More

    ಎಲ್ಲೆಂದರಲ್ಲಿ ಕಸದ ರಾಶಿ!

    ವೀರೇಶ ಹಾರೊಗೇರಿ ಕಲಘಟಗಿ

    ಪಟ್ಟಣದ ಎಲ್ಲೆಂದರಲ್ಲಿ ಕಸದ ರಾಶಿ ತಾಂಡವವಾಡುತ್ತಿದೆ. ತ್ಯಾಜ್ಯದ ದುರ್ನಾತದಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವ ಅನಿವಾರ್ಯತೆ ಎದುರಾಗಿದೆ.

    ಪಟ್ಟಣದ ಕೇಂದ್ರ ಸ್ಥಳ, ಪ್ರಮುಖ ಬೀದಿಗಳು ತ್ಯಾಜ್ಯದ ಆಗರವಾಗಿ ಗಬ್ಬೆದ್ದು ನಾರುತ್ತಿವೆ. ಸಮರ್ಪಕವಾದ ಚರಂಡಿಗಳು ಇಲ್ಲದೆ ಇರುವುದರಿಂದ ಸಾರ್ವಜನಿಕರು ದಾರಿಯುದ್ದಕ್ಕೂ ಮೂಗು ಮುಚ್ಚಿಕೊಂಡು ಸಂಚರಿಸುವಂತಹ ಸ್ಥಿತಿ ಗೋಚರವಾಗುತ್ತಿದೆ. ಕರೊನಾ ಭೀತಿ ಹಿನ್ನೆಲೆಯಲ್ಲಿ ಪಟ್ಟಣದಲ್ಲಿನ ಸಣ್ಣ ಪುಟ್ಟ ಚಹಾ ಅಂಗಡಿ, ಹೋಟೆಲ್​ಗಳಲ್ಲಿ ಸ್ವಚ್ಛತೆಗೆ ಪ.ಪಂ. ಕಟ್ಟೆಚ್ಚರ ವಹಿಸಿದೆ. ಆದರೆ, ಪಟ್ಟಣದಾದ್ಯಂತ ಕಲುಷಿತ ಪರಿಸರ ಸ್ವಚ್ಛಗೊಳಿಸುವಲ್ಲಿ ನಿರ್ಲಕ್ಷ್ಯ ಎದ್ದು ಕಾಣುತ್ತದೆ.

    ಪಟ್ಟಣದಲ್ಲಿನ ಅಪಾಭಟ್ ಕ್ರಾಸ್ ಬಳಿಯ ನೀರಿನ ಟ್ಯಾಂಕ್ ಹತ್ತಿರ ತ್ಯಾಜ್ಯ ತಂದು ಹಾಕುತ್ತಿರುವುದರಿಂದ ಮಾರುಕಟ್ಟೆ ಯಲ್ಲಿ ಸಂಚರಿಸುವ ಸಾರ್ವಜನಿಕರು ಮೂಗು ಮುಚ್ಚಿಕೊಳ್ಳುವಂತಾಗಿದೆ. ಕಲಾಲ ಓಣಿ, ಮೀನದ ಮಾರ್ಕೆಟ್, ಗಾಂಧಿನಗರ, ಭೋವಿ ಓಣಿ ಸೇರಿ ಪಟ್ಟಣದ ಇನ್ನು ಹಲವು ಸ್ಥಳಗಳಲ್ಲಿ ಇರುವ ಚರಂಡಿಗಳೆಲ್ಲವೂ ತ್ಯಾಜ್ಯ, ಕೊಳಚೆಯಿಂದ ತುಂಬಿಕೊಂಡಿದೆ. ಇದರಿಂದ ಹಂದಿ, ನಾಯಿಗಳ ಹಾವಳಿ ಮೀತಿ ಮೀರಿದೆ. ಜನರ ಅನುಕೂಲಕ್ಕಾಗಿ ನಿರ್ವಿುಸಿದ ನೀರಿನ ಟ್ಯಾಂಕ್ ಬಳಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ, ಅಲ್ಲಲ್ಲಿ ನೀರು ಶೇಖರಣೆಗೊಂಡು ರಸ್ತೆಯಲ್ಲಿ ಹರಿದು ಹೋಗಿ ಜನ ಸಂಚಾರ ಸ್ಥಳಗಳಲ್ಲಿ ನಿಲ್ಲುತ್ತಿವೆ. ಜನರು ತಮ್ಮ ಮನೆಯ ತ್ಯಾಜ್ಯಗಳನ್ನು ತಂದು ಹಾಕುತ್ತಿರುವುದರಿಂದ ಸೊಳ್ಳೆಗಳ ಕಾಟ ಉಲ್ಬಣಗೊಳ್ಳುತ್ತಿದ್ದು, ಸುತ್ತಮುತ್ತಲಿನ ನಿವಾಸಿಗಳಿಗೆ ಸಾಂಕ್ರಾಮಿಕ ರೋಗ ಭೀತಿ ಕಾಡುತ್ತಿದೆ. ಈ ಸಮಸ್ಯೆಗಳು ಒಂದೆಡೆಯಾದರೆ ಕಲಘಟಗಿ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಕಣ್ಣಿಗೆ ಕಸದ ರಾಶಿಗಳೆ ಕಾಣುತ್ತವೆ. ಇಲ್ಲಿರುವ ಸಾರ್ವಜನಿಕ ಶೌಚಗೃಹ ಬಳಿ ಹಾಗೂ ಪ್ರಯಾಣಿಕರ ಆಸನಗಳ ಬಳಿ ಎಲ್ಲೆಂದರಲ್ಲಿ ಕಸ ಬಿದ್ದಿದೆ. ಶೌಚಗೃಹದ ಹೊಲಸು ನೀರು ಬಸ್ ನಿಲ್ದಾಣದಲ್ಲಿ ಹರಿಯುತ್ತಿರುವುದರಿಂದ ಜನರು ನಿಲ್ದಾಣದಲ್ಲಿ ಕುಳಿತುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಪಟ್ಟಣದ ಸ್ವಚ್ಛತೆ ಕಾಪಾಡಲು ಪ.ಪಂ. ಅಧಿಕಾರಿಗಳು ಮುಂದಾಗಬೇಕು ಎಂದು ಸಾರ್ವಜನಿಕರು ಮತ್ತು ಪ್ರಯಾಣಿಕರು ಒತ್ತಾಯಿಸಿದ್ದಾರೆ.

    ಜನತೆಗೆ ಹಲವು ಬಾರಿ ತಿಳಿಸಿದ್ದೇವೆ. ಆದರೂ ಕಸವನ್ನು ನಗರಸಭೆಯ ವಾಹನಗಳಲ್ಲಿ ಹಾಕದೆ ಎಲ್ಲೆಂದರಲ್ಲಿ ಬಿಸಾಕುತ್ತಿದ್ದಾರೆ. ಇದರಿಂದ ಅಸ್ವಚ್ಛತೆಗೆ ಅಲ್ಲಿನ ನಿವಾಸಿಗಳೇ ಕಾರಣ. ಚರಂಡಿ ವ್ಯವಸ್ಥೆ ದುರಸ್ತಿಗಾಗಿ ಆದಷ್ಟು ಬೇಗ ಕ್ರಮ ಕೈಗೊಂಡು ಜನತೆಗೆ ಅನುಕೂಲ ಮಾಡಿಕೊಡುತ್ತೇವೆ. | ಲಕ್ಷ್ಮೀ ಪಾಲ್ಕರ್, ಕಲಘಟಗಿ ಪಟ್ಟಣ ಪಂಚಾಯಿತಿ ಸದಸ್ಯೆ

    ಬಸ್ ನಿಲ್ದಾಣದ ಹಿಂಬದಿಯ ಚರಂಡಿ ಮುಖಾಂತರ ನೀರು ಹರಿದು ಬಸ್ ನಿಲ್ದಾಣದ ಒಳಗಡೆ ಬರುತ್ತಿದೆ. ಈ ವಿಷಯವನ್ನು ಪ.ಪಂ. ಅಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಬಸ್ ನಿಲ್ದಾಣದ ಸ್ವಚ್ಛತೆ ಬಗ್ಗೆ ನಿಗಾ ವಹಿಸುತ್ತೇವೆ.| ಎಸ್.ಸಿ. ಬುಲಬುಲೆ ಬಸ್ ನಿಲ್ದಾಣ ನಿಯಂತ್ರಣಾಧಿಕಾರಿ, ಕಲಘಟಗಿ

    ಈಗಾಗಲೇ ಕಲಘಟಗಿ ಪಟ್ಟಣದ ಭೋವಿ ಓಣಿಯಲ್ಲಿ ಸ್ವಚ್ಛತೆ ಕಾರ್ಯ ನಡೆದಿದೆ. ದಿನಂಪ್ರತಿ ನಗರಸಭೆ ವಾಹನಗಳು ಮನೆ ಬಾಗಿಲಿಗೆ ಹೋದರೂ ಜನರು ಅದರ ಸದುಪಯೋಗ ಮಾಡಿಕೊಳ್ಳುತ್ತಿಲ್ಲ. ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಕುತ್ತಿದ್ದಾರೆ. ಜನರಲ್ಲಿ ಸ್ವಚ್ಛತೆ ಅರಿವು ಮೂಡಿಸುವ ಕಾರ್ಯವನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಮಾಡುತ್ತೇವೆ. | ಬಿ. ಚಂದ್ರಶೇಖರ, ಕಲಘಟಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts