More

    ಎಸ್ಸೆಸ್ಸೆಲ್ಸಿ ಪರೀಕ್ಷಾ ಭಯ ದೂರ

    ಹಾನಗಲ್ಲ: ಹಾವೇರಿ ಹಾಗೂ ಹಾನಗಲ್ಲ ತಾಲೂಕಿನ ಆಡೂರು, ಅಕ್ಕಿಆಲೂರು, ಹಾನಗಲ್ಲ ಪಟ್ಟಣದ ಪರೀಕ್ಷಾ ಕೇಂದ್ರಗಳಿಗೆ ಶಿಕ್ಷಣ ಇಲಾಖೆ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಸೋಮವಾರ ಭೇಟಿ ನೀಡಿ, ವ್ಯವಸ್ಥೆ ಪರಿಶೀಲಿಸಿದರು.

    ನಂತರ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಎಸ್​ಎಸ್​ಎಲ್​ಸಿ ಪರೀಕ್ಷೆ ಸುಲಲಿತವಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಮಧ್ಯೆ ಪರಸ್ಪರ ಅಂತರ, ಮಾಸ್ಕ್ ವ್ಯವಸ್ಥೆ, ಸ್ಯಾನಿಟೈಸೇಶನ್ ಕೈಗೊಂಡಿದ್ದರಿಂದ ಯಾವುದೇ ಭಯವಿಲ್ಲದೇ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಈಗ ಪಾಲಕರಲ್ಲೂ ಭಯ ನಿವಾರಣೆಯಾಗಿದೆ ಎಂದರು.

    ಇಡೀ ರಾಷ್ಟ್ರ ರಾಜ್ಯದತ್ತ ನೋಡುವಂತೆ ಪರೀಕ್ಷೆ ಸಿದ್ಧತೆ ಕೈಗೊಂಡಿದ್ದೇವೆ. ಕೋವಿಡ್ ಹಿನ್ನೆಲೆಯಲ್ಲೂ ಶೈಕ್ಷಣಿಕ ಚಟುವಟಿಕೆಗಳನ್ನು ಹೇಗೆ ನಡೆಸಬಹುದು ಎಂಬುದನ್ನು ಈ ಪರೀಕ್ಷೆ ಮೂಲಕ ತೋರಿಸಿಕೊಟ್ಟಿದ್ದೇವೆ. ಹಾವೇರಿ ಜಿಲ್ಲೆಯಾದ್ಯಂತ ಹತ್ತಾರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಅತ್ಯಂತ ಅಚ್ಚುಕಟ್ಟಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಶಿಕ್ಷಕರು, ಅಧಿಕಾರಿಗಳು ಪರೀಕ್ಷೆಗಾಗಿ ಬಹಳಷ್ಟು ಶ್ರಮ ವಹಿಸಿದ್ದಾರೆ. ಅವರ ಶ್ರಮ ಸಾರ್ಥಕವಾಗುತ್ತಿದೆ ಎಂದರು.

    ಪಾಲಕರು-ಸಂಘ ಸಂಸ್ಥೆಗಳು ಪರೀಕ್ಷೆಯ ಮೊದಲಿಗೆ ಒಂದಷ್ಟು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಅಚ್ಚುಕಟ್ಟು ವ್ಯವಸ್ಥೆ, ಮುಂಜಾಗ್ರತೆ ಕ್ರಮಗಳನ್ನು ಗಮನಿಸಿದ ನಂತರ ಅವರೆಲ್ಲರ ಆತಂಕ ದೂರವಾಗಿದೆ. ಕೋವಿಡ್ ಸಂದರ್ಭದಲ್ಲಿನ ಎಲ್ಲ ಕ್ರಮಗಳನ್ನು ಜರುಗಿಸಿ ಪರೀಕ್ಷೆ ನಡೆಸುತ್ತಿದ್ದೇವೆ. ಹಾವೇರಿಯಲ್ಲಿ ಸೇಂಟ್ ಆನ್ಸ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಖಾಸಗಿ ಅಭ್ಯರ್ಥಿಯೊಬ್ಬ ನಕಲು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಡಿಬಾರ್ ಮಾಡಲಾಗಿದೆ ಎಂದರು.

    ತಾಲೂಕಿನಲ್ಲಿ 1315 ಬಾಲಕರು, 1812 ಬಾಲಕಿಯರು ಸೇರಿ 3127 ವಿದ್ಯಾರ್ಥಿಗಳು ವಿಜ್ಞಾನ ಪರೀಕ್ಷೆಗೆ ಹಾಜರಾಗಿದ್ದರು. 90 ಬಾಲಕ, ಬಾಲಕಿಯರು ಪರೀಕ್ಷೆಗೆ ಗೈರಾಗಿದ್ದರು. 37 ವಿದ್ಯಾರ್ಥಿಗಳು ತಾಲೂಕಿನಿಂದ ಹೊರ ತಾಲೂಕಿನ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ವಿವಿಧ ಕಾರಣಗಳಿಂದಾಗಿ 15 ವಿದ್ಯಾರ್ಥಿಗಳು ಗೈರಾಗಿದ್ದನ್ನು ಸೇರಿ ಒಟ್ಟು 142 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿಲ್ಲ ಎಂದು ವಿವರಿಸಿದರು.

    ಪರೀಕ್ಷಾ ನೋಡಲ್ ಅಧಿಕಾರಿ ಬಿ. ಉಮೇಶ, ಮಾರ್ಗಾಧಿಕಾರಿ ಅನಿಲಕುಮಾರ ಗೋಣೆಣ್ಣನವರ ಇದ್ದರು.

    ಶಿಕ್ಷಣ ಆಯುಕ್ತರು ಆಡೂರಿನ ಸರ್ಕಾರಿ ಪ್ರೌಢಶಾಲೆ, ಅಕ್ಕಿಆಲೂರಿನ ನರಸಿಂಗರಾವ್ ದೇಸಾಯಿ ಪ್ರೌಢಶಾಲೆ, ಸಿಂಧೂರ ಸಿದ್ದಪ್ಪ ಬಾಲಕಿಯರ ಪ್ರೌಢಶಾಲೆ, ಹಾನಗಲ್ಲಿನ ಎನ್​ಸಿಜೆಸಿ ಪ್ರೌಢಶಾಲೆ, ಅಂಜುಮನ್ ಪ್ರೌಢಶಾಲೆ, ರೋಶನಿ ಪ್ರೌಢಶಾಲೆ ಸೇರಿ ತಾಲೂಕಿನ ಆರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
    | ಎಚ್. ಶ್ರೀನಿವಾಸ, ಬಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts