More

    ಒಂದೇ ವೇದಿಕೆಯಡಿ ಹೋರಾಟವಿರಲಿ

    ಧಾರವಾಡ: ಸಂವಿಧಾನ ರಚನೆಯಾಗಿ 72 ವರ್ಷಗಳಾಗಿವೆ. ಜಾತಿ, ಮೀಸಲಾತಿಗಾಗಿ ಹಲವು ಬಾರಿ ತಿದ್ದುಪಡಿ ಮಾಡಲಾಗಿದೆ. ಆದರೆ. ಒಂದು ಬಾರಿಯೂ ಭಾಷೆಗಾಗಿ ತಿದ್ದುಪಡಿಯಾಗಿಲ್ಲ. ಈ ಕುರಿತು ಚಿಂತನೆ ಅಗತ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಹೇಳಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ಸಮಾಲೋಚನೆ ಸಭೆಯಲ್ಲಿ ಮಾತನಾಡಿದ ಅವರು ಕರ್ನಾಟಕ, ಕನ್ನಡ ಹಾಗೂ ಕನ್ನಡಿಗರ ಒಳಿತು ಎಂಬುದೇ ಎಲ್ಲ ಕನ್ನಡ ಪರ ಮನಸುಗಳ ಗುರಿಯಾಗಬೇಕು ಎಂದರು.

    ಕನ್ನಡ ಪರ ಸಂಘಟನೆಗಳು ನಡೆಸುವ ಹೋರಾಟವನ್ನು ಸರ್ಕಾರ, ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಹೀಗಾಗಿ ಎಲ್ಲ ಸಂಘಟನೆಗಳು ಒಂದೇ ವೇದಿಕೆಯಡಿ ಹೋರಾಟ ನಡೆಸಬೇಕು. ಇದರಿಂದ ಕನ್ನಡ ಅನುಷ್ಠಾನದ ಕೆಲಸ ಸಹ ಸುಲಭವಾಗಲಿದೆ ಎಂದು ಅಭಿಪ್ರಾಯಪಟ್ಟರು.

    ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಮಾತನಾಡಿ, ಆಂಗ್ಲ ಮಾಧ್ಯಮಕ್ಕೆ ಬೆಂಬಲ ನೀಡುವ ಬಹುತೇಕ ಶಾಲೆಗಳು ಶಾಸಕರು ಹಾಗೂ ಅವರ ಸಂಬಂಧಿಕರದ್ದೇ ಆಗಿವೆ. ಅವುಗಳನ್ನು ಬಂದ್ ಮಾಡಿಸಲು ಸರ್ಕಾರದಿಂದ ಕಷ್ಟ. ಬಹುತೇಕ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳಲ್ಲೇ ಆಡಳಿತ ನಡೆಸುತ್ತಾರೆ. ಆದರೆ, ಕರ್ನಾಟಕದಲ್ಲಿ ಮಾತ್ರ ಆಂಗ್ಲ ಭಾಷೆಗೆ ಮಹತ್ವ ನೀಡಲಾಗುತ್ತಿದೆ. ಕನ್ನಡ ಭಾಷೆಯನ್ನು ಅನ್ನದ ಭಾಷೆಯನ್ನಾಗಿ ಮಾಡಬೇಕು ಎಂದರು.

    ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಅಜಿತಕುಮಾರ ದೇಸಾಯಿ ಮಾತನಾಡಿ, ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಮಾಡಬೇಕು. ರಾಜ್ಯ ಮಟ್ಟದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಭೆ ಕರೆದು ಕನ್ನಡ ಶಿಕ್ಷಕರ ಸಮಸ್ಯೆಗಳನ್ನು ಆಲಿಸಬೇಕು ಎಂದು ಮನವಿ ಮಾಡಿದರು.

    ಇದಕ್ಕೆ ಉತ್ತರಿಸಿದ ಟಿ.ಎಸ್. ನಾಗಾಭರಣ, ಆಗಸ್ಟ್ ಮೊದಲ ವಾರದಲ್ಲಿ ಸಭೆ ಕರೆಯುವ ಭರವಸೆ ನೀಡಿದರು.

    ಸಂಘಟಕ ಮಾರ್ತಾಂಡಪ್ಪ ಕತ್ತಿ ಮಾತನಾಡಿ, ಬಹುತೇಕ ಬ್ಯಾಂಕ್​ಗಳಲ್ಲಿ ಕನ್ನಡ ಮಾತನಾಡುವವರೇ ಇಲ್ಲ. ಇದರಿಂದ ಗ್ರಾಮೀಣ ಭಾಗದ ಜನರು ವ್ಯವಹಾರ ನಡೆಸುವಲ್ಲಿ ಸಮಸ್ಯೆ ಎದುರಿಸುವಂತಾಗಿದೆ. ಇದೇ ರೀತಿ ರೈಲ್ವೆ ಇಲಾಖೆಯಲ್ಲಿ ಸಹ ಹಿಂದಿ ಪ್ರಾಬಲ್ಯ ಹೆಚ್ಚಾಗಿದೆ. ರಾಜ್ಯದಲ್ಲಿ ಕಾರ್ಯ ನಿರ್ವಹಿಸುವವರು ಸ್ಥಳೀಯ ಭಾಷೆಗಳಲ್ಲೇ ವ್ಯವಹಾರ ನಡೆಸುವಂತೆ ಕ್ರಮವಾಗಬೇಕು ಎಂದರು.

    ಈರಪ್ಪ ಎಮ್ಮಿ ಮಾತನಾಡಿ, ಹಿಂದಿ ಪ್ರಚಾರ ಸಭಾ ಮಾದರಿಯಲ್ಲಿ ಕನ್ನಡ ಪ್ರಚಾರ ಸಭಾ ಮಾಡಬೇಕು ಎಂದರು.

    ಪ್ರಮುಖರಾದ ಡಾ. ರಾಮು ಮೂಲಗಿ, ಶಂಕರ ಕುಂಬಿ, ಶೇಖರಯ್ಯ ಮಠಪತಿ, ಚನ್ನಪ್ಪ ಅಂಗಡಿ, ಈರಣ್ಣ ಬಡಿಗೇರ, ಶಿವಾನಂದ ಬಾವಿಕಟ್ಟಿ, ಜಯಶ್ರೀ ಜಾತಿಕರ್ತ, ಸಿದ್ದರಾಮ ಹಿಪ್ಪರಗಿ, ಸುಧೀರ ಮುಧೋಳ, ಶಿವಾಜಿ ಡೇಂಬ್ರೆ, ಸಿ.ಎಂ. ಚನ್ನಬಸಪ್ಪ, ಇತರರು ಅಭಿಪ್ರಾಯ ಮಂಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts