More

    ಎಲ್ಲಿ ಹೋದನು.. ಸಿಸಿ ಕ್ಯಾಮರಾಗೂ ಕಾಣದಾದನು..! ಪಿಒಪಿ ಡಕ್‌ನಿಂದ ಅಂಗಡಿಗೆ ನುಸುಳಿದ್ದ ಚಾಲಾಕಿ, ಯಕ್ಷಪ್ರಶ್ನೆಯಾದ ಠಕ್ಕನ ನಿರ್ಗಮನ!!

    ದಾವಣಗೆರೆ: ಶನಿವಾರ ನಸುಕಿನಜಾವ ಪಿಒಪಿ ಡಕ್ ಮೂಲಕ ಜವಳಿ ಶೋ ರೂಂಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿ, ಪೊಲೀಸರ ನಿದ್ದೆಗೆಡಿಸಿದ್ದ ಚಾಲಾಕಿ ಕಳ್ಳ ಕೊನೆಗೂ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ.
    ಶನಿವಾರ ಸಂಜೆ 4ರವರೆಗೂ ಹುಡುಕಾಟ ನಡೆಸಿದ ಪೊಲೀಸರಿಗೆ ಸಿಗದ ಕಳ್ಳ ಎಲ್ಲಿ ಅವಿತಿದ್ದ? ರಾತ್ರಿ ವೇಳೆ ಭದ್ರತಾ ಸಿಬ್ಬಂದಿ ಕಾವಲಿದ್ದರೂ ಯಾವಾಗ ಮತ್ತು ಹೇಗೆ ತಪ್ಪಿಸಿಕೊಂಡ ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿದೆ.
    ಶನಿವಾರ ಬೆಳಗ್ಗೆ 3-30 ಸುಮಾರಿಗೆ ಇಲ್ಲಿನ ಮಹಾತ್ಮ ಗಾಂಧಿ ವೃತ್ತದಲ್ಲಿನ ಟ್ರೆಂಡ್ಸ್ ಜವಳಿ ಶೋ ರೂಂಗೆ ಪಿಒಪಿ ಡಕ್ ಮೂಲಕ ಕಳ್ಳ ನುಗಿದ್ದ. ಸ್ವಲ್ಪ ಹೊತ್ತಿನಲ್ಲೇ ಸೈರನ್ ಕೂಗಿ, ಮುಂಬಯಿಯಲ್ಲಿದ್ದ ಕೇಂದ್ರ ಕಚೇರಿಗೆ ಸಂದೇಶ ತಲುಪಿದೆ. ಅಲ್ಲಿಂದ ಪೊಲೀಸರಿಗೆ ಮಾಹಿತಿ ತಿಳಿದಾಗ ಎಲ್ಲರೂ ಅಲರ್ಟ್ ಆದರು.

    ಸೈರನ್ ಗೂ ಬೆಚ್ಚಲಿಲ್ಲ
    ಸೈರನ್ ಕೂಗಿದರೂ ಕಳ್ಳ ಮಾತ್ರ ಕಸುಬು ನಡೆಸುತ್ತಲೇ ಇದ್ದ! ಕ್ಯಾಷಿಯರ್ ಕೌಂಟರ್‌ನೊಳಗಿದ್ದ ಎಲ್ಲ ಡ್ರಾಗಳನ್ನು ತೆರೆದು ಹಣ ಹುಡುಕುತ್ತಾನೆ. ಏನೂ ಸಿಗುವುದಿಲ್ಲ. ಬಟ್ಟೆಯಂಗಡಿ ಸುತ್ತುತ್ತಾನೆ. ಸೈರನ್ ಯಂತ್ರಗಳನ್ನು ಕಿತ್ತು ಹಾಕಲು ಯತ್ನಿಸಿದರೂ ಕೈಗೆ ನಿಲುಕದೆ ಮುಂದೆ ಹೋಗುತ್ತಾನೆ. ಇದೆಲ್ಲವೂ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
    ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನ ದಳ, ಭದ್ರತಾ ಸಿಬ್ಬಂದಿ ಅಂಗಡಿ ಕೆಲಸಗಾರರು ಎಲ್ಲರೂ ಶನಿವಾರ ಅರ್ಧದಿನದವರೆಗೂ ಕಳ್ಳನ ಶೋಧಕ್ಕೆ ಕಸರತ್ತು ನಡೆಸಿದ್ದಾರೆ. ಸುಮಾರು 150 ಅಡಿ ಉದ್ದದ ಶೋ ರೂಂ. ಪೂರ್ಣ ಆವರಿಸಿದ್ದ ಪಿಒಪಿ ಡಕ್ ಒಳಭಾಗದಲ್ಲೂ ಸಾಹಸ ಮಾಡಿ ನೋಡಿದರೂ ಕಳ್ಳನ ಸುಳಿವು ಸಿಗಲೇ ಇಲ್ಲ.
    ಭಾನುವಾರ ಹುಡುಕಾಟ ನಡೆಸಿದರೆ ಸಿಗಬಹುದು ಎಂಬ ಪೊಲೀಸರ ಲೆಕ್ಕಾಚಾರ ತಲೆಕೆಳಗಾಯಿತು. ಬೆಳಗ್ಗೆ ಕೂಡ ಕೆಲ ಸಿಬ್ಬಂದಿ ಪಿಒಪಿ ಡಕ್ ಒಳಗೆ ಹೋಗಿ ನೋಡಿದರೂ ಫಲ ಸಿಗಲಿಲ್ಲ.

    ಸೈಡ್ ವಾಲ್ ನಿಂದ ಹೋದನೇ?
    ಶೋ ರೂಂನ ಎಡಬದಿ (ಸೈಡ್‌ವಾಲ್)ಚಾಚಿಕೊಂಡಿದ್ದ ಕಟ್ಟಡದ ಕಿಷ್ಕಿಂದೆಯಂಥ ಒಳಭಾಗದಲ್ಲಿ ಅವಿತಿದ್ದು ರಾತ್ರಿ ವೇಳೆಗೆ ಅಲ್ಲಿಂದ 20 ಅಡಿ ಎತ್ತರದಿಂದ ಹಾರಿಯೋ ಅಥವಾ ಕೆಳಭಾಗದಲ್ಲಿ ಸೆಲ್ಲರ್‌ಗೆ ಹೊಂದಿಕೊಂಡಿದ್ದ ಸುಮಾರು ಎಂಟ್ಹತ್ತು 10 ಅಡಿ ಉದ್ದದ ಕಿಟಕಿಯ ಸರಳುಗಳಿಂದ ಇಳಿದೋ ಕಳ್ಳ ಎಸ್ಕೇಪ್ ಆಗಿರಬಹುದು ಎಂದು ಶಂಕಿಸಲಾಗಿದೆ.
    ಶೋ ರೂಂ ಸುತ್ತಲೂ ಗೋಡೆಗಳಿವೆ, ಎಲ್ಲಿಯೂ ಕಿಟಕಿಗಳಿಲ್ಲ. ಹೀಗಾಗಿ ಪಿಒಪಿ ಡಕ್ ಮೂಲಕವೇ ವಾಪಸ್ ಬರಬೇಕಿತ್ತು. ಹೊರಹೋಗಿರುವ ಬಗ್ಗೆ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿಲ್ಲ. ಸಮೀಪದ ಕಟ್ಟಡಗಳ ಸಿಸಿ ಕ್ಯಾಮರಾ ಶೋಧಿಸಿದರೆ ಮಾಹಿತಿ ಪಕ್ಕಾ ಆಗುವ ಸಂಭವವಿದೆ ಎನ್ನುತ್ತವೆ ಮೂಲಗಳು. ಸಿಸಿ ಕ್ಯಾಮರಾದಲ್ಲಿ ಬೆಕ್ಕು ಕಾಣಿಸಿಕೊಂಡಿದ್ದು ಪ್ರಶ್ನಾರ್ಹವಾಗಿದೆ!

    ಕೈಚೀಲ ಬೇಕೆಂದೇ ಬಿಟ್ಟುಹೋದನೇ?
    ತಲೆಗೆ ಟೋಪಿ ಧರಿಸಿದ್ದ ಕಳ್ಳ, ಮುಖಕ್ಕೆ ಕಟ್ಟಿದ್ದ ಕರವಸ್ತ್ರವನ್ನು ಬಿಗಿಯಾಗಿ ಹಿಡಿದುಕೊಂಡೇ ಕಳವು ಯತ್ನ ನಡೆಸಿದ್ದಾನೆ. ಸ್ಕ್ರೂಡ್ರೈವರ್, ಬ್ಯಾಟರಿಯನ್ನು ತಂದಿದ್ದ. ಅಂಗಡಿಯಿಂದ ಹೋಗುವಾಗ ಚೀಲವೊಂದನ್ನು ಬಿಟ್ಟು ಹೋಗಿದ್ದು ಅದರಲ್ಲಿ ವ್ಯಕ್ತಿಯೊಬ್ಬರ ಫೋಟೋ, ಗುರ್ತಿನ ಚೀಟಿ ಮತ್ತು ಮೊಬೈಲ್ ಬಿಟ್ಟು ಹೋಗಿದ್ದಾನೆ. ಇದು ಕಳವು ಮಾಡಿದ್ದೋ, ಆರೋಪಿಯದ್ದೋ ಅಥವಾ ಕೃತ್ಯದ ಆರೋಪದಿಂದ ಪಾರಾಗಲು ನಡೆಸಿದ ಯತ್ನವೋ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಕೆಟಿಜೆ ನಗರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


    ಬಟ್ಟೆ ಮಳಿಗೆಯಿಂದ ಕಳ್ಳ ಹೊರಹೋಗಿದ್ದಾನೆ. ಹೋಗಿದ್ದರ ಬಗ್ಗೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿಲ್ಲ. ಹಿಂದಿನ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದನೇ ಎಂಬ ಬಗ್ಗೆ ತನಿಖೆಯಿಂದಲೇ ತಿಳಿದುಬರಬೇಕಿದೆ.
    ಡಾ.ಕೆ.ಅರುಣ್
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts