More

    ಒತ್ತಡ ನಿರ್ವಹಣೆಯಿಂದ ನೆಮ್ಮದಿ ಕಾಣಲು ಸಾಧ್ಯ

    ಬೆಳಗಾವಿ: ಸಮಾಜದ ಇಂದಿನ ಸಮಸ್ಯೆಗಳಿಗೆ ಮೆಡಿಟೇಶನ್ ಪರಿಹಾರ ನೀಡುತ್ತದೆ. ದುರದೃಷ್ಟವೆಂದರೆ ಅದಕ್ಕೆ ಜಾತಿ ಬಣ್ಣ ನೀಡಲಾಗುತ್ತಿದೆ. ಮೆಡಿಟೇಶನ್ ಇದು ನಿಜವಾಗಿ ಜೀವನದ ಒಂದು ಭಾಗವಾಗಬೇಕಿದೆ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ ಹೇಳಿದರು.

    ನಗರದ ಕೆಎಲ್‌ಇ ಸಂಸ್ಥೆಯ ಶತಮಾನೋತ್ಸವ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಫೆಡರೇಷನ್ ಆಫ್ ಅಸೋಸಿಯೇಶನ್ಸ್ ಆಫ್ ಬೆಳಗಾವಿ (ಎಫ್‌ಒಎಬಿ) ಲೋಗೋ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒತ್ತಡ, ಉದ್ವೇಗ ನಿವಾರಣೆಯಾದರೆ ಮನುಷ್ಯ ನೆಮ್ಮದಿ ಕಾಣುತ್ತಾನೆ. ಮೆಡಿಟೇಶನ್ ಮತ್ತು ಆಯುರ್ವೇದಗಳ ಕುರಿತು ಇರುವ ಪೂರ್ವಾಗ್ರಹ ಹೋಗಲಾಡಿಸಬೇಕಿದೆ ಎಂದು ತಿಳಿಸಿದರು.
    ಬೆಳಗಾವಿ ಎಂದರೆ ಒಂದು ಮೂಲೆಯಲ್ಲಿರುವ ಪ್ರದೇಶ, ಬೇಡದ ಕಾರಣಕ್ಕೆ ಸುದ್ದಿಯಲ್ಲಿರುವ ಪ್ರದೇಶ ಎನ್ನುವ ಭಾವನೆ ಹೊರಗಡೆ ಇದೆ. ಆದರೆ, ನಿಜ ಸ್ಥಿತಿ ಆ ರೀತಿ ಇಲ್ಲ. ಇಲ್ಲಿ ಉದ್ಯಮ ಸ್ನೇಹಿ ವಾತಾವರಣವಿದೆ. ಇಲ್ಲಿನ ಉದ್ಯಮಿಗಳು ಹಾಗೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರೆಲ್ಲ ಸೇರಿ ಇಂತಹ ಒಂದು ಸಂಘಟನೆ ಕಟ್ಟಿಕೊಂಡು ಉತ್ತಮ ಕೆಲಸ ಮಾಡುತ್ತಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಗಳೆಲ್ಲ ಬೆಳಗಾವಿಯ ಅಭಿವೃದ್ಧಿಗಾಗಿ ಒಗ್ಗೂಡಿರುವುದು ಅತ್ಯಂತ ಒಳ್ಳೆಯ ಬೆಳವಣಿಗೆ. ಸಮಾಜದ ಉನ್ನತಿಗೆ ಇಂತಹ ಪ್ರಯತ್ನ ಶ್ಲಾಘನೀಯ ಎಂದು ತಿಳಿಸಿದರು.

    ಬೆಳಗಾವಿ ಸೇರಿ ಎಲ್ಲೆಡೆ ಜನರಲ್ಲಿ ಖಿನ್ನತೆ ಹೆಚ್ಚಾಗುತ್ತಿದೆ. ಮಾದಕ ವಸ್ತುಗಳ ಸೇವನೆ ಅತಿಯಾಗುತ್ತಿದೆ. ಕೋವಿಡ್ ನಂತರದ ದಿನಗಳಲ್ಲಿ ಪ್ರತಿ 40 ಸೆಕೆಂಡ್‌ಗೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆಲ್ಲ ಕಡಿವಾಣ ಹಾಕಬೇಕಿದೆ. ವಿದ್ಯಾರ್ಥಿಗಳಲ್ಲಿ ಊಹಿಸಲು ಅಸಾಧ್ಯವಾದ ಮಟ್ಟಿಗೆ ಖಿನ್ನತೆ ಕಾಡುತ್ತಿದೆ. ಅದಕ್ಕೆಲ್ಲ ಕಡಿವಾಣ ಹಾಕುವ ಕೆಲಸ ಆಗಬೇಕಿದೆ. ಮಕ್ಕಳನ್ನು ಒಂದೆಡೆ ಸೇರಿಸುವ ಕೆಲಸ ಮಾಡುವುದಾದರೆ 6 ದಿನಗಳ ಶಿಬಿರ ಸಂಘಟಿಸುವ ಜವಾಬ್ದಾರಿಯನ್ನು ಆರ್ಟ್ ಆಫ್ ಲಿವಿಂಗ್ ತೆಗೆದುಕೊಳ್ಳುತ್ತದೆ ಎಂದರು.

    ರಾಜಕಾರಣಿಗಳು ತಮ್ಮ ಅವಧಿ ಪೂರ್ತಿ ಆರೋಪ-ಪ್ರತ್ಯಾರೋಪ, ಜಗಳ ಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗುತ್ತಿದೆ. ಕೊನೆಯ 6 ತಿಂಗಳು ರಾಜಕೀಯ ಮಾಡಲಿ. ಆದರೆ, ಉಳಿದ ಅವಧಿಯನ್ನು ಅಭಿವೃದ್ಧಿಗೆ ಮೀಸಲಿಡಬೇಕು. ಎಲ್ಲ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಯಲ್ಲಿ ರಾಜಕಾರಣಿಗಳ ಪಾತ್ರ ದೊಡ್ಡದಿದೆ ಎಂದು ತಿಳಿಸಿದರು. ಮಹಾನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, ಎಸ್‌ಪಿ ಡಾ.ಸಂಜೀವ ಪಾಟೀಲ, ವಿಟಿಯು ಕುಲಪತಿ ಡಾ.ಎಸ್.ವಿದ್ಯಾಶಂಕರ, ಕುಲಪತಿ ನಿತಿನ್ ಗಂಗನೆ, ಎಂಎಲ್‌ಐಆರ್‌ಸಿ ಬ್ರಿಗೇಡಿಯರ್ ಜಾಯ್‌ದೀಪ ಮುಖರ್ಜಿ, ಸಾಂಬ್ರಾ ವಿಮಾನ ನಿಲ್ದಾಣ ನಿರ್ದೇಶಕ ರಾಜೇಶಕುಮಾರ ಮೌರ್ಯ, ಚೈತನ್ಯ ಕುಲಕರ್ಣಿ, ಡಾ.ರಾಜೇಂದ್ರ ಬೆಳಗಾಂವಕರ್, ಹೇಮೇಂದ್ರ ಪೋರವಾಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts