More

    ಚುಚ್ಚುಮದ್ದು ನೀಡಿದ ಸ್ಥಳದಲ್ಲಿ ಗಂಟು!

    ಪ್ರಶಾಂತ ಹೂಗಾರ ಬೆಳಗಾವಿ
    ಕಾಲುಬಾಯಿ ರೋಗ ನಿವಾರಣೆಗೆ ಜಾನುವಾರುಗಳಿಗೆ ಚುಚ್ಚುಮದ್ದು ನೀಡಿದ ಜಾಗದಲ್ಲಿ ಅಂಗೈ ಅಗಲ ಗಂಟು ಏಳುತ್ತಿವೆ ಎಂದು ರೈತರು ಭಯಭೀತರಾಗಿದ್ದಾರೆ. ಆದರೆ, ಅನ್ನದಾತ ಅದಕ್ಕೆ ಯಾವುದೇ ಆತಂಕಪಡುವ ಅಗತ್ಯವಿಲ್ಲ. ಲಸಿಕೆ ಹಾಕಿಸುವ ಮುನ್ನ ಮತ್ತು ನಂತರ ಕೆಲ ಕ್ರಮಗಳನ್ನು ಅನುಸರಿಸಬೇಕು.

    ಜಿಲ್ಲೆ ಸೇರಿ ರಾಜ್ಯಾದ್ಯಂತ ಏಪ್ರಿಲ್ 1ರಿಂದ 30ರ ವರೆಗೆ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಹಾಗೂ ಕಾಲು ಬಾಯಿ ಬೇನೆ ರೋಗದಿಂದ ಜಾನುವಾರುಗಳನ್ನು ಕಾಪಾಡುವ ದೃಷ್ಟಿಯಿಂದ 5ನೇ ಸುತ್ತಿನ ಕಾಲು ಬಾಯಿ ರೋಗ ಲಸಿಕೆಯನ್ನು ಮನೆಮನೆಗೆ ಭೇಟಿ ನೀಡಿ ಉಚಿತವಾಗಿ ನೀಡಲಾಗುತ್ತಿದೆ. ಅದಕ್ಕಾಗಿ ಪಶು ಇಲಾಖೆಯು ಜಿಲ್ಲೆಯಲ್ಲಿ 12,85,00 ಡೋಸ್ ಕಾಲುಬಾಯಿ ಲಸಿಕೆ ಸಂಗ್ರಹಿಸಿಟ್ಟುಕೊಂಡಿದೆ.

    ಜಿಲ್ಲೆಯಲ್ಲಿ 20ನೇ ಜಾನುವಾರು ಜನಗಣತಿ ಪ್ರಕಾರ 13,93,711 ಜಾನುವಾರುಗಳಿವೆ ಎಂದು ಅಂದಾಜಿಸಲಾಗಿದೆ. ಬೆಳಗಾವಿ, ಚನ್ನಮ್ಮನ ಕಿತ್ತೂರು, ಬೈಲಹೊಂಗಲ, ಸವದತ್ತಿ, ರಾಮದುರ್ಗ, ಗೋಕಾಕ, ಮೂಡಲಗಿ, ರಾಯಬಾಗ, ಚಿಕ್ಕೋಡಿ, ಹುಕ್ಕೇರಿ, ನಿಪ್ಪಾಣಿ, ಕಾಗವಾಡ, ಖಾನಾಪುರ, ಅಥಣಿ, ಯರಗಟ್ಟಿ ತಾಲೂಕುಗಳನ್ನೊಳಗೊಂಡಂತೆ 12,85,000 ಜಾನುವಾರುಗಳಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು, ಅದಕ್ಕಾಗಿ 948 ಲಸಿಕೆದಾರರನ್ನು ನೇಮಿಸಲಾಗಿದೆ.

    ಲಸಿಕೆ ಮುನ್ನ ಇರಲಿ ಎಚ್ಚರ: ಕಾಲು ಬಾಯಿ ರೋಗ ಲಸಿಕೆ ರೋಗ ನೀಡಲು ವೈದ್ಯರು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಶು ಗರ್ಭ ಧರಿಸಿರುವ, ಕರುವಿಗೆ ಜನ್ಮ ನೀಡಿರುವ ಹಾಗೂ ಅನಾರೋಗ್ಯಪೀಡಿತ ಪಶು ಕುರಿತು ವೈದ್ಯರಿಗೆ ಮಾಹಿತಿ ನೀಡಬೇಕು. ಸರಿಯಾಗಿ ಮಾಹಿತಿ ನೀಡದೆ ಗರ್ಭ ಧರಿಸಿರುವ ಹಾಗೂ ಕರುವಿಗೆ ಜನ್ಮ ನೀಡಿದ ಮೂರು ತಿಂಗಳು ಒಳಗಿನ ಪಶು ಮತ್ತು ಅನಾರೋಗ್ಯ ಪಶುವಿಗೆ ಕಾಲು ಬಾಯಿ ರೋಗ ಲಸಿಕೆ ನೀಡಿದಲ್ಲಿ ಅಂತಹ ಪಶುಗಳ ಜೀವಕ್ಕೆ ತೊಂದರೆ ಉಂಟಾಗಬಹುದು. ಕಾರಣ, ಲಸಿಕೆ ಕೊಡಿಸುವ ಮುನ್ನ ರೈತರು ಎಚ್ಚರ ವಹಿಸಬೇಕು.

    ಲಸಿಕೆ ಹಾಕಲಾದ ಜಾನುವಾರು ಸಂಖ್ಯೆ
    ಅಥಣಿ 1,70,000 -75,150
    ಕಾಗವಾಡ 50,000 -24,709
    ಬೈಲಹೊಂಗಲ 52,000 -20,534
    ಚ. ಕಿತ್ತೂರು 30,000 -14,256
    ಬೆಳಗಾವಿ 1,25,000 -35,097
    ಚಿಕ್ಕೋಡಿ 1,08,000 -49,561
    ನಿಪ್ಪಾಣಿ 68,000 -23,031
    ಗೋಕಾಕ 1,00,000 -56,070
    ಮೂಡಲಗಿ 90,000 -34,954
    ಹುಕ್ಕೇರಿ 1,04,000 -50,683
    ಖಾನಾಪುರ 84,000 -40,790
    ರಾಯಬಾಗ 1,70,000 -86,903
    ರಾಮದುರ್ಗ 64,000 -44,698
    ಸವದತ್ತಿ 50,000 -22,387
    ಯರಗಟ್ಟಿ 20,000 -8,896
    ಒಟ್ಟು 12,85,000 -5,87,719

    ಏನು ಮಾಡಬೇಕು? : ಲಸಿಕೆ ನೀಡುವ ಸಂದರ್ಭದಲ್ಲಿ ಜಾನುವಾರು ಅತ್ತ-ಇತ್ತ ಹೊಯ್ದಡದಂತೆ ಗಟ್ಟಿಯಾಗಿ ಹಿಡಿದುಕೊಳ್ಳಬೇಕು.
    ಲಸಿಕೆ ನೀಡಿದ ತಕ್ಷಣ ಸೂಜಿ ಚುಚ್ಚಿದ ಜಾಗವನ್ನು ಚೆನ್ನಾಗಿ ಉಜ್ಜಬೇಕು. ಚುಚ್ಚುಮದ್ದು ನೀಡಿದ ಬಳಿಕ ಜಾನುವಾರುಗಳನ್ನು ನೆರಳಿನಲ್ಲಿ ಕಟ್ಟಬೇಕು. ಲಸಿಕೆ ನೀಡಿದ ತಕ್ಷಣ ಜಾನುವಾರು ಕೃಷಿ ಚಟುವಟಿಕೆಯಲ್ಲಿ ಬಳಸದೆ 1 ಗಂಟೆ ವಿಶ್ರಾಂತಿ ನೀಡಬೇಕು.
    ಚುಚ್ಚುಮದ್ದು ನೀಡಿದ ಜಾಗದಲ್ಲಿ ಗಂಟು ಎದ್ದಲ್ಲಿ ಬಿಸಿ ಬಟ್ಟೆಯಿಂದ ಕಾವು ನೀಡಬೇಕು. ಗಂಟಿನ ಬಗ್ಗೆ ಆತಂಕ ಹೆಚ್ಚಿದಲ್ಲಿ ಹತ್ತಿರದ ಪಶು ವೈದ್ಯರನ್ನು ಸಂಪರ್ಕಿಸಬೇಕು.

    ಜಿಲ್ಲೆಯಲ್ಲಿ ಉಚಿತವಾಗಿ ಕಾಲು ಬಾಯಿ ರೋಗ ತಡೆಗೆ ಲಸಿಕೆ ನೀಡಲಾಗುತ್ತಿದೆ. ಚುಚ್ಚುಮದ್ದು ನೀಡುವ ಸಂದರ್ಭದಲ್ಲಿ ದನಗಳು ಅತ್ತ ಇತ್ತ ಹೊಯ್ದಡಿದರೆ ಗಂಟು ಏಳುವುದು ಕಂಡುಬರುತ್ತದೆ. ಗಂಟು ಎದ್ದಲ್ಲಿ ರೈತರು ಆತಂಕಕ್ಕೆ ಒಳಗಾಗಬಾರದು. ಸಮೀಪದ ಪಶು ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಯಂತೆ ಉಪಚಾರ ಮಾಡಬೇಕು.
    ಡಾ.ರಾಜೀವ ಕೊಲೇರ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts