More

    ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬಸ್, ಬಿಸ್ಕತ್, ಚಾಕ್ಲೆಟ್

    ಶಿವಮೊಗ್ಗ: ಈ ವರ್ಷ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಪರೀಕ್ಷಾ ಕೇಂದ್ರದ ಸ್ಥಳದಲ್ಲಿ ಹಾಸ್ಟೆಲ್ ಇದ್ದರೆ, ವಿದ್ಯಾರ್ಥಿ ಬಯಸಿದರೆ ಹಾಸ್ಟೆಲ್​ನಲ್ಲೇ ತಂಗಬಹುದು. ವಿದ್ಯಾರ್ಥಿಯೊಂದಿಗೆ ಪಾಲಕರೂ ಹಾಸ್ಟೆಲ್​ನಲ್ಲಿ ಉಳಿದುಕೊಳ್ಳಲು ಅವಕಾಶವಿದೆ.

    ಇಷ್ಟೇ ಅಲ್ಲ. ಪರೀಕ್ಷಾ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗೆ ಹಸಿವಾದರೆ ಬಿಸ್ಕತ್, ಚಾಕ್ಲೇಟ್ ಕೂಡಾ ಸಿಗಲಿದೆ. ಜೂನ್ 25ರಿಂದ ಆರಂಭವಾಗಲಿರುವ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಜಿಲ್ಲಾಡಳಿತ ಭಾರಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

    ಶನಿವಾರ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲೆಯಲ್ಲಿ ಒಬ್ಬ ವಿದ್ಯಾರ್ಥಿಯೂ ಪರೀಕ್ಷೆಯಿಂದ ವಂಚಿತನಾಗಬಾರದು ಎಂದು ಖಡಕ್ ಸೂಚನೆ ನೀಡಿದರು. ಪ್ರತಿ ಅಧಿಕಾರಿಯೂ ಪರೀಕ್ಷೆ ಆಯೋಜನೆ ಕುರಿತು ವಯಯಕ್ತಿ ಕಾಳಜಿ ವಹಿಸಬೇಕೆಂದು ತಿಳಿಸಿದರು.

    ಪರೀಕ್ಷಾ ಕೇಂದ್ರಕ್ಕೆ ತೆರಳು ಬಸ್ ಸೌಕರ್ಯ ಹಾಗೂ ಪರೀಕ್ಷೆ ಸಂದರ್ಭದಲ್ಲಿ ಹಾಸ್ಟೆಲ್ ವ್ಯವಸ್ಥೆ ಬಯಸಿರುವ ವಿದ್ಯಾರ್ಥಿಗಳ ವಿವರಗಳನ್ನು ಈಗಾಗಲೇ ಪಡೆಯಲಾಗಿದೆ. ಪ್ರತಿ ತಾಲೂಕಿನಲ್ಲಿ ಬಸ್ ಮಾರ್ಗಗಳನ್ನು ಅಂತಿಮಗೊಳಿಸಬೇಕು. ಪ್ರತಿ ಬಸ್​ನಲ್ಲಿ ನೋಡಲ್ ಅಧಿಕಾರಿ ಇರಬೇಕು. ಈ ಬಸ್​ಗಳು ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಿಡಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.

    ಈ ಬಸ್​ಗಳಲ್ಲದೇ ಪ್ರತಿ ಬಿಇಒ ಅಧೀನದಲ್ಲಿ ಕನಿಷ್ಠ ಐದು ವಾಹನಗಳು ಚಾಲಕರೊಂದಿಗೆ ಸನ್ನದ್ಧವಾಗಿರಬೇಕು. ಬಸ್ ತಪ್ಪಿ ಹೋದರೆ, ಇನ್ನಿತರ ತುರ್ತು ಸಂದರ್ಭಗಳಲ್ಲಿ ವಿದ್ಯಾರ್ಥಿಗಳನ್ನು ಮನೆಯಿಂದ ಕರೆತರಲು ಈ ವಾಹನ ಬಳಸಬೇಕು. ಇದನ್ನು ಹೊರತುಪಡಿಸಿ ಪಿಡಿಒಗಳು ತಮ್ಮ ಹಂತದಲ್ಲಿ ವಾಹನಗಳನ್ನು ಸಜ್ಜುಗೊಳಿಸಿರಬೇಕು ಎಂದು ಸೂಚಿಸಿದರು.

    ಜ್ವರ ಇದ್ದರೆ ಪ್ರತ್ಯೇಕ ಪರೀಕ್ಷೆ: ಕರೊನಾ ಹಿನ್ನೆಲೆಯಲ್ಲಿ ಸರ್ಕಾರದ ರೂಪಿಸಿರುವ ಮಾರ್ಗಸೂಚಿಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ಲೋಪವಿಲ್ಲದಂತೆ ಪಾಲಿಸಬೇಕು. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜನೆ ಮಾಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಥರ್ಮಲ್ ಸ್ಕ್ರೀನಿಂಗ್​ಗೆ ಒಳಪಡಬೇಕು. ಪರೀಕ್ಷಾರ್ಥಿಯ ದೇಹದ ತಾಪಮಾನ ಹೆಚ್ಚು ಕಂಡು ಬಂದರೆ ಆ ವಿದ್ಯಾರ್ಥಿಯನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಎದುರಿಸಲು ವ್ಯವಸ್ಥೆ ಕಲ್ಪಿಸಿ ಎಂದು ಡಿಸಿ ಕೆ.ಬಿ.ಶಿವಕುಮಾರ್ ಅಧಿಕಾರಿಗಳಿಗೆ ತಿಳಿಸಿದರು.

    ಜಿಪಂ ಸಿಇಒ ಎಂ.ಎಲ್.ವೈಶಾಲಿ, ಎಸ್ಪಿ ಕೆ.ಎಂ.ಶಾಂತರಾಜು, ಎಡಿಸಿ ಜಿ.ಅನುರಾಧಾ, ಡಿಎಚ್​ಒ ಡಾ.ರಾಜೇಶ್ ಸುರಗೀಹಳ್ಳಿ, ಡಿಡಿಪಿಐ ಎನ್.ಎಂ.ರಮೇಶ್ ಇತರರಿದ್ದರು. ಎಲ್ಲ ಬಿಇಒಗಳು ಸಭೆಯಲ್ಲಿ ಭಾಗವಹಿಸಿದ್ದರು.

    ಪರೀಕ್ಷಾರ್ಥಿಗಳ ವಿವರ: ಬಾಲಕರು-12,287, ಬಾಲಕಿಯರು-11,956, ಒಟ್ಟು-24,243 ವಿದ್ಯಾರ್ಥಿಗಳು.

    ಒಟ್ಟು ಪರೀಕ್ಷಾ ಕೇಂದ್ರಗಳು-84 : 45 ಸರ್ಕಾರಿ ಶಾಲೆಯಲ್ಲಿ ಕೇಂದ್ರ, 24 ಅನುದಾನಿತ, 17 ಅನುದಾನ ರಹಿತ

    ಎಲ್ಲೆಲ್ಲಿ? ಎಷ್ಟೆಷ್ಟು ಕೇಂದ್ರ?: ಭದ್ರಾವತಿ ತಾಲೂಕು -15, ಹೊಸನಗರ-5, ಸಾಗರ-10, ಶಿಕಾರಿಪುರ -11, ಶಿವಮೊಗ್ಗ -26, ಸೊರಬ -10, ತೀರ್ಥಹಳ್ಳಿ-7

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts