More

    ಎಲ್ಲಿದೇರ್ರಿ ಲಾಕ್​ಡೌನ್…?

    ಹುಬ್ಬಳ್ಳಿ:ಲಾಕ್​ಡೌನ್ ಆದೇಶ ಇದ್ದರೂ ಯಾವುದನ್ನೂ ಲೆಕ್ಕಿಸದೇ ಜನ ಬೈಕ್, ಕಾರು, ಆಟೋಗಳ ಮೂಲಕ ರಸ್ತೆಗೆ ಇಳಿಯುತ್ತಿದ್ದಾರೆ. ತರಕಾರಿ, ಹಣ್ಣು, ಔಷಧ ಖರೀದಿ ನೆಪದಲ್ಲಿ ಮನೆಯಿಂದ ಹೊರಗೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪರಸ್ಪರರು ಅಂತರ ಇಟ್ಟುಕೊಳ್ಳಬೇಕೆಂಬ ಪ್ರಜ್ಞೆ ಕಡಿಮೆಯಾಗುತ್ತಿದೆ.

    ಇಲ್ಲಿನ ಚನ್ನಮ್ಮ ವೃತ್ತ, ಸ್ಟೇಶನ್ ರಸ್ತೆ, ಕೇಶ್ವಾಪುರ ರಸ್ತೆ, ಗೋಕುಲ ರಸ್ತೆ, ವಿದ್ಯಾನಗರ, ಉಣಕಲ್, ಭೈರಿದೇವರಕೊಪ್ಪ, ನವನಗರ, ಕೊಪ್ಪಿಕರ ರಸ್ತೆ, ಹೊಸೂರ, ಹಳೇ ಹುಬ್ಬಳ್ಳಿ, ಕಮರಿಪೇಟ ಸೇರಿ ನಗರದ ವಿವಿಧೆಡೆ ಸೋಮವಾರ ವಾಹನಗಳ ಓಡಾಟ ಸಂಖ್ಯೆ ಹೆಚ್ಚಳವಾಗಿದ್ದು ಕಂಡುಬಂತು.

    ಕೈಯಲ್ಲಿ ಒಂದು ಚೀಲ ಅಥವಾ ಹಳೆಯ ಔಷಧ ಚೀಟಿ ಹಿಡಿದು ರಸ್ತೆಗೆ ಇಳಿಯುತ್ತಿದ್ದಾರೆ. ಸೋಮವಾರ ಆಟೋಗಳ ಓಡಾಟ ಹೆಚ್ಚಾಗಿತ್ತು. ತರಕಾರಿ ಸಾಗಾಟ, ಆಸ್ಪತ್ರೆಗೆ ರೋಗಿಯ ರವಾನೆಗಾಗಿ ಹಲವೆಡೆ ಆಟೋ ಕಂಡುಬಂದವು. ಚನ್ನಮ್ಮ ವೃತ್ತದಂಥ ಸ್ಥಳದಲ್ಲಿ ಬೈಕ್ ನಿಲ್ಲಿಸಿ ಸೆಲ್ಪಿ ತೆಗೆದುಕೊಳ್ಳುವಷ್ಟರ ಮಟ್ಟಿಗೆ ಜನರು ಸ್ವತಂತ್ರರು ಹಾಗೂ ನಿರಾಳರಾಗಿದ್ದಾರೆ!

    ಗುಂಪಾಗಿ ತರಕಾರಿ ಖರೀದಿ: ಆಯಾ ಬಡಾವಣೆಗಳಲ್ಲೇ ತರಕಾರಿ ಸಿಗುತ್ತಿರುವ ಹಿನ್ನೆಲೆಯಲ್ಲಿ ಬೆಳಗ್ಗೆ ಜನ ತರಕಾರಿ ಖರೀದಿಗೆ ಮುಗಿಬೀಳುತ್ತಿದ್ದಾರೆ. ಗುಂಪು ಗುಂಪಾಗಿ ತರಕಾರಿ ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಕೆಲವರು ನಿತ್ಯವೂ ತಾಜಾ ತರಕಾರಿಗಾಗಿ ಬೀದಿಗೆ ಇಳಿಯುತ್ತಿದ್ದಾರೆ.

    ಕೈಚೆಲ್ಲಿ ಕುಳಿತ ಪೊಲೀಸರು: ಮೊದ ಮೊದಲು ಲಾಠಿ ಬೀಸಿದಾಗ ತುರ್ತು ಸೇವೆ ಸಿಬ್ಬಂದಿ ಹೊರತುಪಡಿಸಿ ಉಳಿದ ಜನರ ಸಂಚಾರ ಬಂದ್ ಆಗಿತ್ತು. ನಂತರ ಲಾಠಿ ಏಟು ಕೈಬಿಟ್ಟ ಬಳಿಕವೂ ಪೊಲೀಸರು ವಾಹನಗಳ ಜಪ್ತಿ ಆರಂಭಿಸಿದ್ದರಿಂದ ಜನರ ಓಡಾಟ ವಿರಳವಾಗಿತ್ತು. ಲಾಠಿ ಏಟು, ಬೈಕ್ ಜಪ್ತಿ, ಮನವಿಗೂ ಬಗ್ಗದ ಕೆಲ ಜನರ ನಡವಳಿಕೆಯಿಂದ ಪೊಲೀಸರೂ ಕೈಚೆಲ್ಲಿ ಕುಳಿತಿದ್ದಾರೆ ಎಂದು ಭಾಸವಾಗುತ್ತಿದೆ. ಸೋಮವಾರ ಮಧ್ಯಾಹ್ನ 12 ಗಂಟೆಯಾದರೂ ಜನರ ಓಡಾಟ ಹೆಚ್ಚಾಗಿತ್ತು. ಆದರೂ ಪೊಲೀಸರು ಯಾರನ್ನೂ ತಡೆಯುವ ಗೋಜಿಗೆ ಹೋಗಲಿಲ್ಲ. ವಿನಾಕಾರಣ ಸುತ್ತಾಡುವವರು, ಸಾರ್ವಜನಿಕ ಸ್ಥಳದಲ್ಲಿ ನಿಂತು ಸೆಲ್ಪಿ ತೆಗೆದುಕೊಳ್ಳುವವರಿಗೂ ಅದೇ ಬೇಕಿದೆ.

    ಕೃಷಿ ಪರಿಕರಗಳ ಮಳಿಗೆ ಆರಂಭ: ಸರ್ಕಾರದ ಆದೇಶದನ್ವಯ ನಗರದಲ್ಲಿ ಸೋಮವಾರ ಕೃಷಿ ಪರಿಕರಗಳ ಮಳಿಗೆಗಳನ್ನು ತೆರೆಯಲಾಗಿದೆ. ಇಲ್ಲಿನ ನೀಲಿಜಿನ್ ರಸ್ತೆಯಲ್ಲಿ ರಸಗೊಬ್ಬರ, ಕ್ರಿಮಿನಾಶಕ, ಬೀಜ, ಮೋಟರ್ ಪಂಪ್, ಪೈಪ್ ಮಾರಾಟ ಮಳಿಗೆಗಳು ಬಾಗಿಲು ತೆರೆದಿದ್ದವು. ಕೃಷಿ ಚಟುವಟಿಕೆಗಳಿಗೆ ಸಜ್ಜಾಗುತ್ತಿರುವ ರೈತರಿಗೆ ಅನುಕೂಲವಾಗಲೆಂದು ಮಳಿಗೆಗಳನ್ನು ತೆರೆಯಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts