More

    ಎಸ್ಸೆಸ್ಸೆಲ್ಸಿ ,ಚಿತ್ರದುರ್ಗಕ್ಕೆ ಫಲಿತಾಂಶ ಪುನರಾವರ್ತಿಸುವ ಸವಾಲು


    ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
    ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯದಲ್ಲೇ ನಂ.1 ಸ್ಥಾನ ಗಳಿಸಿದ್ದ ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ಇದೀಗ ಅದೇ ಸ್ಥಾನ ಉಳಿಸಿಕೊಳ್ಳುವ ಸವಾಲು ಎದುರಾಗಿದೆ.
    ಕ್ರಿಯಾಶೀಲ ಪ್ರಯೋಗಗಳ ಮೂಲಕ ರಾಜ್ಯದ 32 ಶೈಕ್ಷಣಿಕ ಜಿಲ್ಲೆಗಳ ಪೈಕಿ ಕಳೆದ ಬಾರಿ ನಂ.1 ಪಟ್ಟಕ್ಕೆ ಚಿತ್ರದುರ್ಗ ಲಗ್ಗೆ ಇಟ್ಟಿತ್ತು. ಪರೀಕ್ಷೆ ಸಮೀಪಿಸುತ್ತಿದ್ದಂತೆ ಉಳಿದ ಜಿಲ್ಲೆಗಳು ಕೂಡ ಫಲಿತಾಂಶಕ್ಕೆ ಪೈಪೋಟಿ ನಡೆಸಿವೆ.
    ಹಿಂದಿನ ವರ್ಷದ ಫಲಿತಾಂಶವನ್ನೇ ಪುನರಾವರ್ತಿಸಲು ಕಳೆದ ಜೂನ್‌ನಿಂದಲೇ ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪಾಲಕರ ಸಹಕಾರದಿಂದ ಕ್ರಿಯಾಯೋಜನೆ ಅನುಷ್ಠಾನಗೊಳಿಸುತ್ತಿದ್ದಾರೆ.
    ಜಿಲ್ಲಾಡಳಿತದ ಮೇಲೆ ಲೋಕಸಭೆ ಚುನಾವಣೆ ಕೆಲಸದ ಒತ್ತಡವಿದೆ. ಇದರ ಜತೆ,ಜತೆಗೆ ಹಿಂದಿನ ವರ್ಷದ ದಾಖಲೆ ರಕ್ಷಿಸುವ ಒತ್ತಡಕ್ಕೆ ಸಿಲುಕಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರು ಮಾ.25-ಏಪ್ರಿಲ್ 6ರ ವರೆಗಿನ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿ ಸುತ್ತಿದ್ದಾರೆ.
    *ಏರು ಮುಖದ ಸಾಧನೆ: ಕಳೆದೆರಡು ವರ್ಷಗಳಲ್ಲಿ ಫಲಿತಾಂಶದಲ್ಲಿ ಜಿಲ್ಲೆ ಸುಧಾರಣೆ ಕಂಡಿದೆ. 2021-22ರಲ್ಲಿ ಜಿಲ್ಲೆಗೆ ಶೇ.94.3 ಫಲಿತಾಂಶ ಬಂದಿತ್ತು. 2022-23ರಲ್ಲಿ ಶೇ.96.8ಫಲಿತಾಂಶದೊಂದಿಗೆ ಜಿಲ್ಲೆ ನಂ.1 ಸ್ಥಾನ ಪಡೆದಿತ್ತು.
    ಪ್ರಸಕ್ತ ವರ್ಷ ಜಿಲ್ಲೆಯ 78 ಪರೀಕ್ಷಾ ಕೇಂದ್ರಗಳಲ್ಲಿ 24228 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಆರೂ ವಿಷಯಗಳ ಕುರಿತಂತೆ ಮುಖ್ಯಶಿಕ್ಷಕರಿಗೆ ವಿಷಯ ತಜ್ಞರಿಂದ ಕಾರ್ಯಾಗಾರಗಳನ್ನು ನಡೆಸಲಾಗಿದೆ.ವಿಷಯ ನಿರೀಕ್ಷಕರು ಬ್ಲಾಕ್ ಹಂತದಲ್ಲಿ ತ್ರೈಮಾಸಿಕ ಸಭೆಗಳನ್ನು ನಡೆಸಿ ಕ್ರಿಯಾ ಯೋಜನೆಯ ಅನುಷ್ಠಾನದ ಪ್ರಗತಿ ಪರಿಶೀಲಿಸಿದ್ದಾರೆ.
    ಜಿಲ್ಲಾ, ತಾಲೂಕು ಮಟ್ಟದಲ್ಲಿ ಮುಖ್ಯಶಿಕ್ಷಕರ ಸಭೆಗಳಾಗಿವೆ. ಕಳೆದ ವರ್ಷ ಪರೀಕ್ಷೆಯಲ್ಲಿ ಕಳಪೆ ಸಾಧನೆ ಮಾಡಿದ ಶಾಲೆಗಳ ಶೈಕ್ಷಣಿಕ ತಪಾಸಣೆ ನಡೆಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ, ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಣಿತ ವಿಷಯ ಶಿಕ್ಷಕರು ಬಗೆಹರಿಸಲು ಪ್ರಯತ್ನಿಸಿದ್ದಾರೆ. ಸಂಪನ್ಮೂಲ ವ್ಯಕ್ತಿಗಳು ವರ್ಚುವಲ್ ಮೂಲಕ ಶಿಕ್ಷಕರೊಂದಿಗೆ ಸಂವಾದ ನಡೆಸಿದ್ದಾರೆ.
    ಸಾಧಾರಣ ಕಲಿಕೆ ವಿದ್ಯಾರ್ಥಿ ಕೂಡ ಉತ್ತಮ ಅಂಕಗಳೊಂದಿಗೆ ಉತ್ತೀರ್ಣನಾಗಬೇಕು ಎಂದು 6 ವಿಷಯಗಳ ಪ್ರತ್ಯೇಕ ಅಭ್ಯಾಸ ಪುಸ್ತಕಗಳನ್ನು ಸಿದ್ಧಪಡಿಸಿ ಎಲ್ಲ ಮುಖ್ಯ ಶಿಕ್ಷಕರಿಗೆ ಸಾಫ್ಟ್‌ಕಾಫಿ ಕಳಿಸಲಾಗಿದೆ. ಗಣಿತದ ಶಿಕ್ಷಕರ ಕೈಪಿಡಿ ಸಿದ್ಧಪಡಿಸಿಕೊಡಲಾಗಿದೆ. ನೆಂಟರ ಶಾಲೆಗಳ ಹೆಸರಿನಲ್ಲಿ ಒಂದು ಶಾಲೆ ವಿದ್ಯಾರ್ಥಿಗಳನ್ನು ಮತ್ತೊಂದು ಹತ್ತಿರದ ಶಾಲೆಗಳಿಗೆ ಕಳಿಸಿ ಪ್ರೋತ್ಸಾಹಿಸಲಾಗಿದೆ. ಪಾಲಕರೊಂದಿಗೆ ಸಂವಾದ,ಸಂಜೆ,ವಿಶೇಷ ಮತ್ತು ಆನ್‌ಲೈನ್ ತರಗತಿಗಳನ್ನೂ ನಡೆಸಲಾಗಿದೆ.

    ಸ್ಕೋರ್ ಪ್ಯಾಕೇಜ್ ಅಭ್ಯಾಸ ಪುಸ್ತಕಗಳು


    ವಿಷಯ-ಪುಸ್ತಕದ ಹೆಸರು
    ಗಣಿತ-ಗಣಿತಬುತ್ತಿ
    ಸಾಮಾಜಿಕ ವಿಜ್ಞಾನ-ಸವಿಚಿಲಿಪಿಲಿ
    ಕನ್ನಡ-ಕೌಸ್ತುಭ
    ಹಿಂದಿ-ನಹಿದಿಶಾ
    ವಿಜ್ಞಾನ-ಬೆಳಕು ಗ್ಲೂಕೋಸ್
    ಇಂಗ್ಲಿಷ್-ದಿ ವಿಸ್‌ಡಮ್
    ಗಣಿತಕ್ಕೆ ಸಂಬಂಧಿಸಿದಂತೆ ಸುಪ್ರಭ ಹೆಸರಿನ ಶಿಕ್ಷಕರ ಕೈಪಿಡಿ

    *ಕೋಟ್
    ಜಿಲ್ಲೆಯ 490 ಪ್ರೌಢಶಾಲೆಗಳಿಂದ 24228 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ನಂ.1ಸ್ಥಾನ ಮತ್ತೆ ಉಳಿಸಿಕೊಳ್ಳುವ ನಿಟ್ಟಿ ನಲ್ಲಿ ಪ್ರಯತ್ನಿಸಲಾಗಿದೆ. ದಾಖಲೆ ಕಾಪಾಡುವ ಹೊಣೆ ನಮ್ಮೆಲ್ಲರ ಮೇಲಿದೆ.
    ಕೆ.ರವಿಶಂಕರ ರೆಡ್ಡಿ, ಡಿಡಿಪಿಐ, ಚಿತ್ರದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts