More

    ಐತಿಹಾಸಿಕ ಗ್ರಾಮಗಳ ಅಭಿವೃದ್ಧಿಗೆ ಒತ್ತು; ಪುರಾತನ ದೇಗುಲಗಳ ಜೀರ್ಣೋದ್ಧಾರಕ್ಕೆ ಅನುದಾನ: ಕುಮಾರ್ ಬಂಗಾರಪ್ಪ

    ಸೊರಬ: ತಾಲೂಕಿನಲ್ಲಿ ಹಲವು ಗ್ರಾಮಗಳು ಐತಿಹಾಸಿಕ ಮನ್ನಣೆ ಪಡೆದುಕೊಂಡಿದ್ದು, ಅವುಗಳ ಪ್ರಗತಿಗೆ ಶ್ರಮಿಸಲಾಗುವುದು ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.
    ತಾಲೂಕಿನ ನಿಟ್ಟಕ್ಕಿ, ಕೆರೆಹಳ್ಳಿ, ಗೆಂಡ್ಲ, ಯಕ್ಷಿ, ಕುಂಬ್ರಿ, ಬಿದರಗೇರಿ, ಗುಡ್ಡೆಕೊಪ್ಪ, ಮಂಚಿ, ಬಾಸೂರು ಗ್ರಾಮಗಳಲ್ಲಿ 8 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶನಿವಾರ ಭೂಮಿಪೂಜೆ ನೆರವೇರಿಸಿದ ನಂತರ ಬಿದರಗೇರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದರು.
    ಅನೇಕ ಗ್ರಾಮಗಳಲ್ಲಿ ಪುರಾತನ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಈಗಾಗಲೇ ಅನುದಾನ ನೀಡಲಾಗಿದೆ. ದೇವಸ್ಥಾನದ ಮಹಿಮೆ ಹಾಗೂ ಸ್ಥಳದ ಬಗ್ಗೆ ಇರುವ ಐತಿಹ್ಯವನ್ನು ಪ್ರಚುರಪಡಿಸಲು ಗ್ರಾಮಸ್ಥರಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
    ಕೃಷಿ ಜಮೀನುಗಳಿಗೆ ತೆರಳಲು ರಸ್ತೆಗಳ ಅಗತ್ಯವಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಒಂದು ಕಿ.ಮೀ. ರಸ್ತೆಗೆ ಅನುದಾನ ನೀಡಲಾಗಿದೆ. ಸಾಂಪ್ರದಾಯಿಕ ಕೃಷಿ ಪದ್ಧತಿ ಬದಲಾಗಿ ಆಧುನಿಕ ಕೃಷಿಯನ್ನು ಅಳವಡಿಸಿಕೊಂಡಿರುವ ಪರಿಣಾಮ ವಾಹನಗಳ ಓಡಾಟಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಜಮೀನಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗುವುದು ಎಂದರು.
    ಕೆರೆಹಳ್ಳಿ ಏತ ನೀರಾವರಿ ಯೋಜನೆ ಮೂಲಕ ವರದಾ ನದಿಯಿಂದ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲು 500 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ತಾಳಗುಪ್ಪದಿಂದ ಕುಪ್ಪಗಡ್ಡೆ, ಆನವಟ್ಟಿ ಮೂಲಕ ಹುಬ್ಬಳ್ಳಿಗೆ ರೈಲು ಸಂಪರ್ಕ ಕಲ್ಪಿಸಲಾಗುವುದು. ವಿದ್ಯಾವಂತ ಯುವಕರಿಗೆ ಕ್ಷೇತ್ರದಲ್ಲಿಯೇ ಉದ್ಯೋಗ ಕಲ್ಪಿಸಿಕೊಳ್ಳುವ ನಿಟ್ಟಿನಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಚಿಂತಿಸಲಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts