More

    ಬೆಳಗಾವಿಯಲ್ಲಿ ಗುಂಡಿ ದರ್ಬಾರ್!

    ಬೆಳಗಾವಿ: ಮೂರು ರಾಜ್ಯಗಳ ಕೇಂದ್ರ ಬಿಂದುವಾಗಿರುವ ಬೆಳಗಾವಿ ನಗರದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ದಂಡು ಮಂಡಳಿ, ಮಹಾನಗರ ಪಾಲಿಕೆ ಕ್ರಮ ಕೈಗೊಳ್ಳುತ್ತಿಲ್ಲ. ಆಡಳಿತ ಯಂತ್ರದ ನಿರ್ಲಕ್ಷೃದಿಂದ ನಗರದ ರಸ್ತೆಗಳು ಹದಗೆಟ್ಟು ಹೋಗಿದ್ದು, ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿದೆ.ಮಹಾನಗರ ಪಾಲಿಕೆ, ದಂಡು ಮಂಡಳಿ ವ್ಯಾಪ್ತಿಯ ಪ್ರದೇಶದ ರಸ್ತೆಗಳಲ್ಲಿ ಕೆಲ ವರ್ಷಗಳ ಹಿಂದಷ್ಟೇ ಹೊಸ ರೂಪ ಪಡೆದಿರುವ ರಸ್ತೆಗಳಲ್ಲಿ ತಗ್ಗು, ಗುಂಡಿಗಳು ತುಂಬಿಕೊಂಡಿವೆ. ಈ ರೀತಿಯ ತಗ್ಗುಗಳು ನಿರ್ಮಾಣವಾಗಿರುವ ರಸ್ತೆಗಳಲ್ಲಿ ವೇಗದಿಂದ ಸಾಗುವ ದ್ವಿಚಕ್ರ ವಾಹನ ಸವಾರರು ಸಿಲುಕಿಕೊಂಡು ನೆಲಕ್ಕುರುಳಿರುವ ಘಟನೆಗಳು ನಡೆಯುತ್ತಿವೆ. ಅಧಿಕಾರಿಗಳು, ಜನಪ್ರತಿನಿಧಿಗಳು ನಿತ್ಯವೂ ಈ ರಸ್ತೆಗಳ ದುರವಸ್ಥೆ ಕಂಡೂ ಕಾಣದಂತೆ ಮುಂದಕ್ಕೆ ಸಾಗುತ್ತಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ.

    ಬೆಳಗಾವಿ ಮಹಾನಗರ ಸಮಗ್ರ ಅಭಿವೃದ್ಧಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಸ್ಮಾರ್ಟ್ ಸಿಟಿ ಯೋಜನೆ, ಅಮೃತ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಪ್ರತಿ ವರ್ಷ ಕೋಟ್ಯಂತರ ವ್ಯಯ ಮಾಡುತ್ತಿದೆ. ಆದರೆ, ವಾಸ್ತವದಲ್ಲಿ ರಸ್ತೆಗಳ ಮರು ನಿರ್ಮಾಣದ ಬದಲು ತೇಪೆ ಹಾಕುವ ಕೆಲಸ ಮಾಡಲಾಗುತ್ತಿದೆ. ಪರಿಣಾಮ ಧಾರಾಕಾರ ಮಳೆಯಿಂದಾಗಿ ರಸ್ತೆಗಳೆಲ್ಲಿ ಗುಂಡಿಗಳು ಬಿದ್ದಿವೆ.

    ಬೆಳಗಾವಿ ನಗರದ ಫೋರ್ಟ್ ರಸ್ತೆ, ಉದ್ಯಮಬಾಗ, ಬಿ.ಎಸ್.ಯಡಿಯೂಪ್ಪ ರಸ್ತೆ, ಕೇಂದ್ರ ಅಂಚೇರಿ ಕಚೇರಿ, ಕ್ಯಾಂಪ್ ಪ್ರದೇಶ, ಮಹಾಂತೇಶ ನಗರದಲ್ಲಿರುವ ಕಣಬರ್ಗಿ ರಸ್ತೆ, ಗಣಪತಿ ಗಲ್ಲಿ, ಖಡೇಬಜಾರ್, ಶಹಾಪುರ, ವಡಗಾವಿ, ಅನಗೋಳ, ಜ್ಯೋತಿ ನಗರ, ಎಪಿಎಂಸಿ ಮಾರುಕಟ್ಟೆ ಪ್ರದೇಶ, ನೆಹರು ನಗರ, ರಾಣಿ ಚನ್ನಮ್ಮ ನಗರ, ಜಿಲ್ಲಾಧಿಕಾರಿ ಸುತ್ತಮುತ್ತಲಿನ ಪ್ರದೇಶ ಸೇರಿದಂತೆ ಬಹುತೇಕ ಕಡೆ ರಸ್ತೆಗಳು, ಚರಂಡಿಗಳು ಸಂಪೂರ್ಣ ಹಾಳಾಗಿವೆ. ಆದರೆ, ಈ ರಸ್ತೆಗಳಲ್ಲಿ ಬಿದ್ದಿರುವ ತಗ್ಗುಗಳಿಗೆ ತೇಪ ಹಾಕುವ ಕೆಲಸವನ್ನು ಪಾಲಿಕೆ, ದಂಡು ಮಂಡಳಿ ಮಾಡದ್ದರಿಂದ ಸಾರ್ವಜನಿಕರು ತೀವ್ರ ತೊಂದರೆ ಎದುರಿಸಬೇಕಾಗಿದೆ ಎಂದು ರಾಹುಲ ಅನಗೋಳಕರ, ರಮೇಶ ಶಿವಾಜಿಕರ, ರಾಮು ಪಾಟೀಲ, ರಾಜೇಶ ಪಾಟೀಲ ದೂರಿದ್ದಾರೆ.

    ಕಳಪೆ ಕಾಮಗಾರಿಗೆ ತೇಪೆ ಹಾಕಲು ಯತ್ನ: 2019-20ನೇ ಸಾಲಿನ ಸುರಿದ ಧಾರಾಕಾರ ಮಳೆ ಮತ್ತು ನಾಲಾ ಪ್ರವಾಹದಿಂದ ನಗರದಲ್ಲಿ 166 ಕಿಮೀ ರಸ್ತೆ, ನಾಲಾ 40.49 ಕಿಮೀ, ಚರಂಡಿ 122 ಕಿಮೀ, ಒಳಚರಂಡಿ 2.5 ಕಿ.ಮೀ. ರಸ್ತೆ ಸಂಪೂರ್ಣ ಹಾಳಾಗಿದ್ದವು. ಇದರಿಂದ ಪಾಲಿಕೆಗೆ ನೂರಾರು ಕೋಟಿ ರೂ. ನಷ್ಟವಾಗಿತ್ತು. ಆದರೆ, ಸರ್ಕಾರವು ರಸ್ತೆ, ಚರಂಡಿ ದುರಸ್ತಿಗಾಗಿ 125 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಆದರೆ, ಆ ಕಾಮಗಾರಿಗಳು ಪೂರ್ಣಗೊಂಡು ವರ್ಷ ಕಳೆದಿಲ್ಲ. ಆಗಲೇ ಎಲ್ಲ ರಸ್ತೆಗಳು ಹಾಳಾಗಿವೆ. ಈ ಕಳಪೆ ಕಾಮಗಾರಿಗಳನ್ನು ಮುಚ್ಚಿ ಹಾಕಲು ತೇಪೆ ಹಾಕುವ ಕೆಲಸಕ್ಕೆ ಮಹಾನಗರ ಪಾಲಿಕೆ ಪ್ರಯತ್ನಿಸುತ್ತಿದೆ. ಈ ಬಾರಿ ಸುರಿದ ಮಳೆಯಿಂದ ಸುಮಾರು 150ಕಿಮೀ ಅಧಿಕ ರಸ್ತೆಗಳು ಹಾಳಾಗಿವೆ ಎಂದು ಪಾಲಿಕೆಯ ಸದಸ್ಯರು ದೂರಿದ್ದಾರೆ.

    ಕ್ರಮ ಕೈಗೊಳ್ಳದೆ ಕೈಕಟ್ಟಿ ಕುಳಿತ ದಂಡು ಮಂಡಳಿ

    ಬೆಳಗಾವಿ ಪ್ರತಿಷ್ಠಿತ ಪ್ರದೇಶಗಳನ್ನು ಒಳಗೊಂಡಿರುವ ದಂಡು ಮಂಡಳಿಯು ತನ್ನ ವ್ಯಾಪ್ತಿಯಲ್ಲಿ ಹಾಳಾಗಿರುವ ರಸ್ತೆ, ಚರಂಡಿಗಳನ್ನು ವರ್ಷಗಳಿಂದ ದುರಸ್ತಿ ಮಾಡಿಲ್ಲ. ಕೆಲವು ಕಡೆ ರಸ್ತೆಗಳಿಗೆ ತೇಪೆ ಹಾಕಲಾಗಿತ್ತು. ಆದರೆ, ಇದೀಗ ಧಾರಾಕಾರ ಮಳೆಯಿಂದ ಆ ರಸ್ತೆಗಳು ಹಾಳಾಗಿವೆ. ಚರಂಡಿಗಳು ಹೂಳು ತುಂಬಿ ವರ್ಷಗಳು ಕಳೆದಿದ್ದು, ಇಲ್ಲಿಯರವೆಗೆ ಸ್ವಚ್ಛಗೊಳಿಸುವ ಕೆಲಸ ಮಾಡಿಲ್ಲ. ಪರಿಣಾಮ ಮಳೆಗಾಲದಲ್ಲಿ ಮಳೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಸ್ಮಾರ್ಟ್ ಸಿಟಿ ರಸ್ತೆಗಳನ್ನು ಹೊರತು ಪಡಿಸಿ ಬಹುತೇಕ ರಸ್ತೆಗಳು ಹಾಳಾಗಿವೆ ಎಂದು ಕ್ಯಾಂಪ್ ಪ್ರದೇಶದ ವ್ಯಾಪಾರಿಗಳು ಆರೋಪಿಸಿದ್ದಾರೆ.

    |ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts