದ ಆಟೋ ರಿಕ್ಷಾಗಳು ಮಂಗಳವಾರ ರಸ್ತೆಗಳಿದವು. ಆಟೋ ಚಾಲಕರು ನಿಲ್ದಾಣಗಳಿಗೆ ತೆರಳಿ ಮತ್ತೆ ಕಾಯಕ ಆರಂಭಿಸಿದರು. ಆದರೆ, ಹೊರ ಜಿಲ್ಲೆಗಳಿಂದ ಬರುವವರ ಸಂಖ್ಯೆ ಕಡಿಮೆಯಿದ್ದುದರಿಂದ ಆಟೋ ರಿಕ್ಷಾ ಸಂಚಾರ ಕಡಿಮೆಯಿತ್ತು. ಬಹುತೇಕ ಹೋಟೆಲ್​ಗಳು ಪಾರ್ಸಲ್ ಸೇವೆ ಆರಂಭಿಸಿದ್ದು, ಸಾರ್ವಜನಿಕರಿಗೆ ಅನುಕೂಲವಾದಂತಾಗಿದೆ. ಜಿಲ್ಲಾಡಳಿತ ಪ್ರತ್ಯೇಕವಾದ ಆದೇಶ ಹೊರಡಿಸದ್ದರಿಂದ ಸಲೂನ್ ಹೊರತುಪಡಿಸಿ ಎಲ್ಲ ರೀತಿಯ ಅಂಗಡಿಗಳು, ಪಾನ್​ಶಾಪ್ ಮಂಗಳವಾರದಿಂದ ಆರಂಭಗೊಂಡವು. ಬಟ್ಟೆ, ರೆಡಿಮೇಡ್ ಗಾರ್ವೆಂಟ್ಸ್, ಜ್ಯುವೆಲರಿ ಶಾಪ್​ಗಳಲ್ಲಿ ಗ್ರಾಹಕರ ಸಂಖ್ಯೆ ವಿರಳವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts