More

    ಎಸ್​ಎಸ್​ಎಲ್​ಸಿ ಪರೀಕ್ಷೆ, ಆರೋಗ್ಯ ಸುರಕ್ಷತೆಗೆ ಮೊದಲ ಆದ್ಯತೆ

    ಶಿರಸಿ: ಕೋವಿಡ್- 19 ನಡುವೆ ಜೂನ್ 25ರಿಂದ ಆರಂಭವಾಗಲಿರುವ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಆರೋಗ್ಯ ಸುರಕ್ಷತೆಗೆ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಹೆಚ್ಚಿನ ಗಮನ ನೀಡಲಾಗಿದೆ. 35 ಕೇಂದ್ರಗಳಲ್ಲಿ 10,324 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಕೋವಿಡ್ ಮುಕ್ತ ಪರೀಕ್ಷೆಗೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಡಿಪಿಐ ದಿವಾಕರ ಶೆಟ್ಟಿ ತಿಳಿಸಿದರು.

    ಇಲ್ಲಿನ ಮಾರಿಕಾಂಬಾ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದ ಸಿದ್ಧತೆಯನ್ನು ಬುಧವಾರ ವೀಕ್ಷಿಸಿ ಮಾತನಾಡಿದ ಅವರು, 9,647 ರೆಗ್ಯೂಲರ್ ಹಾಗೂ 168 ಖಾಸಗಿ ಮತ್ತು 509 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 34 ಕಾಯಂ ಹಾಗೂ 1 ಖಾಸಗಿ ಪರೀಕ್ಷಾ ಕೇಂದ್ರವಿದ್ದು, 5 ಹೆಚ್ಚುವರಿ ಉಪಕೇಂದ್ರಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

    74 ಸರ್ಕಾರಿ, 59 ಅನುದಾನಿತ ಹಾಗೂ 32 ಅನುದಾನ ರಹಿತ ಸೇರಿ ಒಟ್ಟು 183 ಪ್ರೌಢಶಾಲೆಗಳಿದ್ದು, ಯಾವುದೇ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರ ಇಲ್ಲ. ಒಟ್ಟು 27 ಅಂಗವಿಕಲ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸಿಸಿಟಿವಿ ಆಳವಡಿಸಲಾಗಿದೆ ಎಂದರು.

    ಆರೋಗ್ಯ ಸುರಕ್ಷತೆ: ಕೋವಿಡ್- 19 ಹಿನ್ನಲೆಯಲ್ಲಿ ಪರೀಕ್ಷೆ ನಡೆಸಲು ಎಲ್ಲ ರೀತಿಯ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ 3 ಅಡಿ ಅಂತರ ಇಡಲಾಗುತ್ತಿದ್ದು, ಸ್ಯಾನಿಟೈಸರ್, ಮಾಸ್ಕ್, ಥರ್ಮಲ್ ಸ್ಕ್ರೀನಿಂಗ್ ಇರಲಿದೆ. ಬಿಸಿ ನೀರು ಹಾಗೂ ಬಿಸ್ಕಟ್​ಗಳನ್ನು ಮಕ್ಕಳೇ ತರಬೇಕಾಗಿದ್ದು, ಎಲ್ಲ ಕೇಂದ್ರದಲ್ಲೂ ಶೌಚಗೃಹದ ವ್ಯವಸ್ಥೆಯಿದೆ ಎಂದು ಹೇಳಿದರು.

    ಬಸ್ ವ್ಯವಸ್ಥೆ: ಗ್ರಾಮೀಣ ಭಾಗದಿಂದ ಬರುವ 2255 ವಿದ್ಯಾರ್ಥಿಗಳಿಗೆ ಎನ್​ಡಬ್ಲು್ಯಕೆಆರ್​ಟಿಸಿ ಉತ್ತರ ಕನ್ನಡ ವಿಭಾಗ ಹಾಗೂ ಧಾರವಾಡ ವಿಭಾಗದಿಂದ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಬಸ್ ಸಂಚಾರ ಇಲ್ಲದ ಪ್ರದೇಶದ ವಿದ್ಯಾರ್ಥಿಗಳನ್ನು ವಿವಿಧ ಇಲಾಖೆಗಳ ವಾಹನಗಳ ಮೂಲಕ ಕರೆ ತರಲು ವ್ಯವಸ್ಥೆ ಮಾಡಲಾಗಿದೆ ಎಂದ ಅವರು, ಎಸ್​ಎಸ್​ಎಲ್​ಸಿ ಪರೀಕ್ಷೆಯು ಸುಗಮವಾಗಿ ನಡೆಸಲು 35 ವೀಕ್ಷಕರು, 10 ಜಿಲ್ಲಾ / ತಾಲೂಕು ಜಾಗೃತ ದಳ, 50 ಸ್ಥಾನಿಕ ಜಾಗೃತ ದಳ, 17 ಮಾರ್ಗಾಧಿಕಾರಿಗಳು, 35 ಮುಖ್ಯ ಅಧೀಕ್ಷಕರು, 14 ಉಪ ಮುಖ್ಯ ಅಧೀಕ್ಷಕರು, 35 ಕಸ್ಟೊಡೀಯನ್, 40 ಮೊಬೈಲ್ ಫೋನ್ ಸ್ವಾಧೀನಾಧಿಕಾರಿಗಳು, 730 ಕೊಠಡಿ ಮೇಲ್ವಿಚಾರಕರು, 70 ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ 70 ಪೊಲೀಸ್ ಇಲಾಖೆ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ತಿಳಿಸಿದರು.

    ಈ ವೇಳೆ ದೈಹಿಕ ಶಿಕ್ಷಣ ಪರಿವೀಕ್ಷಕ ವಸಂತ ಭಂಡಾರಿ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಹೆಗಡೆ, ಮಾರಿಕಾಂಬಾ ಪ್ರೌಢಶಾಲೆಯ ಉಪ ಪ್ರಾಚಾರ್ಯ ನಾಗರಾಜ ನಾಯ್ಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts