More

    ಒಂದೇ ದಿನದಲ್ಲಿ ಬದಲಾಯಿತು ವಾತಾವರಣ

    ಧಾರವಾಡ/ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸೋಮವಾರ ಬೆಳಗಾಗುವಾಗಲೇ ಮೋಡ ಮುಸುಕಿತ್ತು. ಸೂರ್ಯ ಮೂಡಿ ಬಂದಿದ್ದೇ ಗೊತ್ತಾಗದಂತೆ ಇತ್ತು. ಮಳೆಗಾಲ ಶುರುವಾಗಿಬಿಡುತ್ತದೆಯೇನೊ ಅನಿಸಿತ್ತು. ಹಾಗೆಯೇ ಆಯಿತು.

    ಜೂನ್ ಮೊದಲ ವಾರದ ಅಂತ್ಯಕ್ಕೆ ಮುಂಗಾರು ಮಳೆಗಾಲ ಆರಂಭವಾಗಿ, ಬೇಸಿಗೆಯ ವಾತಾವರಣ ಸಂಪೂರ್ಣ ಬದಲಾಗುವುದು ವಾಡಿಕೆ. ಆದರೆ, ಮೇ 31ರಂದು ಇದ್ದ ಬೇಸಿಗೆಯ ವಾತಾವರಣ ಈ ಸಲ ಜೂ. 1ರಂದೇ ಮಳೆಗಾಲವಾಗಿ ಪರಿವರ್ತನೆಗೊಂಡಿತು.

    ಗ್ರಾಮೀಣ ಭಾಗದಲ್ಲಿ ಬೆಳ್ಳಂಬೆಳಗ್ಗೆ ಗಂಟೆಗಟ್ಟಲೇ ಮಳೆಯಾಯಿತು. ಗಾಳಿಯ ಆರ್ಭಟ ಇಲ್ಲದೆ ಸುರಿದ ಮಳೆಗೆ ಕೆಲವೆಡೆ ಜಮೀನುಗಳಲ್ಲಿ ನೀರು ಶೇಖರಣೆಗೊಂಡಿತು. ಮುಂಗಾರು ಬಿತ್ತನೆಗೆ ಜಮೀನು ಹದ ಮಾಡುತ್ತಿರುವ ರೈತರು, ಇನ್ನಷ್ಟು ಮಳೆಯಾದರೆ ಬಿತ್ತನೆ ಕಾರ್ಯವನ್ನು ಚುರುಕುಗೊಳಿಸಲಿದ್ದಾರೆ.

    ನಗರ ಪ್ರದೇಶದಲ್ಲಿ ಮಧ್ಯಾಹ್ನವೇ ಮಳೆ ಆಗಮಿಸಿದ್ದರಿಂದ ಪಾದಚಾರಿಗಳು ಪರದಾಡಬೇಕಾಯಿತು. ಧಾರವಾಡದಲ್ಲಿ ಹಲವರು ಛತ್ರಿ ಹಿಡಿದೇ ಮನೆಯಿಂದ ಹೊರಟಿದ್ದರು. ಆದರೂ ಜೋರಾಗಿ ಸುರಿದ ಮಳೆಯಲ್ಲಿ ತೋಯಿಸಿಕೊಂಡವರಿಗೆ ಲೆಕ್ಕವಿಲ್ಲ. ಕೆಲವು ಕಡೆ ರಸ್ತೆಗಳಲ್ಲಿ ಭರ್ಜರಿ ನೀರು ಹರಿಯಿತು.

    ಹುಬ್ಬಳ್ಳಿ ನಗರದಲ್ಲಿ ಮಳೆಯಿಂದಾಗಿ ಜನಜೀವನದಲ್ಲಿ ಒಂದಿಷ್ಟು ವ್ಯತ್ಯಯ ಉಂಟಾಯಿತು. ಹೊಸೂರಿನ ಹೊಸ ಬಸ್ ಟರ್ವಿುನಲ್​ನ ಆವರಣದಲ್ಲಿ ಪಾದ ಮುಳುಗುವಷ್ಟು ನೀರು ನಿಲ್ಲುವ ಮೂಲಕ ಕಾಮಗಾರಿಯಲ್ಲಿ ಏನೋ ದೋಷ ಉಂಟಾಗಿದೆ ಎಂಬ ಸಂದೇಹಕ್ಕೆ ದಾರಿ ಮಾಡಿಕೊಟ್ಟಿತು. ಮಳೆಯಿಂದಾಗಿ ಅಲ್ಲಲ್ಲಿ ಮರದ ಟೊಂಗೆಗಳು ಮುರಿದುಬಿದ್ದಿವೆ. ಕೆಲವು ಭಾಗದಲ್ಲಿ ಗಂಟೆಗಟ್ಟಲೇ ವಿದ್ಯುತ್ ವ್ಯತ್ಯಯವಾಗಿತ್ತು. ಮಂಗಳವಾರವೂ ಮಳೆ ಸುರಿಯುವ ಲಕ್ಷಣಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts