More

    ಒಜಾಕಿ ವಿಧಾನ ರೋಗಿಗಳಿಗೆ ವರದಾನ

    ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೃದಯ ಶಸ್ತ್ರ ಚಿಕಿತ್ಸಾ ವಿಭಾಗವು ಅತ್ಯಾಧುನಿಕ ಒಜಾಕಿ ವಿಧಾನ ಅಳವಡಿಸಿಕೊಂಡಿದ್ದು, ಹೃದಯದ ಮಹಾಪಧಮನಿ (ಒರ‌್ಟಿಕ್ ವಾಲ್) ಕವಾಟದ ತೊಂದರೆಯಿಂದ ಬಳಲುತ್ತಿರುವ ರೋಗಿಗಳಿಗೆ ವರದಾನವಾಗಿ ಪರಿಣಮಿಸಿದೆ. ಈ ತಂತ್ರಜ್ಞಾನ ಅಳವಡಿಸಿಕೊಂಡ ಭಾರತದ 8 ಕೇಂದ್ರಗಳಲ್ಲಿ ಈ ಆಸ್ಪತ್ರೆಯೂ ಒಂದಾಗಿದೆ. 2 ದಿನಗಳಲ್ಲಿ 5 ರೋಗಿಗಳು ಈ ತಂತ್ರಜ್ಞಾನದ ಪ್ರಕ್ರಿಯೆಗೆ ಯಶಸ್ವಿಯಾಗಿ ಒಳಗಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

    ಮಲೇಷ್ಯಾದ ಐಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಡಾ.ಶಿವಕುಮಾರ್ ಶಿವಲಿಂಗಂ ಅವರು ಈಚೆಗೆ ಆಸ್ಪತ್ರೆಯಲ್ಲಿ ಈ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ವಿಧಾನ ಮೂಲಕ ಪ್ರಾತ್ಯಕ್ಷಿತೆ ಪ್ರದರ್ಶಿಸಿದರು. ನಂತರ ಮಾತನಾಡಿದ ಅವರು, ಮಾನವನ ಹೃದಯವು 4 ಕವಾಟ (ವಾಲ್ವ್)ಗಳನ್ನು ಹೊಂದಿದ್ದು, ಮಹಾಪಧಮನಿ ಕವಾಟವು ಸಾಮಾನ್ಯವಾಗಿ ಸೋಂಕಿನಿಂದ ತೊಂದರೆಗೊಳಗಾಗಿ, ಸೋರಿಕೆ ಅಥವಾ ವಯಸ್ಸಾದ ಕಾರಣ ಕುಗ್ಗುತ್ತದೆ. ಈ ವಿಧಾನಕ್ಕೂ ಮುಂಚೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಮೆಟಲ್ ಅಥವಾ ಅಂಗಾಂಶ ಕವಾಟ(ವಾಲ್ವ್) ದಿಂದ ಮಾತ್ರ ಬದಲಾಯಿಸಲಾಗುತ್ತಿತ್ತು. ಮಹಾಪಧಮನಿಯ ಕವಾಟದ ಬದಲಾವಣೆಯು ತನ್ನದೆಯಾದ ಮಿತಿ ಹಾಗೂ ತೊಂದರೆಗಳನ್ನು ಹೊಂದಿದೆ. ಕವಾಟದ ನಿರ್ವಹಣೆಗಾಗಿ ಮೇಲಿಂದ ಮೇಲೆ ವೈದ್ಯರ ಭೇಟಿ, ಜೀವಮಾನವಿಡೀ ರಕ್ತ ತೆಳುವಾಗಿಸುವ ಔಷಧ ಸೇವಿಸಬೇಕಾಗಿತ್ತು. ಅಲ್ಲದೆ ಇವುಗಳ ಜೀವಿತಾವಧಿ 10-15 ವರ್ಷಗಳು ಮಾತ್ರ. ಈ ವಿಧಾನವನ್ನು ಜಪಾನಿನ ಹೃದ್ರೋಗ ತಜ್ಞವೈದ್ಯ ಡಾ. ಯುಕಿಯೋ ಒಝಾಕಿ ಅವರು ಅಭಿವೃದ್ಧಿಪಡಿಸಿದ್ದು, ಅವರ ಹೆಸರಿನಿಂದಲೇ ಇದನ್ನು ಗುರುತಿಸಲಾಗುತ್ತಿದೆ ಎಂದು ತಿಳಿಸಿದರು.

    ಈ ವೇಳೆ ಆಸ್ಪತ್ರೆಯ ಮುಖ್ಯ ಹೃದಯ ಶಸ್ತ್ರ ಚಿಕಿತ್ಸಕ ಡಾ.ರಿಚರ್ಡ್ ಸಲ್ಡಾನ್ಹಾ ಮಾತನಾಡಿ, ಈ ಅತ್ಯಾಧುನಿಕ ವಿಧಾನವನ್ನು ಎಲ್ಲ ವಯಸ್ಸಿನ ರೋಗಿಗಳ ಮೇಲೆ ನಡೆಸಬಹುದು. ‘ಒಜಾಕಿ’ ತಂತ್ರಜ್ಞಾನವು ಹೃದಯದ ಸುತ್ತಲಿನ ಚೀಲದಿಂದ ಅಂಗಾಂಶವನ್ನು ಬಳಸಿಕೊಂಡು ಮಹಾಪಧಮನಿಯ ಕವಾಟವನ್ನು ಪುನರ್ನಿರ್ಮಿಸುವ ನಾವಿಣ್ಯಪೂರ್ಣ ಮತ್ತು ಪರ್ಯಾಯ ತಂತ್ರವಾಗಿದೆ (ಆಟೋಲೋಗಸ್ ಪೆರಿಕಾರ್ಡಿಯಮ್). ರೋಗಿಯ ಪೆರಿಕಾರ್ಡಿಯಮ್ ಅನ್ನು ಬಳಸಿಕೊಂಡು ಮೂರು ಪದರಗಳನ್ನು ಮರುನಿರ್ಮಾಣ ಮಾಡಲಾಗುತ್ತದೆ. ಈ ಅತ್ಯಾಧುನಿಕ ವಿಧಾನದಿಂದ ಕವಾಟವನ್ನು ರಕ್ಷಿಸಿ, ದೀರ್ಘಾಯುಷ್ಯ ಪಡೆಯುತ್ತದೆ. ರೋಗಿಗಳು ತಮ್ಮ ಜೀವಿತಾವಧಿಯಲ್ಲಿ ರಕ್ತ ತೆಳುವಾಗಿಸುವ ಔಷಧಿಯ ಅವಶ್ಯಕತೆ ಇರುವುದಿಲ್ಲ. ಅಲ್ಲದೇ ಪಾರ್ಶ್ವವಾಯು ಮತ್ತು ದೀರ್ಘಕಾಲದ ಔಷಧಗಳ ಅಡ್ಡಪರಿಣಾಮಗಳಂತಹ ವೈದ್ಯಕೀಯ ಸಮಸ್ಯೆಯಿಂದ ದೂರವಿರಬಹುದು ಎಂದರು.

    ಹೃದಯ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮೋಹನ್ ಗಾನ್, ಅರಿವಳಿಕೆ ತಜ್ಞವೈದ್ಯ ಡಾ. ಶರಣಗೌಡ ಪಾಟೀಲ, ಡಾ. ಆನಂದ ವಗರಾಳಿ, ಡಾ. ರಂಜಿತ ನಾಯಕ, ಡಾ. ಗನಂಜಯ ಸಾಳ್ವೆ ಇತರರಿದ್ದರು. ಆಸ್ಪತ್ರೆಗೆ ಭೇಟಿ ನೀಡಿದ ಮಲೇಷ್ಯಾದ ಡಾ. ಶಿವಕುಮಾರ್ ಹಾಗೂ ಆಸ್ಪತ್ರೆಯ ಹೃದಯ ಶಸ್ತ್ರ ಚಿಕಿತ್ಸಾ ತಂಡವನ್ನು ಅಭಿನಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts