More

    ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿ

    ಧಾರವಾಡ: ಕರೊನಾ ಹಾವಳಿಯಿಂದ ಮುಂದೂಡಲ್ಪಟ್ಟ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಜೂ. 25ರಿಂದ ನಡೆಯಲಿವೆ. ಪ್ರತಿ ವಿದ್ಯಾರ್ಥಿಯೂ ಪರೀಕ್ಷೆಗೆ ಹಾಜರಾಗುವಂತೆ ಆತ್ಮವಿಶ್ವಾಸ ಮೂಡಿಸಿ ಸಾರಿಗೆ ಸೌಲಭ್ಯ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಪರೀಕ್ಷೆ ಪಾವಿತ್ರ್ಯ ಮತ್ತು ಗಾಂಭೀರ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪರೀಕ್ಷೆ ನಡೆಸಬೇಕು ಎಂದು ಶಿಕ್ಷಣ ಸಚಿವ ಎಸ್. ಸುರೇಶಕುಮಾರ್ ಹೇಳಿದರು.

    ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷೆಗಳು ಯಾವ ಕಾರಣಕ್ಕೂ ರದ್ದಾಗಬಾರದು ಎಂಬ ಆಶಯವನ್ನು ಮಕ್ಕಳು ಹಾಗೂ ಬಹುತೇಕ ಶಿಕ್ಷಣ ತಜ್ಞರು ವ್ಯಕ್ತಪಡಿಸಿದ್ದಾರೆ. ಸರ್ಕಾರ ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪರೀಕ್ಷೆ ಆಯೋಜಿಸಲು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿದೆ. ಈ ಸೂತ್ರಗಳನ್ನು ಹೈಕೋರ್ಟ್ ಸಹ ಮೆಚ್ಚಿದೆ ಎಂದರು.

    ರಾಜ್ಯ ಸಾರಿಗೆ ಸಂಸ್ಥೆಯೊಂದಿಗೆ ರ್ಚಚಿಸಿದ್ದು, ಸೂಕ್ತ ದರದಲ್ಲಿ ಬಸ್​ಗಳನ್ನು ಒದಗಿಸಲು ಸಿದ್ಧವಿದೆ. ಖಾಸಗಿ ಶಾಲೆಗಳ ವಾಹನಗಳನ್ನೂ ಬಳಸಿಕೊಳ್ಳಲಾಗುವುದು. ಎಲ್ಲ ಜಿಲ್ಲೆಗಳಲ್ಲಿ ಮಕ್ಕಳನ್ನು ಕರೆತರುವ ಮಾರ್ಗದ ನಕ್ಷೆ ಸಿದ್ಧಪಡಿಸಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿ ಪರೀಕ್ಷೆ ಬರೆಯಲು ಪ್ರೋತ್ಸಾಹಿಸಬೇಕು. ರಾಜ್ಯದಲ್ಲಿ ಕರೊನಾ ನಿರೀಕ್ಷಿತ ಪ್ರಮಾಣದಲ್ಲಿ ಭಯಾನಕವಾಗಿಲ್ಲ. ಹೀಗಾಗಿ ಯಾರೂ ಆತಂಕ ಪಡಬೇಕಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆ ಜೂನ್ 2020ರ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಸವಾಲಾಗಿ ಸ್ವೀಕರಿಸಿ, ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ತನ್ನ ಸಾಮರ್ಥ್ಯ ಮತ್ತು ಕ್ಷಮತೆ ಸಾಬೀತುಪಡಿಸಬೇಕು ಎಂದು ಹೇಳಿದರು.

    ಎಲ್ಲ ಜಿಲ್ಲೆಗಳಲ್ಲಿ ಮಾದರಿ ಪರೀಕ್ಷಾ ಕೊಠಡಿ ಸಿದ್ಧಪಡಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಅಲ್ಲಿನ ವಿಧಾನಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು. ಕೇಂದ್ರಗಳಲ್ಲಿ ದೈಹಿಕ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯ. ಸಿಬ್ಬಂದಿ ಕೈಗವಸು ಧರಿಸಿ ಕಾರ್ಯನಿರ್ವಹಿಸಬೇಕು. ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆ ಸರಣಿಯನ್ನು ವಿದ್ಯಾರ್ಥಿಳಿಗೆ ತಿಳಿಸಿಕೊಡಬೇಕು. ಪ್ರತಿ ವಿದ್ಯಾರ್ಥಿಯನ್ನು ನೇರವಾಗಿ ಸಂರ್ಪಸಿ ಪರೀಕ್ಷೆ ಕುರಿತು ಮಾಹಿತಿ ನೀಡಬೇಕು ಎಂದು ಸೂಚಿಸಿದರು.

    ಧಾರವಾಡ ಜಿಪಂ ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿ, ಜಿಲ್ಲೆಯಲ್ಲಿ 90 ಪರೀಕ್ಷಾ ಕೇಂದ್ರಗಳಿವೆ. ಹೆಚ್ಚುವರಿಯಾಗಿ 17 ಉಪ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ. 27,841 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದರು. ಶಾಸಕ ಅಮೃತ ದೇಸಾಯಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡ ಉಪನಿರ್ದೇಶಕ ಮೋಹನ ಹಂಚಾಟೆ, ಗದಗ ಉಪನಿರ್ದೇಶಕ ಎನ್.ಎಚ್. ನಾಗೂರ, ಹಾವೇರಿ ಉಪನಿರ್ದೇಶಕ ಎ.ಎನ್. ವಡಗೇರಿ, ಮೂರು ಜಿಲ್ಲೆಗಳ ಡಯಟ್ ಪ್ರಾಚಾರ್ಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಹಿರಿಯ ಅಧಿಕಾರಿಗಳು, ಇತರರು ಇದ್ದರು.

    ಪರೀಕ್ಷಾ ಕೇಂದ್ರಗಳಿಗೆ ಮಕ್ಕಳು ತಮ್ಮ ಮನೆಯಿಂದಲೇ ಕುದಿಸಿ ಆರಿಸಿದ ನೀರನ್ನು ತರಬೇಕು. ಗದಗ, ಹಾವೇರಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಸುಮಾರು 13 ಸಾವಿರ ವಿದ್ಯಾರ್ಥಿಗಳು ಹಾಸ್ಟೆಲ್ ಮತ್ತು ವಸತಿ ಶಾಲೆಗಳಲ್ಲಿ ವಾಸವಿರುವವರಾಗಿದ್ದಾರೆ. ಸಂಬಂಧಿಸಿದ ಇಲಾಖೆಗಳ ಹಾಸ್ಟೆಲ್ ಮತ್ತು ವಸತಿ ಶಾಲೆಗಳನ್ನು ಜೂ. 15ರೊಳಗೆ ಪುನರಾರಂಭಿಸಿದರೆ ಆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.

    | ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ

    ಮುಖ್ಯಾಂಶಗಳು

    ಎಸ್ಸೆಸ್ಸೆಲ್ಸಿ ಪರೀಕ್ಷೆ ಜೂ. 25ರಿಂದ ಜು. 4ರವರೆಗೆ ನಡೆಸಲು ತೀರ್ಮಾನ

    ಒಟ್ಟು 8.48 ಲಕ್ಷ ಮಕ್ಕಳು ಪರೀಕ್ಷೆಗೆ ಹಾಜರು

    ಮಕ್ಕಳ ನೆರವಿಗಾಗಿ ಎಲ್ಲ ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಸಹಾಯವಾಣಿ

    ಕಂಟೇನ್ಮೆಂಟ್ ಪ್ರದೇಶದಲ್ಲಿನ ಪರೀಕ್ಷಾ ಕೇಂದ್ರ ಸ್ಥಳಾಂತರ

    ಪರೀಕ್ಷೆ ನಡೆಯುವಾಗ ಕಂಟೇನ್ಮೆಂಟ್ ಘೊಷಣೆಯಾದರೆ ಅಲ್ಲಿನ ಮಕ್ಕಳಿಗೆ ಪೂರಕ ಪರೀಕ್ಷೆ

    ಶಾಲೆ, ಕಾಲೇಜುಗಳ ಪ್ರವೇಶ ಶುಲ್ಕದಲ್ಲಿ ಹೆಚ್ಚಳ ಮಾಡದಂತೆ ಸೂಚನೆ

    ಶುಲ್ಕ ತುಂಬಲು ಸಾಧ್ಯ ಇರುವವರಿಂದ ಮಾತ್ರ ಪಡೆಯಬೇಕು

    ಪಿಯುಸಿ ಮೌಲ್ಯಮಾಪನ ಕುರಿತು ಸಿಎಂ ಜತೆ ಚರ್ಚೆ ನಡೆಸಿ ತೀರ್ವನ

    ಆನ್​ಲೈನ್ ಶಿಕ್ಷಣ ಕುರಿತು ಶೀಘ್ರದಲ್ಲಿ ತೀರ್ವನ: ಶೈಕ್ಷಣಿಕ ವರ್ಷ ಆರಂಭದ ಕುರಿತು ಇನ್ನೂ ನಿರ್ಧಾರ ಕೈಗೊಂಡಿಲ್ಲ. ಆನ್​ಲೈನ್ ತರಗತಿ ಬಗ್ಗೆ ಅಭಿಪ್ರಾಯ ಕೇಳಿದ ಸಂದರ್ಭದಲ್ಲಿ ಪರ, ವಿರೋಧಗಳೂ ಬಂದಿವೆ. ಹೀಗಾಗಿ ಈ ಕುರಿತು 2-3 ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಎಸ್. ಸುರೇಶಕುಮಾರ್ ತಿಳಿಸಿದರು.

    ಧಾರವಾಡದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನ್​ಲೈನ್​ನಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವುದು ಒಳ್ಳೆಯ ಬೆಳವಣಿಗೆಯಲ್ಲ. ಇದು ಮಾನಸಿಕವಾಗಿ ಮಕ್ಕಳ ಮೇಲೆ ಅನೇಕ ಪರಿಣಾಮಗಳನ್ನು ಬೀರಲಿದೆ ಎಂದು ನಿಮ್ಹಾನ್ಸ್ ನಿರ್ದೇಶಕರು ಅಭಿಪ್ರಾಯ ನೀಡಿದ್ದಾರೆ. ಹೀಗಾಗಿ ಎಷ್ಟು ವರ್ಷದ ಮಕ್ಕಳಿಗೆ ಎಷ್ಟು ಹೊತ್ತು ಆನ್​ಲೈನ್ ಶಿಕ್ಷಣ ನೀಡಬಹುದು ಎನ್ನುವುದು ಸೇರಿ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು.

    ಜೂ. 10ರಿಂದ 12ರವರೆಗೆ ರಾಜ್ಯದ ಎಲ್ಲ ಶಾಲೆಗಳಲ್ಲಿ ಪಾಲಕರ, ಎಸ್​ಡಿಎಂಸಿ ಸದಸ್ಯರ ಸಭೆ ನಡೆಸಿ ಶಾಲೆಗಳನ್ನು ಯಾವಾಗ, ಯಾವ ರೀತಿಯಲ್ಲಿ ಪ್ರಾರಂಭಿಸುವುದು ಎಂಬ ಅಭಿಪ್ರಾಯ ಸಂಗ್ರಹಿಸಿ ಕಳುಹಿಸಲು ಮುಖ್ಯಾಧ್ಯಾಪಕರಿಗೆ ಸೂಚಿಸಲಾಗಿದೆ ಎಂದರು.

    ಎಲ್​ಕೆಜಿ, ಯುಕೆಜಿ ಹಾಗೂ ಪ್ರಾಥಮಿಕ ಶಾಲೆಗಳನ್ನು ಸದ್ಯಕ್ಕೆ ತೆರೆಯಬೇಡಿ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಸಹಿ ಅಭಿಯಾನ ಸಹ ನಡೆಸಿದ್ದಾರೆ. ಹೀಗಾಗಿ ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

    18ರ ನಂತರ ಕೌನ್ಸೆಲಿಂಗ್: 2015ರಲ್ಲಿ ಅರ್ಜಿ ಆಹ್ವಾನಿಸಿದ್ದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಉಪನ್ಯಾಸಕರ ನೇಮಕಾತಿಯ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಕೆಲ ಸಮಸ್ಯೆಗಳಿಂದ ಆದೇಶ ಪತ್ರ ನೀಡಲು ಸಾಧ್ಯವಾಗಿಲ್ಲ. ಜೂ. 18ರ ಬಳಿಕ ಕೌನ್ಸೆಲಿಂಗ್ ನಡೆಸಿ ಅವರಿಗೆ ನೇಮಕಾತಿ ಆದೇಶ ಪ್ರತಿಗಳನ್ನು ನೀಡಸಲಾಗುವುದು ಎಂದು ಸಚಿವ ಸುರೇಶಕುಮಾರ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts