More

    ಒಂದೇ ತಿಂಗಳಲ್ಲಿ 79 ಡೆಂಘೆ ಕೇಸ್!

    ಬೆಳಗಾವಿ: ಕಳೆದ ಹತ್ತು ದಿನಗಳಿಂದ ಜಿಲ್ಲೆಯಲ್ಲಿ ಮಳೆರಾಯ ತನ್ನ ಪ್ರತಾಪ ಮೆರೆಯುತ್ತಿದ್ದಾನೆ. ಈ ಮಧ್ಯೆ ಜಿಲ್ಲೆಯಲ್ಲಿ ಮಾರಣಾಂತಿಕ ಡೆಂಘೆ ಜ್ವರದ ಬಾಧೆಯೂ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ.

    ಜೂನ್ ಒಂದೇ ತಿಂಗಳಲ್ಲಿ 60ಕ್ಕೂ ಹೆಚ್ಚು ಡೆಂಘೆ ಪ್ರಕರಣಗಳು ದೃಢವಾಗಿವೆ. ಏಪ್ರಿಲ್‌ನಿಂದ ಈವರೆಗೆ ಬರೊಬ್ಬರಿ 79 ಡೆಂಘೆ ಪ್ರಕರಣಗಳು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಧಾರಾಕಾರದ ಮಳೆಯಂತೆ ಡೆಂಘೆ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವುದು ಆರೋಗ್ಯ ಇಲಾಖೆಗೆ ಚಿಂತೆ ಹಚ್ಚಿದೆ. ಮಳೆ ಆರಂಭವಾದಾಗಿನಿಂದ ಈ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿವೆ. ಒಟ್ಟಾರೆ 365 ಡೆಂಘೆ ಶಂಕಿತ ರಕ್ತ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಬೆಳಗಾವಿ ನಗರದಲ್ಲಿ 26 ಡೆಂಗೆ ಪ್ರಕರಣಗಳು ದೃಢವಾಗಿವೆ. ಬೆಳಗಾವಿ ಗ್ರಾಮೀಣದಲ್ಲಿ 18 ಹಾಗೂ ಎಲ್ಲ ತಾಲೂಕುಗಳಲ್ಲಿ 4-5 ಪ್ರಕರಣಗಳು ಪತ್ತೆಯಾಗಿವೆ. ರೋಗದ ತೀವ್ರತೆ ಮನಗಂಡ ಆರೋಗ್ಯ ಇಲಾಖೆ ಸಿಬ್ಬಂದಿ ತಂಡಗಳಾಗಿ ಜಿಲ್ಲಾದ್ಯಂತ ಜಾಗೃತಿ ಮೂಡಿಸುತ್ತಿದೆ.

    3,800 ಆಶಾ ಕಾರ್ಯಕರ್ತೆಯರು ಜಾಗೃತಿ: 2-3 ವರ್ಷಗಳ ಅವಧಿಯಲ್ಲೇ ಇಷ್ಟೊಂದು ಪ್ರಮಾಣದ ಡೆಂಘೆ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಜಿಲ್ಲೆಯಲ್ಲಿ ಮಳೆಯೊಂದಿಗೆ ಡೆಂಘೆ ಜ್ವರವು ದಾಂಗುಡಿ ಇಟ್ಟಿದೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಅರಿವು ಮೂಡಿಸುವುದಕ್ಕೆ 3,800 ಆಶಾ ಕಾರ್ಯಕರ್ತೆಯರು, ಇವರೊಂದಿಗೆ 465 ಆರೋಗ್ಯ ಸಿಬ್ಬಂದಿಯು ಲಾರ್ವಾಗಳ ನಿಯಂತ್ರಣಕ್ಕೆ ಕ್ಷೇತ್ರ ಸಂಚಾರ ಆರಂಭಿಸಿದ್ದಾರೆ. ಆರೋಗ್ಯ ಜಾಗೃತಿ, ಡೆಂಘೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.

    ಸಂಗ್ರಹಿಸಿದ ನೀರು ಬದಲಿಸಲು ಸಲಹೆ: ಮನೆಯಲ್ಲಿ ಸಂಗ್ರಹಿಸಿದ ನೀರನ್ನು ಪ್ರತಿ 4-5 ದಿನಗಳಿಗೊಮ್ಮೆ ಬದಲಿಸಬೇಕು. ಸೊಳ್ಳೆಗಳ ಲಾರ್ವಾಗಳು ನೀರಿನ ಮೇಲೆ ಹೆಚ್ಚು ಸಮಯ ಇರಬಾರದು. ಇದ್ದರೆ ಸೊಳ್ಳೆಗಳ ಸಂತತಿ ಹೆಚ್ಚಾಗುತ್ತದೆ. ಒಂದು ಸೊಳ್ಳೆ ನೀರಿನ ಮೇಲೆ ಇಡುವ ಲಾರ್ವಾ ಒಡೆದರೆ 350 ಸೊಳ್ಳೆಗಳು ಉತ್ಪತ್ತಿಯಾಗುತ್ತದೆ. ಹೀಗಾಗಿ ನೀರನ್ನು ಮೇಲಿಂದ ಮೇಲೆ ಬದಲಿಸಬೇಕು. 5-6 ದಿನಗಟ್ಟಲೆ ಸಂಗ್ರಹವಿರುವ ನೀರನ್ನು ಬಳುಸುವುದರಿಂದಲೂ ಡೆಂಘೆ ಜ್ವರ ಬರುತ್ತದೆ ಎಂದು ಮಲೇರಿಯಾ ನಿಯಂತ್ರಣ ಅಧಿಕಾರಿಗಳು ಹೇಳುತ್ತಾರೆ.
    ಆರೋಗ್ಯ ಇಲಾಖೆ ಈ ತಿಂಗಳನ್ನು ’ ಡೆಂಘೆ ವಿರೋಧಿ ಮಾಸಾಚರಣೆ’ ಮಾಡುತ್ತಿದೆ. ‘ಬನ್ನಿ ಎಲ್ಲರೂ ಒಟ್ಟಾಗಿ ಡೆಂಗೆ ನಿಯಂತ್ರಣ ಮಾಡೋಣ’ ಎಂಬ ಧ್ಯೇಯದೊಂದಿಗೆ ಮನೆ, ಮನೆಗಳಿಗೆ ಭೇಟಿ ನೀಡಿ, ಅರಿವು ಮೂಡಿಸಲಾಗುತ್ತಿದೆ. ಶಾಲೆಗಳಲ್ಲಿ 5-7 ತರಗತಿ ಹಾಗೂ 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ‘ಪರಿಸರ ಸ್ವಚ್ಛತೆ ಹಾಗೂ ನಮ್ಮ ಪಾತ್ರ’ ವಿಷಯದ ಪ್ರಬಂಧ ಸ್ಪರ್ಧೆ ಆಯೋಜಿಸಿ, ಜಾಗೃತಿ ಮೂಡಿಸಲಾಗುತ್ತಿದೆ.

    ಬೆಳಗಾವಿ ಜಿಲ್ಲೆಯಲ್ಲಿ ಡೆಂಘೆ ಜ್ವರ ನಿಯಂತ್ರಿಸುವುದಕ್ಕೆ ಆಶಾ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯಪ್ರವೃತ್ತವಾಗಿದೆ. ಯಾವುದಾದರೊಂದು ಪ್ರದೇಶದಲ್ಲಿ ಒಂದು ಡೆಂಘೆ ಪ್ರಕರಣ ದೃಢವಾದರೆ ಆ ಪ್ರದೇಶವನ್ನು ಡೆಂಘೆ ಪೀಡಿತ ಪ್ರದೇಶವೆಂದು ಪರಿಗಣಿಸಿ ಚಿಕಿತ್ಸೆ ಆರಂಭಿಸಿ ಮುನ್ನಚ್ಚರಿಕೆ ವಹಿಸುತ್ತಿದ್ದೇವೆ. ಸಾರ್ವಜನಿಕರು ಮನೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು.
    | ಡಾ.ಎಂ.ಎಸ್.ಪಲ್ಲೇದ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಬೆಳಗಾವಿ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts