More

    ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಕೇಸ್, ಪ್ರಾದೇಶಿಕ ಆಯುಕ್ತ ನವೀನ್ ರಾಜ್‌ಸಿಂಗ್ ಸೂಚನೆ, ಜಿಲ್ಲಾಡಳಿತ ಭವನದಲ್ಲಿ ಪ್ರಗತಿ ಪರಿಶೀಲನಾ ಸಭೆ

    ಬೆಂಗಳೂರು ಗ್ರಾಮಾಂತರ: ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ಅಧಿಕಾರಿಗಳಿಗೆ ಸೂಚಿಸಿದರು.

    ದೇವನಹಳ್ಳಿ ತಾಲೂಕು ಬೀರಸಂದ್ರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾಡಳಿತ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

    ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಸರ್ಕಾರದ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಸಾಕಷ್ಟು ದೂರು ಬರುತ್ತಿವೆ. ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಮಾಹಿತಿ ಅಧರಿಸಿ ಕೂಡಲೇ ಕ್ರಮಕ್ಕೆ ಮುಂದಾಗಬೇಕು ಎಂದರು. ಒತ್ತುವರಿಯಾಗಿರುವಂಥ ಸರ್ಕಾರದ ಭೂಮಿಯನ್ನು ಮರಳಿ ವಶಪಡಿಸಿಕೊಳ್ಳಬೇಕು. ಸರ್ಕಾರಿ ಭೂಮಿಗಳಿಗೆ ಗಡಿ ಗುರುತಿಸಿ ದಾಖಲೆ ಸಮರ್ಪಕವಾಗಿ ನಿರ್ವಹಣೆ ಮಾಡುವ ಜತೆಗೆ ಸರ್ಕಾರಿ ಭೂಮಿ ಒತ್ತುವರಿಯಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ಸೂಚನೆ ನೀಡಿದರು.

    ಭೂ ಪ್ರಕರಣ ಶೀಘ್ರ ಇತ್ಯರ್ಥಗೊಳಿಸಿ: ನಾಡಕಚೇರಿ ನಿರ್ಮಾಣಕ್ಕೆ ಸ್ಥಳ ಹಾಗೂ ಹಣ ಮಂಜೂರಾತಿ ಮಾಡಲು ಅಗತ್ಯ ದಾಖಲೆ ಒದಗಿಸಬೇಕು. ಆರ್‌ಟಿಸಿಗಳಲ್ಲಿ ಸರ್ಕಾರಿ ಭೂಮಿ ಬಗ್ಗೆ ಸಮರ್ಪಕವಾಗಿ ನಮೂದಿಸಬೇಕು ಹಾಗೂ ಆರ್‌ಟಿಸಿ ತಿದ್ದುಪಡಿ ಬಾಕಿ ಇರುವ ಎಲ್ಲ ಭೂ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥ ಮಾಡಬೇಕು. ಈ ವಿಷಯದಲ್ಲಿ ವಿನಾಕಾರಣ ವಿಳಂಬ ಧೋರಣೆ ಅನುಸರಿಸಬಾರದು ಎಂದು ನವೀನ್ ರಾಜ್ ಸಿಂಗ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಕಂದಾಯ ಗ್ರಾಮಗಳ ರಚನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ದಾಖಲೆಗಳ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದ ಆಯುಕ್ತರು ಕೋವಿಡ್ ನಿಯಮ ಪಾಲಿಸಿ, ಕಂದಾಯ ಅದಾಲತ್ ಪ್ರಾರಂಭಿಸಬೇಕು. ಈ ಮೂಲಕ ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಯನ್ನು ಸ್ಥಳದಲ್ಲಿಯೇ ಪರಿಹರಿಸುವ ಪ್ರಯತ್ನ ನಡೆಸಬೇಕು ಎಂದು ಸೂಚನೆ ನೀಡಿದರು.

    ಕಾಮಗಾರಿ ಪೂರ್ಣಗೊಳ್ಳಬೇಕು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ನೀಡಲಾಗಿದೆ, ಇತರೆ ಯಾವುದೇ ಸಮಸ್ಯೆಗಳಿದ್ದಲ್ಲಿ ಜಿಲ್ಲಾಧಿಕಾರಿ ಗಮನಕ್ಕೆ ತಂದು, ತ್ವರಿತವಾಗಿ ಪರಿಹರಿಸಿಕೊಳ್ಳಬೇಕು. ಅನಗತ್ಯ ವಿಷಯಗಳ ಬಗ್ಗೆ ಕಾಲಹರಣ ಮಾಡದೆ, ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ಸಾರ್ವಜನಿಕರ ಬಳಕೆಗೆ ಮುಕ್ತ ಅವಕಾಶ ಕಲ್ಪಿಸಬೇಕು ಎಂದು ನವೀನ್ ರಾಜ್ ಸಿಂಗ್ ಹೇಳಿದರು.

    ಅದಾಲತ್‌ಗೆ ಸಿದ್ಧತೆ: ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಕಂದಾಯ ಅದಾಲತ್ ಆಯೋಜಿಸುವ ಬಗ್ಗೆ ಪೂರ್ವಸಿದ್ಧತೆ ಸಭೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಇಲಾಖೆ ಚುರುಕುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts