More

    ಐತಿಹಾಸಿಕ ರಸ್ತೆಗೆ ಬೇಕು ಕಾಯಕಲ್ಪ

    ಕುಮಟಾ: ನೂರಾರು ವರ್ಷಗಳಷ್ಟು ಹಳೆಯದಾದ ಸಂತೆಗುಳಿ- ನೀಲ್ಕುಂದ- ಶಿರಸಿ ರಸ್ತೆಯು ಈಗ ಕಾಯಕಲ್ಪಕ್ಕಾಗಿ ಕಾಯುತ್ತಿದೆ.

    ಕುಮಟಾ ತಾಲೂಕಿನ ಸಂತೆಗುಳಿಯಿಂದ ಅಘನಾಶಿನಿ ನದಿಯಾಚೆ ಮೊರ್ಸೆ, ಬಂಗಣೆ ಮಾರ್ಗವಾಗಿ ಬೆಣ್ಣೆಹೊಳೆ ದಾಟಿದರೆ ನಿಲ್ಕುಂದಕ್ಕೆ 15 ಕಿಮೀ ದೂರ. ಈ ರಸ್ತೆ ತುಂಬ ಹಳೆಯದು. ಮೈಸೂರಿನ ಅರಸ ಹೈದರಾಲಿ ಸೈನ್ಯ ಸೋದೆಗೆ ಹೋಗಲು ಮಾಡಿಕೊಂಡ ರಸ್ತೆ ಇದು. ಹಾಗೆಯೇ ಬ್ರಿಟಿಷರ ಕಾಲದಲ್ಲಿ ಇನ್ನಷ್ಟು ಅಭಿವೃದ್ಧಿಗೊಂಡು ಕರಾವಳಿ ಬಂದರು ಹಾಗೂ ಘಟ್ಟದ ಮೇಲಿನ ಪ್ರದೇಶಗಳ ವಾಣಿಜ್ಯ ವಹಿವಾಟಿನ ಪ್ರಮುಖ ಮಾರ್ಗವಾಯಿತು. ಕುದುರೆಗಳ ಮೇಲೆ ಈ ರಸ್ತೆಯಲ್ಲಿ ಸರಂಜಾಮು ಸಾಗಿಸಲಾಗುತ್ತಿತ್ತು. ಇದೇ ಕಾರಣಕ್ಕಾಗಿ ಇದಕ್ಕೆ ಕುದುರೆ ರಸ್ತೆ ಎಂದೇ ಕರೆಯಲಾಗುತ್ತಿತ್ತು. ಇಲ್ಲಿ ಕುದುರೆಗಳಿಗೆ ನೀರು ಕುಡಿಯಲು ನಿರ್ವಿುಸಿದ ಕಲ್ಲಿನ ತೊಟ್ಟಿಗಳು ಇದ್ದವು.

    ದೇವಿಮನೆ ಘಟ್ಟ ಹಾಗೂ ದೊಡ್ಮನೆ ಘಟ್ಟದ ರಸ್ತೆ ನಿರ್ವಣದ ಬಳಿಕ ಈ ರಸ್ತೆಯ ಬಳಕೆ ಹಾಗೂ ಕಾಲಕಾಲಕ್ಕೆ ಮಾಡಬೇಕಾದ ನಿರ್ವಹಣೆಯೂ ಕಡಿಮೆಯಾಗಿದೆ. ಜನರೇ ತಮ್ಮ ಅಗತ್ಯಕ್ಕಾಗಿ ಶ್ರಮದಾನದ ಮೂಲಕ ಸರಿಪಡಿಸಿಕೊಳ್ಳುವುದಕ್ಕೂ ಈಗ ಅರಣ್ಯ ಇಲಾಖೆ ತಡೆಯೊಡ್ಡುತ್ತಿದೆ.

    ನೀಲ್ಕುಂದದಿಂದ ಸಂತೇಗುಳಿ ಮೂಲಕ ಕುಮಟಾಕ್ಕೆ ಕೇವಲ 40 ಕಿಮೀ. 2010ರವರೆಗೂ ಈ ರಸ್ತೆಯಲ್ಲಿ ಬೈಕ್​ಗಳು ಓಡಾಡುತ್ತಿದ್ದವು. ಅರಣ್ಯ ಪ್ರದೇಶದಲ್ಲಿ ರಸ್ತೆಯನ್ನು ನಿರ್ವಹಣೆ ಮಾಡಿಲ್ಲ. ನೀಲ್ಕುಂದ ರಸ್ತೆಗಾಗಿ ಸಂತೇಗುಳಿ, ಸೊಪ್ಪಿನಹೊಸಳ್ಳಿ, ಬಡಾಳ ಭಾಗದ ಜನತೆ ಸಾಕಷ್ಟು ಹೋರಾಟ ಮಾಡಿದ್ದಾರೆ. ಘಟ್ಟದ ಮೇಲೆಯೂ ಶಿವಳಮನೆ, ತಂಡಾಗುಂಡಿ, ಹುಕ್ಕಳಿ, ನೀಲ್ಕುಂದ, ದೇವಿಮನೆ ಭಾಗದ ಜನರಿಂದ ನಿರಂತರ ಹೋರಾಟಗಳಾಗಿವೆ. ಇತ್ತೀಚೆಗೆ ಸಾಮಾಜಿಕ ಜಾಲ ತಾಣಗಳ ಮೂಲಕ ತಂಡ ಕಟ್ಟಿ ಅಭಿಯಾನದ ಮೂಲಕ ಸರ್ಕಾರದ ಗಮನಸೆಳೆಯುವ ಪ್ರಯತ್ನವೂ ನಡೆದಿದೆ.

    ಶಾಸಕ ದಿನಕರ ಶೆಟ್ಟಿ ಅವರು 2018ರ ಡಿಸೆಂಬರ್ 18ರಂದು ಜನರೊಂದಿಗೆ ಕಾಲ್ನಡಿಗೆಯಲ್ಲಿ ನೀಲ್ಕುಂದ ರಸ್ತೆಯಲ್ಲಿ ಸಾಗಿ ಸ್ಥಿತಿಗತಿ ಖುದ್ದು ಪರಿಶೀಲಿಸಿದ್ದರು. ಆದರೆ, ಅಂದು ಕೊಟ್ಟ ಭರವಸೆಗಳಿಗೆ ತಕ್ಕಂತೆ ಗಂಭೀರ ಪ್ರಯತ್ನವಾಗಬೇಕಿದೆ. ವಿಧಾನಸಭಾಧ್ಯಕ್ಷರು ಹಾಗೂ ಸಚಿವ ಶಿವರಾಮ ಹೆಬ್ಬಾರ ಬಳಿ ಘಟ್ಟದ ಮೇಲಿನ ಜನರು ಈ ರಸ್ತೆ ಅಭಿವೃದ್ಧಿ ಕುರಿತು ಮನದಟ್ಟು ಮಾಡಿದ್ದಾರೆ. ಆದರೆ, ಇದುವರೆಗೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ.

    ಈ ನೀಲ್ಕುಂದ ರಸ್ತೆಯನ್ನು ಕುಮಟಾ ಹಾಗೂ ಶಿರಸಿ ನಡುವೆ ಕೇವಲ ಪರ್ಯಾಯ ಮಾರ್ಗವಾಗಿ ಮಾತ್ರವಲ್ಲ, ಇಂದಿನ ಹಾಗೂ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟು ಶಾಶ್ವತ ಸರ್ವಋತು ರಸ್ತೆಯಾಗಿಯೂ ಅಭಿವೃದ್ಧಿಪಡಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು. ಇದರಿಂದಾಗಿ, ಪ್ರಸಿದ್ಧ ಪ್ರವಾಸಿ ತಾಣಗಳಾದ ಉಂಚಳ್ಳಿ ಜಲಪಾತ, ವಾಟೆಹೊಳೆ ಜಲಪಾತ, ಉಳ್ಳೂರಮಠದ ಅಬ್ಬಳ್ಳಿ ಜಲಪಾತ, ಭೀಮನಗುಡ್ಡ ಮೊದಲಾದೆಡೆ ತೆರಳಲು ಅನುಕೂಲವಾಗಲಿದೆ. ಕನಿಷ್ಠ ಲಘುವಾಹನಗಳ ಓಡಾಟಕ್ಕಾದರೂ ಅನುಕೂಲ ಮಾಡಿಕೊಡಲಿ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

    ದಾಖಲೆ ಪ್ರಕಾರ ಸಂತೆಗುಳಿಯಿಂದ ನೀಲ್ಕುಂದಕ್ಕೆ 21.6 ಕಿ.ಮೀ. ರಸ್ತೆಯಲ್ಲಿ 15.6 ಕಿ.ಮೀ. ಕುಮಟಾ ಪಿಡಬ್ಲು್ಯಡಿ ಹಾಗೂ 6 ಕಿ.ಮೀ.ನಷ್ಟು ಸಿದ್ದಾಪುರ ಪಿಡಬ್ಲು್ಯಡಿ ವ್ಯಾಪ್ತಿಗೆ ಇದೆ. ಈ ರಸ್ತೆ 2005-06 ರಲ್ಲಿ ಜಿಪಂನಿಂದ ಪಿಡಬ್ಲು್ಯಡಿಗೆ ಹಸ್ತಾಂತರವಾಗಿದೆ. 2-3 ಕಿ.ಮೀ. ದಟ್ಟ ಅರಣ್ಯ ಪ್ರದೇಶದಲ್ಲಿ ಹೊರತುಪಡಿಸಿ ಉಳಿದೆಡೆ ರಸ್ತೆ 16 ಅಡಿಗೂ ಹೆಚ್ಚು ಅಗಲವಾಗಿ ಭಾಗಶಃ ಸುಸ್ಥಿತಿಯಲ್ಲಿದೆ. ಈಗಾಗಲೇ ಸಂತೆಗುಳಿಯಿಂದ 8 ಕಿ.ಮೀ. ವರೆಗೆ ರಸ್ತೆ ಹಾಗೂ ಸೇತುವೆ ಸಮಸ್ಯೆ ಬಗೆಹರಿಸಿದ್ದೇವೆ. ಮುಂದೆ ಬೆಣ್ಣೆಹೊಳೆಗೆ ಸೇತುವೆ ನಿರ್ವಣವಾದರೆ, ಮಾತ್ರ ಮುಂದೆ ಕೆಲಸ ಮಾಡಲು ಅನುಕೂಲ. ಇಲ್ಲಿ ಸುಮಾರು 100 ಮೀಟರ್ ಉದ್ದದ ಸೇತುವೆ ಅಗತ್ಯವಿದ್ದು ಅಂದಾಜು 15 ಕೋಟಿ ರೂ. ಬೇಕು. ಇದಕ್ಕಾಗಿ ಪ್ರಸ್ತಾವನೆ ಕಳಿಸಿದ್ದೇವೆ. ಅನುಮತಿಗಾಗಿ ಅರಣ್ಯ ಇಲಾಖೆಯ ಅಪ್ಲಿಕೇಷನ್​ನಲ್ಲಿ ಪ್ರಯತ್ನ ನಡೆದಿದೆ. ಈವರೆಗೆ ಸಿಕ್ಕಿಲ್ಲ. ಹಂತಹಂತವಾಗಿ ಕೆಲಸ ಆಗಬೇಕಾಗಿದೆ. ನಾಲ್ಕೈದು ಕಡೆ ಅಡ್ಡಚರಂಡಿ ಆಗಬೇಕು. ಸಂತೇಗುಳಿಯಿಂದ 8ನೇ ಕಿ.ಮೀ.ನಿಂದ 15 ನೇ ಕಿ.ಮೀ.ವರೆಗಿನ ಮಾರ್ಗದ ಅಭಿವೃದ್ಧಿಗೆ ಅರಣ್ಯ ಇಲಾಖೆಯ ಅನುಮತಿಯಿಲ್ಲದೆ ಕಾರ್ಯಸಾಧ್ಯವಿಲ್ಲ.

    | ರಾಜು ಶಾನಭಾಗ, ಪಿಡಬ್ಲು್ಯಡಿ ಇಂಜಿನಿಯರ್

    ಯಾವುದೇ ಅರಣ್ಯ ಪ್ರದೇಶದಲ್ಲಿ ರಸ್ತೆ, ಸೇತುವೆ ಅಥವಾ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸುವುದಕ್ಕೆ ಅರಣ್ಯ ಇಲಾಖೆಯ ವೆಬ್ ಅಪ್ಲಿಕೇಷನ್​ನಲ್ಲಿ ಸೂಕ್ತ ಮಾಹಿತಿ ನೋಂದಾಯಿಸಿ ಅನುಮತಿ ಪಡೆಯುವ ಹೊಸ ಸರಳ ವ್ಯವಸ್ಥೆ ಜಾರಿಯಲ್ಲಿದೆ.

    | ಪ್ರವೀಣಕುಮಾರ, ವಲಯ ಅರಣ್ಯಾಧಿಕಾರಿ, ಕುಮಟಾ

    ಸಂತೇಗುಳಿ-ನೀಲ್ಕುಂದ ರಸ್ತೆ ಬಹಳ ಉಪಯುಕ್ತವಾದ ರಸ್ತೆ. ಈ ರಸ್ತೆಯನ್ನು ಪುನಃ ಬಳಕೆಗೆ ಯೋಗ್ಯಗೊಳಿಸಿ ಶಿರಸಿ-ಕುಮಟಾ ನಡುವೆ ಇರುವ ಪರ್ಯಾಯ ಮಾರ್ಗ ಜೋಡಿಸುವ ಪ್ರಯತ್ನ ನಡೆದಿದೆ.

    | ದಿನಕರ ಶೆಟ್ಟಿ, ಶಾಸಕ

    ತಲತಲಾಂತರದಿಂದ ಜನ ಬಳಸುತ್ತಿದ್ದ ಸಂತೆಗುಳಿ- ನೀಲ್ಕುಂದ ರಸ್ತೆ ಕೆಲ ವರ್ಷಗಳ ಹಿಂದಿನವರೆಗೂ ಪೂರ್ಣ ಬಳಕೆಯಲ್ಲಿತ್ತು. ಈ ರಸ್ತೆಗೆ ಜೀವತುಂಬುವ ಕೆಲಸಕ್ಕೆ ಬೇಕಾದ ಅನುಮತಿಯನ್ನು ಅರಣ್ಯ ಇಲಾಖೆ ಕೊಡಬೇಕು.

    | ವಿನಾಯಕ ಭಟ್ಟ, ಸಂತೇಗುಳಿ ಪಂಚಾಯಿತಿ ಮಾಜಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts