More

    ಒಣಗುತ್ತಿರುವ ದ್ವಿದಳ ಧಾನ್ಯ

    ಮಳೆ ಪ್ರಭಾವ ಕಡಿಮೆಯಾದ ಹಿನ್ನೆಲೆ



    ಅರಕಲಗೂಡು; ತಾಲೂಕಿನಲ್ಲಿ ಮಳೆ ಪ್ರಭಾವ ಕಡಿಮೆಯಾದ ಹಿನ್ನೆಲೆಯಲ್ಲಿ ರಾಗಿ, ಜೋಳ ಹಾಗೂ ದ್ವಿದಳ ಧಾನ್ಯ ಬೆಳೆಗಳು ಒಣಗುತ್ತಿದ್ದು, ರೈತರನ್ನು ಕಂಗಾಲಾಗಿಸಿದೆ.


    ಮಳೆ ಕೈಕೊಟ್ಟ ಪರಿಣಾಮ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತಿದ ತಾಲೂಕಿನ ಪ್ರಮುಖ ಆಹಾರ ಬೆಳೆ ರಾಗಿ ಒಣಗಿದೆ. ಇದರಿಂದ ರೈತರಿಗೆ ದಿಕ್ಕು ತೋಚದಂತಾಗಿದ್ದು, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿ ಸಂಕಷ್ಟ ಎದುರಿಸಿದ್ದ ಅನ್ನದಾತರಿಗೆ ಇದೀಗ ಅನಾವೃಷ್ಟಿ ಕಾಡತೊಡಗಿದೆ.


    ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ತಂಬಾಕು, ಆಲೂಗಡ್ಡೆ ಮತ್ತಿತರ ಬೆಳೆಗಳ ಕಟಾವು ಕಾರ್ಯ ಮುಗಿಸಿದ ನಂತರ ತಾಲೂಕಿನ ರೈತರು ಆಹಾರಕ್ಕಾಗಿ ರಾಗಿ ಬಿತ್ತುವ ವಾಡಿಕೆ ಬೆಳೆಸಿಕೊಂಡಿದ್ದಾರೆ. ಅದರಂತೆ ಈಗಾಗಲೇ ಅಪಾರ ಪ್ರಮಾಣದಲ್ಲಿ ರಾಗಿ ಬಿತ್ತನೆ ನಡೆಸಿದ್ದು, ಹೊಲದಲ್ಲಿ ಮೊಳಕೆಯೊಡೆದು ಮೇಲೆದ್ದಿರುವ ರಾಗಿ ಪೈರುಗಳು ನೀರಿಲ್ಲದೆ ಬಾಡುತ್ತಿವೆ.


    ಕೃಷಿ ಇಲಾಖೆ ಮಾಹಿತಿ ಪ್ರಕಾರ ತಾಲೂಕಿನಲ್ಲಿ 4,350 ಹೆಕ್ಟೇರ್ ಪ್ರದೇಶದಲ್ಲಿ ರಾಗಿ, 21,560 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಹಾಗೂ 2700 ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯಗಳನ್ನು ಬಿತ್ತಲಾಗಿದೆ. ಆಹಾರಕ್ಕಾಗಿ ಹೆಚ್ಚಿನ ರೈತರು ರಾಗಿ ಬೆಳೆಯನ್ನೆ ನೆಚ್ಚಿಕೊಂಡಿದ್ದು, ಅಲಸಂದೆ, ಹುರುಳಿ ಮತ್ತಿತರ ದ್ವಿದಳ ಧಾನ್ಯ ಬೆಳೆಗಳು ಮಳೆಯಿಲ್ಲದೆ ನೆಲಕಚ್ಚಿವೆ. ಇದೀಗ ರೈತರಿಗೆ ಲಾಭದಾಯಕ ಬೆಳೆಯಾಗಿರುವ ಮುಸುಕಿನ ಜೋಳದ ಬೆಳೆಯೂ ಒಣಗಿ ನೆಲಕಚ್ಚಿದ್ದು, ದಿಕ್ಕು ತೋಚದಂತಾಗಿದೆ.


    ನೀರಾವರಿ ವ್ಯವಸ್ಥೆ ಹೊಂದಿರುವ ಕೆಲವೇ ರೈತರು ಮೋಟಾರ್ ಪಂಪ್‌ಗಳ ಮೂಲಕ ನೀರು ಹಾಯಿಸಿಕೊಂಡು ರಾಗಿ ಪೈರುಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಆದರೆ ಮಳೆಯನ್ನೇ ನೆಚ್ಚಿಕೊಂಡಿರುವ ಬೆಳೆ ಒಣಗಿ ಹಾಳಾಗುತ್ತಿದೆ. ಒಂದೆರಡು ದಿನಗಳಲ್ಲಿ ಮಳೆಯಾಗದಿದ್ದರೆ ಬೆಳೆ ಕಳೆದುಕೊಳ್ಳುವ ಆತಂಕ ರೈತರನ್ನು ಕಾಡುತ್ತಿದೆ.


    ಕಳೆದ ಮುಂಗಾರಿನಲ್ಲಿ ಬಿಡುವಿಲ್ಲದೆ ಸುರಿದ ಮಳೆಗೆ ರೈತರು ಬೆಳೆದ ಬೆಳೆಗಳು ಹಾಳಾಗಿದ್ದವು. ಪ್ರಮುಖ ಆದಾಯ ತರುವ ವಾಣಿಜ್ಯ ಬೆಳೆಗಳಾದ ತಂಬಾಕು, ಆಲೂಗಡ್ಡೆ ಇಳುವರಿ ಅತಿಯಾದ ಮಳೆಯಿಂದಾಗಿ ಕುಂಠಿತಗೊಂಡು ರೈತರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿತ್ತು. ಇದೀಗ ಅನಾವೃಷ್ಟಿ ಬಂದೊದಗಿದ್ದು, ವರುಣನ ಮುನಿಸು ಕಂಟಕವಾಗಿದೆ.


    ಹೊಲದಲ್ಲಿ ಒಣಗಿ ನಾಶವಾಗುತ್ತಿರುವ ರಾಗಿ, ಜೋಳ, ದ್ವಿದಳ ಧಾನ್ಯಗಳಿಂದ ಬರದ ಭೀತಿ ಆವರಿಸಿದೆ. ರಾಗಿ ಪೈರುಗಳು ಬೆಳೆಗಳು ಒಣಗುತ್ತಿರುವುದನ್ನು ಕಣ್ಣಾರೆ ಕಾಣಲಾಗದೆ ರೈತರು ಮಳೆಗಾಗಿ ಮುಗಿಲಿನತ್ತ ಮುಖ ಮಾಡಿದ್ದಾರೆ. ಮಳೆಗಾಗಿ ಆಕಾಶದತ್ತ ದೃಷ್ಟಿ ನೆಟ್ಟರೂ ಪ್ರಯೋಜನವಿಲ್ಲ. ಮಳೆ ಬಾರದೆ ಬೆಳೆದ ಬೆಳೆಗಳು ಒಣಗಿ ಹಾಳಾಗುತ್ತಿವೆ ಎಂದು ರೈತರು ಅವಲತ್ತುಕೊಂಡಿದ್ದಾರೆ.

    ಮಳೆಯಿಲ್ಲದೆ ರಾಗಿ ಬೆಳೆ ಒಣಗುತ್ತಿದೆ. ಮೇವಿಗಾಗಿ ಬಿತ್ತಿದ ಜೋಳ ಕೂಡ ಬಾಡುತ್ತಿದೆ. ಮುಂಗಾರಿನಲ್ಲಿ ಬೆಳೆದ ತಂಬಾಕು ಬಾರಿ ಮಳೆಗೆ ಸಿಲುಕಿ ಇಳುವರಿ ಇಲ್ಲದೆ ನಷ್ಟವಾಗಿದೆ. ಬೆಳೆ ಬೆಳೆಯಲು ಮಾಡಿದ ಸಾಲ ತೀರಿಸಲು ಕಷ್ಟಕರವಾಗಿದೆ.
    ಉಮೇಶ್, ರೈತ.

    ರಾಗಿ ಮತ್ತಿತರ ಬೆಳೆಗಳ ಬೆಳವಣಿಗೆಗೆ ತುರ್ತಾಗಿ ಮಳೆಯ ಅವಶ್ಯಕತೆ ಇದೆ. ಹಿಂಗಾರು ಹಂಗಾಮಿನಲ್ಲಿ ಬಿತ್ತಲು 27 ಕ್ವಿಂಟಾಲ್ ರಾಗಿ ಮತ್ತು 15 ಕ್ವಿಂಟಾಲ್ ಅಲಸಂದೆ ದಾಸ್ತಾನಿದೆ. ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ರೈತರು ಸಹಾಯ ಧನದಲ್ಲಿ ದೊರೆಯುವ ಬಿತ್ತನೆ ಬೀಜದ ಪ್ರಯೋಜನ ಪಡೆದುಕೊಳ್ಳಬೇಕು.
    ರಮೇಶ್ ಕುಮಾರ್, ಸಹಾಯಕ ಕೃಷಿ ನಿರ್ದೇಶಕ, ಅರಕಲಗೂಡು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts