More

    ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗೆ ಸೋಂಕು!

    ಲಕ್ಷೆ್ಮೕಶ್ವರ: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಸಜ್ಜಾಗಿದ್ದ ಪಟ್ಟಣದ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ವಿದ್ಯಾರ್ಥಿಯೊಬ್ಬನಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಆತನನ್ನು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಮೂಲತಃ ವಿಜಯಪುರದವನಾದ ಪಟ್ಟಣದ ವಿಶೇಷ ಮಕ್ಕಳ ವಸತಿ ಶಾಲೆಯ ಸೋಂಕಿತ ವಿದ್ಯಾರ್ಥಿ ಲಾಕ್​ಡೌನ್ ಘೊಷಣೆಯಾದ ಬಳಿಕ ವಿಜಯಪುರಕ್ಕೆ ಹೋಗಿದ್ದ. ಪರೀಕ್ಷೆಗೆ ಹಾಜರಾಗಲು ವಿಜಯಪುರ ಭಾಗದ ಮೂವರು ವಿದ್ಯಾರ್ಥಿಗಳು ಜೂ. 20ರಂದು ಒಂದೇ ಕಾರಿನಲ್ಲಿ ಪಟ್ಟಣಕ್ಕೆ ಬಂದಿದ್ದಾರೆ. ಅವರಲ್ಲಿ ಒಬ್ಬನಿಗೆ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಜೂ. 22ರಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಿಂದ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಜೂ. 24ರಂದು ಬೆಳಗ್ಗೆ ಸೋಂಕು ದೃಢಪಟ್ಟಿದೆ.

    ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ ವಿದ್ಯಾರ್ಥಿಗಳನ್ನು ಇದೇ ಶಾಲೆಯಲ್ಲಿ ಪ್ರತ್ಯೇಕ ಕೊಠಡಿಗಳಲ್ಲಿ ಕ್ವಾರಂಟೈನ್ ಮಾಡಲಾಗಿದ್ದು, ಎಲ್ಲರ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ. ಆದಷ್ಟು ಬೇಗ ಈ ಮಕ್ಕಳ ವರದಿ ತರಿಸಿಕೊಳ್ಳುವ ಬಗ್ಗೆ ತಾಲೂಕಾಡಳಿತ ಕ್ರಮ ಕೈಗೊಂಡಿದೆ ಎಂದು ಬಿಇಒ ವಿ.ವಿ. ಸಾಲಿಮಠ ತಿಳಿಸಿದ್ದಾರೆ. ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ, ತಾಲೂಕು ವೈದ್ಯಾಧಿಕಾರಿ ಡಾ. ಸುಭಾಸ ಧಾಯಗೊಂಡ, ಡಾ. ಗಿರೀಶ ಮರಡ್ಡಿ, ಸಿಪಿಐ ವಿಕಾಸ ಪಿ.ಎಲ್., ಪಿಎಸ್​ಐ ಶಿವಯೋಗಿ ಲೋಹಾರ, ಪುರಸಭೆ ಮುಖ್ಯಾಧಿಕಾರಿ ಆರ್.ಎಂ. ಪಾಟೀಲ ಭೇಟಿ ನೀಡಿ ಸೋಂಕಿತ ವಿದ್ಯಾರ್ಥಿಯನ್ನು ಜಿಮ್ಸ್​ಗೆ ಸ್ಥಳಾಂತರಿಸಿದರು. ಬಳಿಕ ವಸತಿ ಶಾಲೆಯ ಸುತ್ತಲೂ ಮುಂಜಾಗ್ರತೆ ಕ್ರಮಕ್ಕೆ ಪುರಸಭೆಗೆ ಸೂಚಿಸಿದರು.

    ನಾಲ್ಕು ಪ್ರದೇಶ ಕಂಟೇನ್ಮೆಂಟ್

    ಗದಗ: ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಗದಗ ನಗರದ ಎಸ್.ಎಂ. ಕೃಷ್ಣಾ ನಗರ, ರೋಣ ತಾಲೂಕಿನ ಕುರಡಗಿ, ಶಿರಹಟ್ಟಿ 6ನೇ ವಾರ್ಡ್, ಶಿರಹಟ್ಟಿ ತಾಲೂಕಿನ ಮಜ್ಜೂರ ಗ್ರಾಮದ 1ನೇ ವಾರ್ಡ್ ಅನ್ನು ಕಂಟೇನ್ಮೆಂಟ್ ಪ್ರದೇಶ ಎಂದು ಜಿಲ್ಲಾಡಳಿತ ಘೊಷಿಸಿದೆ.

    ಗದಗ-ಬೆಟಗೇರಿ ನಗರಸಭೆಯ ವಾರ್ಡ್ ನಂ 1ರ ಎಸ್.ಎಂ. ಕೃಷ್ಣಾ ನಗರದಲ್ಲಿ 100 ಮೀ. ಪ್ರದೇಶವನ್ನು ನಿಯಂತ್ರಿತ (ಕಂಟೇನ್ಮೆಂಟ್) ಪ್ರದೇಶವೆಂದು ಮತ್ತು ಸುತ್ತಲಿನ 5 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬಫರ್ ಜೋನ್ ಎಂದು ಘೊಷಿಸಿದ್ದು, ಗದಗ ಬೆಟಗೇರಿ ನಗರಸಭೆಯ ಕಿರಿಯ ಇಂಜಿನಿಯರ್ ಎಚ್.ಎ. ಬಂಡಿವಡ್ಡರ ಅವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

    ರೋಣ ತಾಲೂಕಿನ ಕುರಡಗಿ ಗ್ರಾಮದ ವಾರ್ಡ್ ನಂ. 2ರ ಭಾಗಗಳ 100 ಮೀಟರ್ ಸುತ್ತಲಿನ ಪ್ರದೇಶವನ್ನು ನಿಯಂತ್ರಿತ ಪ್ರದೇಶವೆಂದು ಮತ್ತು 7 ಕಿ.ಮೀ. ಸುತ್ತಲಿನ ಪ್ರದೇಶವನ್ನು ಬಫರ್ ಜೋನ್ ಎಂದು ಘೊಷಿಸಲಾಗಿದೆ. ರೋಣ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸಂತೋಷಕುಮಾರ್ ಪಾಟೀಲ ಅವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

    ಶಿರಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ. 6ರ ಮಟ್ಟಿಭಾವಿ ಪ್ಲಾಟ್, ಆಝಾದ್ ಕಾಲನಿ ಭಾಗದ 100 ಮೀಟರ್ ಸುತ್ತಲಿನ ಪ್ರದೇಶವನ್ನು ನಿಯಂತ್ರಿತ ಹಾಗೂ 5 ಕಿ.ಮೀ. ಸುತ್ತಲಿನ ಪ್ರದೇಶವನ್ನು ಬಫರ್ ಜೋನ್ ಎಂದು ಘೊಷಿಸಲಾಗಿದೆ. ಶಿರಹಟ್ಟಿ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಅವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

    ಶಿರಹಟ್ಟಿ ತಾಲೂಕಿನ ಮಜ್ಜೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ. 1ರ ಶಿವಾಜಿನಗರ ಭಾಗದ 100 ಮೀಟರ್ ಸುತ್ತಲಿನ ಪ್ರದೇಶವನ್ನು ನಿಯಂತ್ರಿತ ಹಾಗೂ 7 ಕಿ.ಮೀ. ಪ್ರದೇಶವನ್ನು ಬಫರ್ ಜೋನ್ ಎಂದು ಘೊಷಿಸಲಾಗಿದೆ. ಶಿರಹಟ್ಟಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನಿಂಗಪ್ಪ ಓಲೇಕಾರ್ ಅವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

    ನಿಯಂತ್ರಿತ ವಲಯ ಎಂದು ಘೊಷಣೆ ಮಾಡಿದ 28 ದಿನಗಳ ಒಳಗೆ ಅಲ್ಲಿ ಯಾವುದೇ ಹೊಸ ಕೋವಿಡ್-19 ಪ್ರಕರಣ ವರದಿಯಾಗದೇ ಇದ್ದಲ್ಲಿ ಅಥವಾ ಆ ನಿಯಂತ್ರಿತ ವಲಯದಲ್ಲಿ ಹತ್ತಕ್ಕಿಂತ ಕಡಿಮೆ ಸಂಪರ್ಕಗಳು, ಗೃಹ ದಿಗ್ಬಂಧನದಲ್ಲಿ ಸಕ್ರಿಯವಾಗಿದ್ದರೆ ನಿಯಂತ್ರಿತ ವಲಯವು ಸಾಮಾನ್ಯ ವಲಯವಾಗಿ ಮತ್ತು ಬಫರ್ ಜೋನ್ ಸಾಮಾನ್ಯ ವಲಯವಾಗಿ ಬದಲಾಗುತ್ತದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts