More

    ಒಂದು ಬಾವಿಯ ಕತೆ

    ಕಾರವಾರ: ಬಾವಿ ಹೂಳು ತೆಗೆದು ಸಿಮೆಂಟ್ ರಿಂಗ್ ಇಳಿಸುವ ಕೆಲಸವನ್ನು ಅಸಮರ್ಪಕವಾಗಿ ಮಾಡಿದ ವ್ಯಕ್ತಿಗೆ ಇಲ್ಲಿನ ಗ್ರಾಹಕರ ನ್ಯಾಯಾಲಯ 1.58 ಲಕ್ಷ ರೂ. ದಂಡ ವಿಧಿಸಿದ ಅಪರೂಪದ ಪ್ರಕರಣ ನಡೆದಿದೆ.

    ತಾಲೂಕಿನ ಶಿರವಾಡದಲ್ಲಿ ನೆಲೆಸಿದ್ದ ಕೇರಳ ಮೂಲದ ರೆಹಮಾನ್ ಕಾಶಿಯಾ ಎಂಬ ವ್ಯಕ್ತಿಗೆ ದಂಡ ವಿಧಿಸಿ ಗ್ರಾಹಕರ ನ್ಯಾಯಾಲಯದ ಅಧ್ಯಕ್ಷ ಪ್ರಕಾಶ ಕೆ. ಹಾಗೂ ಸದಸ್ಯ ನಜೀರ ಶೇಖ್ ಆದೇಶಿಸಿದ್ದಾರೆ.

    ಗಜಾನನ ಆಳ್ವಾ ಎಂಬುವವರ ಮನೆಯ ಬಾವಿಯ ನೀರು 2018 ರಲ್ಲಿ ಬತ್ತಿತ್ತು. ಇದರಿಂದ ಬಾವಿಯನ್ನು ಇನ್ನಷ್ಟು ಆಳ ತೆಗೆದು 6 ಹೆಚ್ಚುವರಿ ರಿಂಗ್ ಇಳಿಸುವ ಕೆಲಸವನ್ನು ರೆಹಮಾನ್ ಕಾಶಿಯಾ ಎಂಬುವವರಿಗೆ ನೀಡಿದ್ದರು. ಕೆಲಸದ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ರೆಹಮಾನ್ ಹೊಸ ರಿಂಗ್ ಇಳಿಸುವ ಬದಲು ಹಾಲಿ ಇದ್ದ ರಿಂಗ್​ಗಳ ಪಾಯವನ್ನೂ ಕುಸಿಯುವಂತೆ ಮಾಡಿದ್ದ ಎಂಬುದು ಗಜಾನನ ಆಳ್ವಾ ಆರೋಪ. ಅಲ್ಲದೆ, ಆ ಕೆಲಸಕ್ಕೆ 25 ಸಾವಿರ ರೂ. ಬೇರೆ ಪಡೆದುಕೊಂಡಿದ್ದರು ಎನ್ನಲಾಗಿದೆ. ಕಾಶಿಯಾ ಕೆಲಸ ಮಾಡಿ ಹೋದ ನಂತರ ಗಜಾನನ ಆಳ್ವಾ ಅವರ ಬಾವಿಯಲ್ಲಿ ಮೊದಲಿನಿಂದ ಇದ್ದ ರಿಂಗ್​ಗಳೂ ಕುಸಿದು ಹಾಳಾಗಿದ್ದವು. ಈ ಬಗ್ಗೆ ಕೇಳಿದಾಗ ಮುಂದಿನ ವರ್ಷ ಬೇಸಿಗೆಯಲ್ಲಿ ಉಚಿತವಾಗಿ ಕೆಲಸ ಮಾಡಿಕೊಡುವುದಾಗಿ ಕಾಶಿಯ ಭರವಸೆ ನೀಡಿದ್ದರು. ಆದರೆ, ವರ್ಷ ಕಳೆದರೂ ಕೆಲಸ ಮಾಡಿಕೊಡದ ಕಾರಣ ಆಳ್ವಾ ಅವರ ಮನೆಯಲ್ಲಿ ಕುಡಿಯುವ ನೀರಿನ ತುಟಾಗ್ರತೆ ಉಂಟಾಗಿತ್ತು. ಇದರಿಂದ ಆಳ್ವಾ ಅವರು ಬೇರೆ ವ್ಯಕ್ತಿ ಬಳಿ 88 ಸಾವಿರ ರೂ. ಕೊಟ್ಟು ಬಾವಿಯನ್ನು ಸ್ವಲ್ಪ ರಿಪೇರಿ ಮಾಡಿಸಿದ್ದರು. ತಮಗಾದ ಮೋಸಕ್ಕೆ ಪರಿಹಾರ ಕೊಡಿಸಬೇಕು ಎಂದು ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ರೆಹಮಾನ್ ಕಾಶಿಯಾ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಏಕಪಕ್ಷೀಯವಾಗಿ ಆದೇಶ ಹೊರಡಿಸಲಾಯಿತು. ಗಜಾನನ ಆಳ್ವಾ ಅವರಿಗೆ 1.53 ಲಕ್ಷ ರೂ. ರೂ.ಗಳನ್ನು ಶೇ. 6 ರ ಬಡ್ಡಿಯೊಂದಿಗೆ ರೆಹಮಾನ್ ಕಾಶಿಯಾ ಪರಿಹಾರ ರೂಪದಲ್ಲಿ ನೀಡಬೇಕು. ಅಲ್ಲದೆ, ಪ್ರಕರಣದ ವೆಚ್ಚವಾಗಿ ಹೆಚ್ಚುವರಿ 5 ಸಾವಿರ ರೂ.ಗಳನ್ನು ನೀಡಬೇಕು ಎಂದು ಗ್ರಾಹಕರ ನ್ಯಾಯಾಲಯ ಆದೇಶಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts