More

    ಒಳ ಮೀಸಲು ಸೌಲಭ್ಯ,ಡಿ.11ರಂದು ಬೆಳಗಾವಿ ಚಲೋ 13, 14ರಂದು ಹೊಸದಿಲ್ಲಿಯಲ್ಲಿ ಸಮಾವೇಶ

    ಚಿತ್ರದುರ್ಗ: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗಾಗಿ ಹಿಂದಿನ ರಾಜ್ಯ ಬಿಜೆಪಿ ಸರ್ಕಾರ, ಕೇಂದ್ರಕ್ಕೆ ಸಲ್ಲಿಸಿದ್ದ ಶಿಫಾರಸ್ಸಿನಲ್ಲಿ ಲೋಪಗಳನ್ನು ಸರಿಪಡಿಸಿ ಪರಿಷ್ಕೃತ ಶಿಫಾರಸ್ಸನ್ನು ಕೇಂದ್ರಕ್ಕೆ ಸಲ್ಲಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಡಿ.11ರಂದು ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್.ಮಾರೆಪ್ಪ ತಿಳಿಸಿದರು.
    ನಗರದಲ್ಲಿ ಗುರುವಾರ ಬೆಳಗಾವಿ, ಹೊಸದಿಲ್ಲಿ ಚಲೋ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
    ಹೈದರಾಬಾದ್‌ನಲ್ಲಿ ಈಚೆಗೆ ಆಯೋಜಿಸಿದ್ದ ಮಾದಿಗರ ವಿಶ್ವರೂಪ ಬೃಹತ್ ಸಮಾವೇಶದಲ್ಲಿ ಮತ್ತೊಮ್ಮೆ ಸಮಿತಿ ರಚನೆ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಾರೆ. ಆ ಮೂಲಕ ತೆಲಂಗಾಣ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಅತ್ಯಂತ ಶೋಷಿತರ ಸುದೀರ್ಘ ಹೋರಾಟ ವೇದಿಕೆ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರಿದರು.
    ಕೇಂದ್ರದ ಸಮಾಜ ಕಲ್ಯಾಣ ಇಲಾಖೆ ಸಾಮಾಜಿಕ ಸಬಲೀಕರಣ ಕಚೇರಿ, ಒಳಮೀಸಲಾತಿ ವಿಷಯ ಸುಪ್ರೀಂ ಕೋರ್ಟ್‌ನಲ್ಲಿದೆ ಎಂದು ಹೇಳಿದೆ. ಇದು ಒಳಮೀಸಲು ಜಾರಿಗೆ, ಬಿಜೆಪಿ ಅನುಸರಿಸುತ್ತಿರುವ ವಿಳಂಬ ಧೋರಣೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಕೇಂದ್ರಕ್ಕೆ ಸಲ್ಲಿಸಿರುವ ಶಿಫಾರಸ್ಸಿನಲ್ಲಿರುವ ಲೋಪಗಳಿಗೆ ತಿದ್ದುಪಡಿ ತಂದು ಕೇಂದ್ರಕ್ಕೆ ಕಳಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ ಅವರು, ಕಳೆದ ಜುಲೈನಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರಿಗೆ ಸಲ್ಲಿಸಿದ್ದ ಮನವಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
    ಹಕ್ಕೋತ್ತಾಯ ಈಡೇರಿಕಾಗಿ ಹಮ್ಮಿಕೊಂಡಿರುವ ಬೆಳಗಾವಿ ಹಾಗೂ ಹೊಸದಿಲ್ಲಿ ಚಲೋ ಪ್ರತಿಭಟನೆಗಳಲ್ಲಿ ಪರಿಶಿಷ್ಟ ಜಾತಿಯ ಎಲ್ಲ ಸಮುದಾಯಗಳು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
    ಚಳಿಗಾಲದ ಅಧಿವೇಶನದಲ್ಲಿ ಒಳ ಮೀಸಲಾತಿ ಮಸೂದೆ ಮಂಡಿಸಬೇಕು ಹಾಗೂ ಸಂವಿಧಾನ ಪರಿಚ್ಛೇದ 341 (3)ಕ್ಕೆ ತಿದ್ದುಪಡಿ ತರಬೇಕೆಂದು ಒತ್ತಾಯಿಸಿ ಡಿ.13ರಿಂದ 2 ದಿನಗಳ ಕಾಲ ಹೊಸದಿಲ್ಲಿಯ ಸಂಸತ್‌ಭವನದ ಮುಂದೆ ಸಮಾವೇಶ ಏರ್ಪಡಿಸಲಾಗಿದೆ ಎಂದು ಹೇಳಿದರು.
    ರಾಜ್ಯ ಸಾಮಾಜಿಕ ಸಂಘರ್ಷ ಸಮಿತಿ ಅಧ್ಯಕ್ಷ ಪ್ರೊ.ಸಿ.ಕೆ.ಮಹೇಶ್ವರಪ್ಪ, ರಾಜ್ಯ ಮಾದಿಗ ದಂಡೋರ ಮಾದಿಗ ಮೀಸಲಾತಿ ಜನ ಜಾಗೃತಿ ಸಮಿತಿ ಅಧ್ಯಕ್ಷ ಎಂ.ಸಿ.ಶ್ರೀನಿವಾಸ್, ಹೇಮರಾಜ್ ಅಸ್ಕಿಹಾಳ್, ಯುವರಾಜ್, ಬಿ.ಎ.ಕೇಶವಮೂರ್ತಿ, ಭಾನುಪ್ರಕಾಶ್, ಡಿ.ದುರುಗೇಶಪ್ಪ, ಚಿಕ್ಕಣ್ಣ, ಕುಮಾರ್, ರಾಮು, ರಾಮು ಗೋಸಾಯಿ ಮತ್ತಿತರ ಪ್ರಮುಖರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts