More

    ಒಳಮೀಸಲು ವರ್ಗೀಕರಣ ನಿಶ್ಚಿತ   -ಬಿ.ಎಚ್. ಅನಿಲ್‌ಕುಮಾರ್ – ರಾಜ್ಯದ ಎಲ್ಲೆಡೆ ಮಾದಿಗ ಮುನ್ನಡೆ ಜಿಲ್ಲಾ ಸಮಾವೇಶ  

    ದಾವಣಗೆರೆ: ನಿವೃತ್ತ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯಂತೆ ಒಳಮೀಸಲಾತಿ ವರ್ಗೀಕರಣ ಆಗುವುದು ನಿಸ್ಸಂಶಯ. ಕಾಂಗ್ರೆಸ್-ಜೆಡಿಎಸ್ ಮಾತ್ರವಲ್ಲ, ಬ್ರಹ್ಮ ಬಂದರೂ ಇದನ್ನು ತಡೆಯಲಿಕ್ಕೆ ಆಗದು ಎಂದು ನಿವೃತ್ತ ಐಎಎಸ್ ಅಧಿಕಾರಿ ಬಿ.ಎಚ್. ಅನಿಲ್‌ಕುಮಾರ್ ಹೇಳಿದರು.
    ನಗರದ ಚನ್ನಗಿರಿ ಕೇಶವಮೂರ್ತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯದ ಎಲ್ಲೆಡೆ ಮಾದಿಗ ಮುನ್ನಡೆ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
    ಒಳಮೀಸಲು ವರ್ಗೀಕರಣದ ಮೊದಲ ಹಂತದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ 2024ರ ಜ. 17ರಿಂದ ಆರಂಭವಾಗಲಿದೆ. ಯಾವುದೇ ಅಡ್ಡಿ ಆತಂಕ ಎದುರಾದರೂ ನಮ್ಮ ಪರವಾದ ತೀರ್ಪು ಬರುವುದು ನಿಶ್ಚಿತ. ಯಾರಲ್ಲೂ ಸಂದೇಹ ಬೇಡ ಎಂದು ಹೇಳಿದರು.
    ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮೀಸಲಾತಿ ವರ್ಗೀಕರಣ ಮಾಡಿ ಕೇಂದ್ರಕ್ಕೆ ಶಿಫಾರಸು ಮಾಡಿತು. ಕಳೆದ ನಾಲ್ಕು ದಶಕದ ಮಾದಿಗ ಸಮುದಾಯದ ಹೋರಾಟಕ್ಕೆ ಒಂದು ಹಂತದ ಜಯ ಸಿಕ್ಕಿದೆ. ಸವಲತ್ತು ಬಳಸಿಕೊಳ್ಳುವ ಬಗ್ಗೆ ಇನ್ನು ಚಿಂತನೆ ಮಾಡಬೇಕಿದೆ ಎಂದರು.
    ಅಂಬೇಡ್ಕರ್ ಸಂವಿಧಾನ ರಚಿಸಿದಾಗ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಆರು ಜಾತಿಗಳಿದ್ದವು. 70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ರಾಜಕೀಯ ಲಾಭಕ್ಕಾಗಿ ಒಂದೊಂದೇ ಜಾತಿಗಳನ್ನು ಸೇರಿಸುತ್ತ ಹೋಯಿತು. ಇದೀಗ ಎಸ್ಸಿ ಪಟ್ಟಿಯಲ್ಲಿ 101 ಜಾತಿಗಳಿವೆ. ಹೊಲೆಯ ಸಮಾಜದವರು ನಮಗೆ ಸಿಗುತ್ತಿದ್ದ ಸೌಲಭ್ಯಗಳನ್ನು ದಬ್ಬಾಳಿಕೆಯಿಂದ ಪಡೆದರು. ಸ್ಪಶ್ಯ ಜಾತಿಗಳೂ ಕೂಡ ಎಸ್ಸಿ ಪಟ್ಟಿಗೆ ಸೇರ್ಪಡೆಯಾದವು. ಇದರಿಂದ ಮಾದಿಗ ಸಮಾಜಕ್ಕೆ ಸೌಲಭ್ಯ ಕಡಿಮೆಯಾದವು ಎಂದು ವಿಷಾದಿಸಿದರು.
    ರಾಜ್ಯದಲ್ಲಿ ಎಸ್ಸಿ ಮೀಸಲಾತಿ ಪ್ರಮಾಣ ಶೇ.15ರಿಂದ 17ಕ್ಕೆ ಏರಿಕೆಯಾಗಿ ಅದರಲ್ಲಿ ಮಾದಿಗ ಸಮಾಜಕ್ಕೆ ಜನಸಂಖ್ಯೆ ಆಧಾರಿತವಾಗಿ ಶೇ.6ರಷ್ಟು ಮೀಸಲು ದಕ್ಕಿದೆ. ಸದಾಶಿವ ಆಯೋಗದ ವರದಿ ಜಾರಿಯಾದಲ್ಲಿ ಸ್ಪಶ್ಯ ಜಾತಿಗಳು ಎಸ್ಸಿ ಪಟ್ಟಿಯಿಂದ ಕೈಬಿಟ್ಟು ಹೋಗಲಿವೆ ಎಂದು ವದಂತಿ ಹಬ್ಬಿಸಿದ ಸಿದ್ದರಾಮಯ್ಯ ಸರ್ಕಾರ ಪಿತೂರಿ ಮಾಡಿತು. ಆದರೆ ಮೀಸಲಾತಿ ತಟ್ಟೆಯಲ್ಲಿನ ಪಾಲನ್ನಷ್ಟೆ ಮಾದಿಗ ಸಮುದಾಯ ಸ್ವೀಕರಿಸಲಿದೆ. ಇತರೆ ಸಮುದಾಯಗಳೂ ಕೂಡ ನಮ್ಮ ಪಾಲಿಗೆ ಕೈ ಹಾಕಬಾರದು ಎಂದರು.
    ಬಿಜೆಪಿ ಸರ್ಕಾರ ಮುಂದಿನ ರಾಜಕೀಯ ಅಧಿಕಾರದ ಸ್ವಾರ್ಥದಿಂದಲೇ ಮೀಸಲಾತಿ ವರ್ಗೀಕರಣಕ್ಕೆ ನಿರ್ಧರಿಸಿ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಒಳಮೀಸಲು ವರ್ಗೀಕರಣ ಆಗಲೇಬೇಕೆಂಬ ಸ್ವಾರ್ಥ ನಮ್ಮಲ್ಲೂ ಇದೆ. ಇದಕ್ಕಾಗಿ 22 ಜಿಲ್ಲೆಯಲ್ಲೂ ಸಮಾವೇಶ ನಡೆಸಲಾಗುತ್ತಿದೆ. ಮಾದಿಗರ ಹೋರಾಟಕ್ಕೆ ಕೈ ಜೋಡಿಸುವ ಪಕ್ಷಕ್ಕೆ ಸಮುದಾಯ ಸ್ಪಂದಿಸಬೇಕು. ಒಳಮೀಸಲಾತಿ ವರ್ಗೀಕರಣ ಅನುಷ್ಠಾನಗೊಳಿಸದ ಸರ್ಕಾರದ ವಿರುದ್ಧವೂ ಹೋರಾಟಕ್ಕಿಳಿಯೊಣ ಎಂದರು.
    ಗ್ರಾಮ ಪಂಚಾಯ್ತಿಯಿಂದ ಲೋಕಸಭೆವರೆಗೆ ಮಹಿಳೆಯರಿಗೆ ಶೇ.33ರ ಮೀಸಲಿದೆ. ಹೀಗಾಗಿ ಮಾದಿಗ ಸಮಾಜದ ಮಹಿಳೆಯರಿಗೂ ಇದನ್ನು ಸಮರ್ಥವಾಗಿ ಬಳಸಿಕೊಳ್ಳಲು ಈಗಿನಿಂದಲೇ ಸಜ್ಜಾಗಬೇಕು. ಮೀಸಲಾತಿ ವರ್ಗೀಕರಣದ ಪ್ರಮಾಣ ಅನುಭವಿಸಲು ಸಮುದಾಯ ಸಿದ್ಧವಾಗಬೇಕು. ಮಾದಿಗರಲ್ಲಿ ಒಗ್ಗಟ್ಟಿನ ಶಕ್ತಿ ಪ್ರದರ್ಶನವಾದಾಗ ರಾಜಕೀಯವಾಗಿ ಅಭಿವೃದ್ಧಿ ಕಾಣಬಹುದು ಎಂದೂ ಆಶಿಸಿದರು.
    ಹೈಕೋರ್ಟ್ ವಕೀಲ ವೆಂಕಟೇಶ್ ದೊಡ್ಡೇರಿ ಮಾತನಾಡಿ ನರೇಂದ್ರ ಮೋದಿ ಅವರು ಮಾದಿಗ ಸಮಾಜದ ಹೋರಾಟಕ್ಕೆ ಒಲವು ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಮ್ಮ ಪರ ನಿಲುವು ಪ್ರದರ್ಶಿಸುವ ಪಕ್ಷದತ್ತ ಮುಂದಿನ ದಿನಗಳಲ್ಲಿ ಗಮನ ಹರಿಸೋಣ ಎಂದರು.
    ಒಳಮೀಸಲಾತಿ ಅಗತ್ಯತೆ ಕುರಿತು ಸಾಕ್ಷೃಚಿತ್ರ ಪ್ರದರ್ಶಿಸಿದ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಬೆಟ್ಟಹಳ್ಳಿ, ಸದಾಶಿವ ಆಯೋಗದ ವರದಿ ಜಾರಿ ವಿಚಾರವಾಗಿ ಸಿದ್ದರಾಮಯ್ಯ ಸರ್ಕಾರ ಇಬ್ಬಗೆಯ ನೀತಿ ಪ್ರದರ್ಶಿಸಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಪ್ರಾಸ್ತಾವಿಕ ಮಾತನಾಡಿದ ಮುಖಂಡ ಆಲೂರು ನಿಂಗರಾಜ್, ಕಾಂಗ್ರೆಸ್ ಸರ್ಕಾರ ಆದಿಜಾಂಬವ ನಿಗಮ ಸ್ಥಾಪನೆ ಮೂಲಕ ಒಳಮೀಸಲಾತಿ ಹೋರಾಟ ಹತ್ತಿಕ್ಕುವ ಕೆಲಸ ಮಾಡಿತು ಎಂದರು. ಸಮಾಜದ ಬೆಳವಣಿಗೆಗಾಗಿ ಚಿಂತನೆ ನಡೆಸುತ್ತಿರುವ ಮಾದಾರ ಸ್ವಾಮೀಜಿಯನ್ನು ಟೀಕಿಸುವ ಭಾಸ್ಕರ ಪ್ರಸಾದ್ ಜಿಲ್ಲೆಗೆ ಕಾಲಿಡಲು ಬಿಡುವುದಿಲ್ಲ ಎಂದೂ ಎಚ್ಚರಿಸಿದರು.
    ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪ್ರೊ.ಎನ್. ಲಿಂಗಣ್ಣ, ನಿವೃತ್ತ ಐಎಎಸ್ ಅಧಿಕಾರಿ ಪುರುಷೋತ್ತಮ, ಮಾದಿಗ ಮಹಾಸಭಾ ರಾಜ್ಯಾಧ್ಯಕ್ಷ ಮುತ್ತಣ್ಣ ಬೆಣ್ಣೂರು, ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಶಿವಪ್ಪ ಶಿಕಾರಿಪುರ, ಜಿ.ಎಚ್. ಮೋಹನ್‌ಕುಮಾರ್, ಕಣವಿಹಳ್ಳಿ ಮಂಜುನಾಥ್, ಜಯಪ್ರಕಾಶ್, ಎಲ್.ಡಿ.ಗೋಣೆಪ್ಪ, ಉಮೇಶ್ ಹೊನ್ನಾಳಿ, ಕಾಂತರಾಜ್, ಗುಮ್ಮನೂರು ರಾಮಚಂದ್ರ, ಗೋವಿಂದಪ್ಪ, ಶಾಮನೂರು ರಾಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts