More

    ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ

    ಧಾರವಾಡ: ಜಿಲ್ಲೆಯಲ್ಲಿ ಜೂ. 25ರಿಂದ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆಗೆ ನೀಡಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನಗಳ (ಎಸ್​ಒಪಿ) ಪ್ರಕಾರ ಜಿಲ್ಲೆಯಲ್ಲಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಏರ್ಪಡಿಸಲು ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಎದುರಿಸಬೇಕು ಎಂದರು.

    ಜಿಲ್ಲೆಯಲ್ಲಿ ಒಟ್ಟು 27,841 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, 90 ಕೇಂದ್ರಗಳು ಹಾಗೂ 17 ಹೆಚ್ಚುವರಿ ಬ್ಲಾಕ್ ಪರೀಕ್ಷೆ ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ. ಎಲ್ಲ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಜತೆಗೆ ಪ್ರತಿ ಕೇಂದ್ರಗಳಲ್ಲಿ 2 ಕೊಠಡಿಗಳನ್ನು ಹೆಚ್ಚವರಿಯಾಗಿ ಮೀಸಲಿರಿಸಲಾಗಿದೆ. ಪರೀಕ್ಷೆ ಕಾರ್ಯಕ್ಕೆ 107 ಮುಖ್ಯ ಅಧೀಕ್ಷಕರು, 107 ಮೊಬೈಲ್ ಸ್ವಾಧೀನಾಧಿಕಾರಿಗಳು, 90 ಕಸ್ಟೋಡಿಯನ್, 34 ಮಾರ್ಗಾಧಿಕಾರಿಗಳು, 90 ಸ್ಥಾನಿಕ ಜಾಗೃತದಳ ಅಧಿಕಾರಿಗಳನ್ನು ನೇಮಿಸಲಾಗಿದೆ. ಇದಲ್ಲದೆ ಪ್ರತಿ ಕೇಂದ್ರಕ್ಕೆ 2ರಂತೆ ಒಟ್ಟು 180 ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂ ಸೇವಕರು ಹಾಗೂ 180 ಅರೆ ವೈದ್ಯಕೀಯ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.

    ಪರೀಕ್ಷೆ ಕೇಂದ್ರಗಳಲ್ಲಿ ಈಗಾಗಲೇ ಮೊದಲ ಹಂತದ ಸ್ಯಾನಿಟೈಸೇಷನ್ ಮಾಡಲಾಗಿದೆ. ಪರೀಕ್ಷೆ ಮುನ್ನಾ ದಿನ ಮತ್ತೊಮ್ಮೆ ದ್ರಾವಣ ಸಿಂಪಡಣೆ ನಡೆಯಲಿದ್ದು, ಪ್ರತಿ ಪರೀಕ್ಷೆ ನಂತರ ಕೇಂದ್ರದ ಎಲ್ಲ ಕೊಠಡಿ, ಪೀಠೋಪಕರಣಗಳನ್ನು ಸ್ಯಾನಿಟೈಸ್ ಮಾಡಲು ಕೇಂದ್ರಗಳ ಮುಖ್ಯ ಅಧೀಕ್ಷಕರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಲಾಗಿದೆ. ಪ್ರತಿ ಪರೀಕ್ಷೆ ಕೇಂದ್ರದ 200 ವಿದ್ಯಾರ್ಥಿಗಳಿಗೆ ಒಂದರಂತೆ ಒಟ್ಟು 184 ಥರ್ಮಲ್ ಸ್ಕ್ಯಾನರ್​ಗಳನ್ನು ಶಿಕ್ಷಣ ಇಲಾಖೆ ಮೂಲಕ ಪೂರೈಸಲಾಗಿದೆ ಎಂದರು.

    ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರದೊಂದಿಗೆ ಮಾಸ್ಕ್ ನೀಡಲಾಗಿದೆ. ಇದಲ್ಲದೆ ಕೇಂದ್ರ ಸಚಿವರು ಹಾಗೂ ವಿವಿಧ ಸಂಘ, ಸಂಸ್ಥೆಗಳಿಂದ ಇಲಾಖೆಗೆ ನೀಡಿರುವ ಮಾಸ್ಕ್ ಹಾಗೂ ಸ್ಯಾನಿಟೈಸರ್​ಅನ್ನು ಪರೀಕ್ಷೆ ದಿನದಂದು ಮತ್ತೆ ನೀಡಲಾಗುವುದು. ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಸೂಕ್ತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ಸಂದೇಹಗಳಿದ್ದಲ್ಲಿ ಸಹಾಯವಾಣಿ 1077 ಸಂಖ್ಯೆ ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದರು.

    ಪ್ರತಿ ಕೇಂದ್ರಕ್ಕೆ ವಿದ್ಯಾರ್ಥಿಗಳು ಯಾವ ರೀತಿಯಲ್ಲಿ ಆಗಮಿಸುತ್ತಾರೆ ಎಂಬುದನ್ನು ಶಾಲಾವಾರು ಮಾಹಿತಿ ಪಡೆದು ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಬಸ್ ವ್ಯವಸ್ಥೆಗಾಗಿ ವಾಕರಸಾ ಸಂಸ್ಥೆ ಹುಬ್ಬಳ್ಳಿ ಹಾಗೂ ಧಾರವಾಡ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸೂಚನೆ ನೀಡಲಾಗಿದೆ. ಸಾರಿಗೆ ಸಂಸ್ಥೆ ಬಸ್​ಗಳ ಸೌಲಭ್ಯವಿಲ್ಲದ ಕಡೆಗಳಲ್ಲಿ ಒಟ್ಟು 59 ಖಾಸಗಿ ವಾಹನಗಳನ್ನು ಮತ್ತು ಇತರ ಬಸ್​ಗಳ ವ್ಯವಸ್ಥೆ ಸಹ ಮಾಡಲಾಗಿದೆ ಎಂದರು.

    ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಜೂ. 2ರಿಂದ 4ರವರೆಗೆ ಪರೀಕ್ಷೆ ಕೇಂದ್ರಗಳ ಮುಖ್ಯ ಅಧೀಕ್ಷಕರ ಸಭೆಯನ್ನು ಗೂಗಲ್ ಮೀಟ್ ಮೂಲಕ ನಡೆಸಿ, ಪರೀಕ್ಷೆ ಕೇಂದ್ರಗಳಲ್ಲಿ ಮಾಡಿಕೊಳ್ಳಬೇಕಾದ ಸಿದ್ಧತೆ ಕುರಿತು ಸೂಚಿಸಿದ್ದಾರೆ. ವಿವಿಧ ದಿನಪತ್ರಿಕೆಗಳು ಮತ್ತು ಮಾಧ್ಯಮಗಳ ಮೂಲಕ ನೇರ ಫೋನ್​ಇನ್ ಕಾರ್ಯಕ್ರಮ ಆಯೋಜಿಸಿ ಪಾಲಕರ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲಾಗಿದೆ. ಎಲ್ಲ ಪರೀಕ್ಷೆ ಕೇಂದ್ರಗಳಲ್ಲಿ ಹಾಗೂ ಪ್ರಶ್ನೆ ಪತ್ರಿಕೆಗಳನ್ನು ಖಜಾನೆಗಳಿಂದ ಒಯ್ಯುವಾಗ ಮಾರ್ಗಾಧಿಕಾರಿಗಳ ಜತೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ವಿವರಿಸಿದರು.

    ಜಿಪಂ ಸಿಇಒ ಡಾ. ಬಿ.ಸಿ. ಸತೀಶ, ಡಿಡಿಪಿಐ ಮೋಹನ ಹಂಚಾಟೆ, ಜಿಲ್ಲಾ ನೋಡಲ್ ಅಧಿಕಾರಿ ಪೂರ್ಣಿಮಾ ಮುಕ್ಕುಂದಿಮಠ, ವಿಷಯ ಪರಿವೀಕ್ಷಕ ಸಂಜಯ್ ಮಾಳಿ, ಇತರರು ಇದ್ದರು.

    ಪರಿಶೀಲಿಸಲು ಅವಕಾಶ

    ವಿದ್ಯಾರ್ಥಿಗಳು ಪರೀಕ್ಷೆ ಮುನ್ನಾ ದಿನವಾದ ಜೂ. 24ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 2 ಗಂಟೆವರೆಗೆ ಕೇಂದ್ರಗಳಿಗೆ ಆಗಮಿಸಿ ತಮ್ಮ ಆಸನ ವ್ಯವಸ್ಥೆ ಪರಿಶೀಲಿಸಿಕೊಳ್ಳಬಹುದು. ಪರೀಕ್ಷೆ ದಿನದಂದು ತಪಾಸಣೆಗೆ ಒಳಪಟ್ಟು ಆಸನ ಪರಿಶೀಲನೆ ನಡೆಸುವುದು ವಿಳಂಬವಾಗಬಹುದು ಎಂಬ ನಿಟ್ಟಿನಲ್ಲಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ಚೋಳನ್ ತಿಳಿಸಿದರು.

    ಕಂಟೇನ್ಮೆಂಟ್​ನಲ್ಲಿ ಕೇಂದ್ರಗಳಿಲ್ಲ

    ಯಾವುದೇ ಪರೀಕ್ಷೆ ಕೇಂದ್ರಗಳು ಘೊಷಿತ ಕಂಟೇನ್ಮೆಂಟ್ ವಲಯದಲ್ಲಿ ಇಲ್ಲ. ಪರೀಕ್ಷೆ ಕೇಂದ್ರವನ್ನು ಕ್ವಾರಂಟೈನ್ ಕೇಂದ್ರವಾಗಿ ಬಳಸಿಲ್ಲ. ಜಿಲ್ಲೆಯ ಒಟ್ಟು ಪರೀಕ್ಷೆ ಕೇಂದ್ರಗಳ ಪೈಕಿ 46 ಶಹರ ಹಾಗೂ 44 ಗ್ರಾಮೀಣ ವಲಯಗಳಲ್ಲಿವೆ. ಹೀಗಾಗಿ ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಎದುರಿಸಬಹುದು ಎಂದು ಚೋಳನ್ ತಿಳಿಸಿದರು.

    ಪರೀಕ್ಷೆ ಕೇಂದ್ರಗಳಲ್ಲಿ 200 ವಿದ್ಯಾರ್ಥಿಗಳಿಗೆ ಒಂದರಂತೆ ಆರೋಗ್ಯ ತಪಾಸಣೆ ಕೇಂದ್ರ ತೆರೆಯಲಾಗಿದೆ. ಬೆಳಗ್ಗೆ 8.30ರಿಂದ ಪರೀಕ್ಷೆ ಮುಗಿಯುವವರೆಗೂ ಆರೋಗ್ಯ ತಪಾಸಣೆ ಕೇಂದ್ರ ಕಾರ್ಯ ನಿರ್ವಹಿಸಲಿದೆ. ಪ್ರತಿ ಡೆಸ್ಕ್ ಮಧ್ಯೆ ಮೂರು ಅಡಿ ಅಂತರವಿರುವಂತೆ ಆಸನ ವ್ಯವಸ್ಥೆ ಮಾಡಲಾಗಿದೆ. ಕೇಂದ್ರಗಳಿಗೆ ಆಗಮಿಸುವ ವಿದ್ಯಾರ್ಥಿಗಳ ತಪಾಸಣೆ ನಡೆಸಲಾಗುವುದು. ನೀರಿನ ಬಾಟಲಿಯನ್ನು ಮನೆಯಿಂದ ತಂದುಕೊಳ್ಳಲು ತಿಳಿಸಲಾಗಿದೆ.

    | ದೀಪಾ ಚೋಳನ್, ಜಿಲ್ಲಾಧಿಕಾರಿ

    ಪರೀಕ್ಷಾರ್ಥಿಗಳಿಗೆ ಸಹಾಯವಾಣಿ

    ಹುಬ್ಬಳ್ಳಿ: ಇಲ್ಲಿನ ಕೆ.ಎಚ್. ಪಾಟೀಲ ಪಿಯು ಸೈನ್ಸ್ ಕಾಲೇಜ್ ವತಿಯಿಂದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳ ಸಹಾಯಕ್ಕಾಗಿ 24/7 ಸಹಾಯವಾಣಿ ಆರಂಭಿಸಲಾಗಿದೆ ಎಂದು ಪ್ರಾಂಶುಪಾಲ ಎಸ್.ಬಿ. ಸಣಗೌಡರ ತಿಳಿಸಿದರು.

    ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.25ರಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ ಆರಂಭವಾಗಲಿದ್ದು, ವಿದ್ಯಾರ್ಥಿಗಳ ಮನೋಬಲ ಹೆಚ್ಚಿಸುವುದು ಮತ್ತು ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಸಹಾಯವಾಣಿ ಆರಂಭಿಸಲಾಗಿದೆ. ಕರೊನಾ ಸಂಕಷ್ಟದಿಂದಾಗಿ ಗೊಂದಲಕ್ಕೀಡಾಗಿರುವ ವಿದ್ಯಾರ್ಥಿಗಳ ಅಂತಿಮ ತಯಾರಿ ಸಲುವಾಗಿ ಪರಿಣತ ಶಿಕ್ಷಕರು ಸಲಹೆ ನೀಡಲಿದ್ದಾರೆ. ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸಲಿದ್ದಾರೆ ಎಂದರು.

    ಆಯಾ ವಿಷಯದ ಪರೀಕ್ಷೆಯ ಹಿಂದಿನ ದಿನ ಬೆಳಗ್ಗೆ 8 ಗಂಟೆಯಿಂದ ಮರುದಿನ ಬೆಳಗ್ಗೆ 8 ಗಂಟೆವರೆಗೆ ಸಹಾಯವಾಣಿ ಸೇವೆ ಲಭ್ಯ ಇರುತ್ತದೆ. ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಸೇರಿ ಭಾಷಾ ವಿಷಯಗಳ ತಜ್ಞರು ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ಒದಗಿಸಲಿದ್ದಾರೆ. ಆಸಕ್ತರು ಮೊ.ಸಂ. 72045 93414, 72045 93415, 72045 93416, 9343807216ಗೆ ಸಂರ್ಪಸುವಂತೆ ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಕಾಲೇಜು ಕಾರ್ಯದರ್ಶಿ ಶಂಕರ ಕುಂಬಾರ, ರಾಜಣ್ಣ ಗುಡಿಮನಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts