More

    ಎಲ್ಲ ಸಮಾಜದ ಜತೆ ಜಯಂತ್ಯುತ್ಸವ  -ಪ್ರಾಯೋಗಿಕ ಆಚರಣೆಗೆ ಶಾಸಕ ಬಸವಂತಪ್ಪ ಸಲಹೆ – ಜಿಲ್ಲಾಡಳಿತದಿಂದ ಕನಕದಾಸರ ಜಯಂತಿ

    ದಾವಣಗೆರೆ: ಚಿಂತಕರ ಸಮಿತಿ ರಚಿಸಿ, ಎಲ್ಲ ಸಮಾಜಗಳನ್ನೂ ಒಗ್ಗೂಡಿಸಿ ಸಂತ ಕನಕದಾಸರ ಜಯಂತ್ಯುತ್ಸವವನ್ನು ಪ್ರಾಯೋಗಿಕವಾಗಿ ಮರು ಆಚರಣೆ ಮಾಡಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.
    ಜಿಲ್ಲಾಡಳಿತ, ಜಿಪಂ, ದಾಸಶ್ರೇಷ್ಠ ಕನಕದಾಸರು ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಿಲ್ಲಾ ಹೋರಾಟ ಸಮಿತಿ ಸಹಯೋಗದಲ್ಲಿ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಕನಕದಾಸರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
    ದಾರ್ಶನಿಕರ ಜಯಂತ್ಯುತ್ಸವಗಳು ಆಯಾ ಜಾತಿಗೆ ಸೀಮಿತ ಆಗುತ್ತಿವೆ. ಇದರಿಂದ ಮನಸ್ಸುಗಳು ವಿಭಜನೆ ಆಗಲಿವೆ. ಇದನ್ನು ತಪ್ಪಿಸಿ ಸಾಮೂಹಿಕ ಆಚರಣೆಯ ಬೀಜ ಬಿತ್ತೋಣ ಎಂದು ಹೇಳಿದರು.
    ಕನಕದಾಸರು ಕೀರ್ತನೆಗಳ ಮೂಲಕವೇ ಸಮಾಜ ಬದಲಾವಣೆಗೆ ಶ್ರಮಿಸಿದರು. ಸಮಸಮಾಜ ಹಾಗೂ ಸಮಾನತೆಗೆ ಹೋರಾಟ ಮಾಡಿದ ಬಸವಣ್ಣ-ಕನಕರು, ದೇಶಕ್ಕೆ ಸಂವಿಧಾನ ನೀಡಲು ಅಂಬೇಡ್ಕರ್ ಅವರಿಗೆ ಪ್ರೇರಣಾ ಶಕ್ತಿಯಾದರು ಎಂದು ಹೇಳಿದರು.
    ಕನಕದಾಸರ ಕೊಡುಗೆ-ಮಾರ್ಗದರ್ಶನದಿಂದಾಗಿ ದೇಶವಿಂದು ಶಾಂತಿಪ್ರಿಯವಾಗಿದೆ. ಇಂದಿನ ಯುವಕರು ಮೊಬೈಲ್‌ನಲ್ಲಿ ನಕಾರಾತ್ಮಕ ವಿಚಾರಗಳ ಬಗ್ಗೆ ಗಮನ ನೀಡದೆ ದಾರ್ಶನಿಕರ ವಿಚಾರಗಳ ಬಗ್ಗೆ ಅಧ್ಯಯನ ಮಾಡಬೇಕಿದೆ ಎಂದರು.
    ಇನ್‌ಸೈಟ್ ಸಂಸ್ಥೆ ಸಂಸ್ಥಾಪಕ ಜಿ.ಬಿ.ವಿನಯಕುಮಾರ್ ಮಾತನಾಡಿ ನಾವಿಂದು ಕೇವಲ ಕನಕರ ತತ್ವವಲ್ಲದೆ ಲೌಕಿಕ ನಡತೆಯನ್ನೂ ಅಳವಡಿಸಕೊಳ್ಳಬೇಕಾದ ಅಗತ್ಯವಿದೆ. ಅಂದಿನ ಸಮಾಜದ ವಿರುದ್ಧ ಕನಕದಾಸರು ತೋರಿದ್ದ ಧೈರ್ಯ, ಸ್ಥೈರ್ಯ, ಛಲ ನಮ್ಮಲ್ಲೂ ಬರಬೇಕು. ಅದಕ್ಕಾಗಿ ನಾವೂ ಕನಕರಂತಾಗಬೇಕು ಎಂದು ಹೇಳಿದರು.
    ಕನಕರು ಎದುರಿಸಿದ ಸಂಕಷ್ಟಗಳು 21ನೇ ಶತಮಾನದಲ್ಲೂ ಇವೆ. ಈಗಿನ ಪ್ರಜಾಪ್ರಭುತ್ವದ ಒಳಗೆ ಪ್ರಭುಗಳ ವಿರುದ್ಧ ನಾವು ನಮ್ಮ ಹಕ್ಕು ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಿದೆ. ಯಾರದೋ ಮನೆ, ಆಡಳಿತಕ್ಕೆ ನಾವು ದಾಸರಾಗದೆ ಸಾಮಾನ್ಯರೂ ಅಸಾಮಾನ್ಯರಾಗಬೇಕು. ಆಗ ವಿಷವರ್ತುಲದ ನಡುವೆಯೂ ಬೆಳೆಯಬಹುದು ಎಂದರು.
    ವಿಶೇಷ ಉಪನ್ಯಾಸ ನೀಡಿದ ಹಗರಿಬೊಮ್ಮನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಕೆ. ವೆಂಕಟೇಶ್, ಕನಕದಾಸರ ಪ್ರವೇಶದಿಂದಾಗಿ ದಾಸ ಪರಂಪರೆಗೆ ಮಾನವೀಯ ವ್ಯಕ್ತಿತ್ವ ದೊರೆತಿದೆ. ರಾಷ್ಟ್ರದಲ್ಲಿ ಮಾನವೀಯ ಪಯಣ ಆರಂಭವಾದ ಹೊತ್ತಿನಲ್ಲೇ ಸಂತ ಕನಕರು ಎಲ್ಲರ ನಿಧಿಯಂತೆ ಕಂಡುಬಂದರು ಎಂದರು.
    ಕನಕದಾಸರನ್ನು ಹೊರತುಪಡಿಸಿ ಮಿಕ್ಕೆಲ್ಲ ದಾಸರು ಮೇಲ್ವರ್ಗಕ್ಕೆ ಸೇರಿದ್ದರು. ಅವರೆಲ್ಲ ಭಕ್ತಿ, ಆಧ್ಯಾತ್ಮ, ಆತ್ಮಸಾಕ್ಷಾತ್ಕಾರ ಸಂಗತಿಗೆ ಒತ್ತು ನೀಡಿದರೆ, ಕನಕದಾಸರು ದುಡಿಯುವ, ಬೆವರಿನ ವರ್ಗವನ್ನು ಪ್ರತಿನಿಧಿಸಿದ ಏಕೈಕ ಸಂತ. ವೈದಿಕ ಆವರಣ ಪ್ರವೇಶಿಸಿದ ಏಕೈಕ ಶೂದ್ರರಾಗಿದ್ದಾರೆ. ಸಮಾಜ, ಅಧಿಕಾರ ಇತ್ಯಾದಿಗಳಲ್ಲಿನ ತಾರತಮ್ಯವನ್ನು ಎಲ್ಲರ ಪ್ರತಿನಿಧಿಯಾಗಿ ಪ್ರಶ್ನಿಸಿದರು ಎಂದು ಸ್ಮರಿಸಿದರು.
    ಅಧಿಕಾರಕ್ಕೆ ಅಂಟಿಕೊಳ್ಳದೆ ಬಡವರ ಧ್ವನಿಯಾಗಿದ್ದ ಕನಕದಾಸರ ಸಾಮಾಜಿಕ ನಡೆ ಎಲ್ಲರಿಗೂ ಮಾದರಿಯಾಗಬೇಕು. ಅವರು ಬರೆದ ರಾಮಧಾನ್ಯ ಚರಿತೆ ಕೇವಲ ರಾಗಿ-ಭತ್ತದ ನಡುವಿನ ಜಗಳವಾಗಿಲ್ಲ. ಬಡವ-ಶ್ರೀಮಂತರ ನಡುವಿನ ಹೋರಾಟದ ಪ್ರಾತಿನಿಧಿಕ ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಚ್.ಬಿ.ಪರಶುರಾಮಪ್ಪ, ಸಮಾಜದ ಗುರು ಶಿವಕುಮಾರ್ ಒಡೆಯರ್ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಆನಂದ್, ಜಿಪಂ ಉಪಕಾರ್ಯದರ್ಶಿ ಎಲ್.ಎ.ಕೃಷ್ಣನಾಯ್ಕ, ರವಿಚಂದ್ರ, ಸಮಾಜದ ಮುಖಂಡರಾದ ರಾಜನಹಳ್ಳಿ ಶಿವಕುಮಾರ್, ಕೆ. ಪ್ರಸನ್ನಕುಮಾರ್, ಎಚ್.ಬಿ.ಗೋಣೆಪ್ಪ, ಜೆ.ಡಿ.ಪ್ರಕಾಶ್, ಜಿ.ಸಿ,ನಿಂಗಪ್ಪ, ವೆಂಕಟೇಶ್ ಎಸ್. ಮಾಯಕೊಂಡ, ಗೀತಾ ದಿಳ್ಯೆಪ್ಪ, ಕೆ.ಆರ್.ಜಯಶೀಲಾ, ಗೌಡ್ರ ಚನ್ನಬಸಪ್ಪ, ಸಿದ್ದಪ್ಪ ಅಡಾಣಿ, ನಳಿನಿ ಇತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ನಗರದೇವತೆ ದುರ್ಗಾಂಬಿಕಾ ದೇವಸ್ಥಾನ ಆವರಣದಿಂದ ವಿವಿಧ ಕಲಾತಂಡಗಳೊಂದಿಗೆ ಕನಕದಾಸರ ಮೂರ್ತಿ ಮೆರವಣಿಗೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts