More

    ಐದು ದಿನಗಳು ಶ್ರೀರಂಗಪಟ್ಟಣ ದಸರಾ

    ಮಂಡ್ಯ: ವಿಶ್ವವಿಖ್ಯಾತ ಮೈಸೂರು ದಸರಾ ಮಾದರಿಯಲ್ಲೇ ಶ್ರೀರಂಗಪಟ್ಟಣದ ಪಾರಂಪರಿಕ ದಸರಾ ಹಬ್ಬವನ್ನು 5 ದಿನ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಉದ್ಘಾಟನೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಥವಾ ಸಿಎಫ್‌ಟಿಆರ್‌ಐ ನಿರ್ದೇಶಕರನ್ನು ಆಹ್ವಾನಿಸಲು ಸಲಹೆ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.


    ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಕಾವೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೆ.28ರಿಂದ ಆ.2ರವರೆಗೆ ದಸರಾವನ್ನು ವೈಶಿಷ್ಟೃಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.


    ಮೈಸೂರು ದಸರಾ ಸಮಿತಿಯಿಂದ 1 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಹೆಚ್ಚುವರಿಯಾಗಿ ಅಗತ್ಯವಿರುವ ಇನ್ನೊಂದು ಕೋಟಿ ರೂ. ಅನುದಾನ ಬಿಡುಗಡೆಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬಿಡುಗಡೆಗೆ ಪ್ರಯತ್ನಿಸಲಾಗುವುದು. ಕನ್ನಡ ಮತ್ತು ಸಂಸ್ಕೃತಿ, ಕ್ರೀಡಾ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಇಲಾಖೆಗಳ ನೆರವು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹಬ್ಬದ ಯಶಸ್ಸಿಗೆ ಶ್ರಮಿಸಬೇಕು ಎಂದರು.


    ದಸರಾ ವೈಭವವನ್ನು ಹೆಚ್ಚಿಸಲು ನಾಲ್ಕೈದು ಆನೆಗಳನ್ನು ಕರೆಸುವುದು. ಪೊಲೀಸ್ ಬ್ಯಾಂಡ್, ಕಲಾತಂಡ ಹಾಗೂ ಸ್ತಬ್ಧಚಿತ್ರಗಳ ಮೆರವಣಿಗೆ ಜತೆಗೆ ವೇದಿಕೆಯಲ್ಲಿ ಮಹಿಳಾ, ರೈತ, ಯುವ ದಸರಾ ಹಾಗೂ ಯೋಗ ಪ್ರದರ್ಶನ ಆಯೋಜನೆ ಮಾಡಬೇಕು. ಪ್ರಸಿದ್ಧ ಪ್ರವಾಸಿ ತಾಣ ಕೃಷ್ಣರಾಜಸಾಗರದ ವೈಭವವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಲು ವಿಶೇಷ ದೀಪಾಲಂಕಾರ ವ್ಯವಸ್ಥೆ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.


    ಶ್ರೀರಂಗಪಟ್ಟಣ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಕಳೆದ ಸಾಲಿನ ದಸರಾದಲ್ಲಿ ಪಾಲ್ಗೊಂಡಿದ್ದ ಕಲಾವಿದರು ಹಾಗೂ ಗುತ್ತಿಗೆದಾರರಿಗೆ ಹಣ ಕೊಡುವುದು ವಿಳಂಬವಾದ ಹಿನ್ನೆಲೆಯಲ್ಲಿ ಈ ಬಾರಿಯ ದಸರಾದಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರುವುದಿಲ್ಲ. ಆದ್ದರಿಂದ ಮೈಸೂರು ದಸರಾ ಮಾದರಿಯಲ್ಲಿ ಕಲಾವಿದರಿಗೆ ಮುಂಗಡವಾಗಿ ಹಣ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು. ಇನ್ನು ದಸರಾ ಆಚರಣೆ ವೇಳೆ ಆನೆಗಳು ಭಾಗವಹಿಸುವುದರಿಂದ ರಕ್ಷಣಾ ದೃಷ್ಟಿಯಿಂದ ಆನೆಗಳ ನಿರ್ವಹಣೆ ಹಾಗೂ ಪಟಾಕಿ ಸಿಡಿತದ ಬಗ್ಗೆ ಮುಂಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.


    ದಸರಾ ಆಚರಣೆ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಪ್ರವಾಸಿ ತಾಣಗಳು ಹಾಗೂ ಕೃಷ್ಣರಾಜಸಾಗರಕ್ಕೆ ಹೆಚ್ಚಿನ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಕೆ.ಆರ್.ಎಸ್. ರಸ್ತೆ ಡಾಂಬರೀಕರಣಕ್ಕೆ ತುರ್ತು ಕ್ರಮ ವಹಿಸಬೇಕು. ಈ ರಸ್ತೆಯಲ್ಲಿ ಹೆಚ್ಚು ಜನಸಂದಣಿ ಹಾಗೂ ವಾಹನ ಸಂಚಾರವಿರುತ್ತದೆ. ದಸರಾ ವೇಳೆಗೆ ಗುಣಮಟ್ಟದ ಸುಸಜ್ಜಿತ ರಸ್ತೆ ನಿರ್ಮಾಣವಾಗಬೇಕು. ಆತುರದ ಕಾಮಗಾರಿ ಸರಿಯಲ್ಲ. ಟೆಂಡರ್ ಹೆಸರಿನಲ್ಲಿ ವಿಳಂಬ ಮಾಡಿದರೆ ಪ್ರವಾಸಿಗರು ಕಿರಿಕಿರಿ ಅನುಭವಿಸಬೇಕಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕೆಂದು ಸಲಹೆ ನೀಡಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಕೆ.ಗೋಪಾಲಯ್ಯ, ಕೂಡಲೇ ಕ್ರಮ ವಹಿಸಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕೆಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.


    ಜಿಲ್ಲಾಧಿಕಾರಿ ಎಸ್.ಅಶ್ವಥಿ ಮಾತನಾಡಿ, ಕಂದಾಯ ಮತ್ತು ಪೊಲೀಸ್, ಪ್ರವಾಸೋದ್ಯಮ ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ದಸರಾ ವ್ಯವಸ್ಥೆ ಸುಗಮವಾಗಿ ನಡೆಯಲು ಬೇಕಾದ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದರು.


    ಶಾಸಕರಾದ ಎಂ.ಶ್ರೀನಿವಾಸ್, ಸುರೇಶ್‌ಗೌಡ, ಜಿಪಂ ಸಿಇಒ ಶಾಂತಾ ಎಲ್. ಹುಲ್ಮನಿ, ಎಸ್ಪಿ ಎನ್.ಯತೀಶ್, ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಜ್ಯೋತಿಷಿ ಡಾ.ಭಾನುಪ್ರಕಾಶ್‌ಶರ್ಮಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts