More

    ಎಲ್ಲವೂ ಪ್ರೖೆವೇಟ್, ಫ್ರಾಂಚೈಸಿ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ 23 ಸಾವಿರ ಸ್ಥಿರ ದೂರವಾಣಿ ಸಂಪರ್ಕವಿದೆ. 7 ಸಾವಿರ ಬ್ರಾಡ್ ಬ್ಯಾಂಡ್ ಸಂಪರ್ಕವಿದೆ. 5 ಲಕ್ಷ 15 ಸಾವಿರ ಮೊಬೈಲ್ ಫೋನ್ ಗ್ರಾಹಕರಿದ್ದು, 248 ಮೊಬೈಲ್ ಟವರ್​ಗಳಿವೆ. ಇಷ್ಟೊಂದು ದೊಡ್ಡ ವ್ಯವಸ್ಥೆ ನೋಡಿಕೊಳ್ಳಲು ಕೇವಲ 80 ಜನ ಕಾಯಂ ನೌಕರರಿದ್ದಾರೆ. ನಾಲ್ಕು, ಐದು ಗ್ರಾಪಂಗೂ ಒಬ್ಬ ಲೈನ್​ವುನ್ ಇಲ್ಲ. ಕಚೇರಿ ನಿರ್ವಹಣೆಗೆ ತಂತ್ರಜ್ಞರಿಲ್ಲ. ತಾಲೂಕಿಗೆ ಇರುವ ಒಬ್ಬನೇ ಅಧಿಕಾರಿ. ಆತನೇ ತಂತ್ರಜ್ಞ, ಆಡಳಿತ ಹೀಗೆ ಎಲ್ಲ ಕಾರ್ಯವನ್ನೂ ನಿರ್ವಹಿಸಬೇಕಿದೆ.

    ಹಲವು ಎಕ್ಸ್​ಚೇಂಜ್​ಗಳು ಗುತ್ತಿಗೆ ಆಧಾರದ ಸಿಬ್ಬಂದಿ ಮೇಲೆ ನಡೆಯುತ್ತಿವೆ. ಟವರ್​ಗಳಿಗೆ ಜನರೇಟರ್​ಗಳಿದ್ದರೂ ಡೀಸೆಲ್ ಹಾಕಲು ದುಡ್ಡಿಲ್ಲ. ಇದರಿಂದ ಕರೆಂಟ್ ಹೋದ ತಕ್ಷಣ ಗ್ರಾಮೀಣ ಭಾಗದ ಟವರ್​ಗಳು ಬಂದ್ ಆಗಿಬಿಡುತ್ತವೆ. ಹೊಸ ಸಾಮಗ್ರಿಗಳು ಬರುತ್ತಿಲ್ಲ. ಇದ್ದ ಲೈನ್​ಗಳು ಹಾಳಾಗಿವೆ. ಒಟ್ಟಾರೆ ಇನ್ನೂ ದಯನೀಯ ಸ್ಥಿತಿಗೆ ತಲುಪಲು ಸಾಧ್ಯವೇ ಇಲ್ಲ ಎಂಬಷ್ಟರಮಟ್ಟಿಗೆ ಬಿಎಸ್​ಎನ್​ಎಲ್ ಸೊರಗಿ ಹೋಗಿದೆ.

    ಇದ್ದ 80 ಜನರ ಪರದಾಟ: ಸರ್ಕಾರ ಹಾಗೂ ಆಡಳಿತ ಮಂಡಳಿಯ ನಿರ್ಣಯದಂತೆ ಈ ವರ್ಷ ಜಿಲ್ಲೆಯ 178 ಜನ ಬಿಎಸ್​ಎನ್​ಎಲ್ ನೌಕರರು ಸ್ವಯಂ ನಿವೃತ್ತಿ ಪಡೆದಿದ್ದಾರೆ. ಈಗ ಉಳಿದಿರುವ 80ರಲ್ಲಿ ಹೆಚ್ಚಿನವರು ನಿವೃತ್ತಿಯ ಅಂಚಿನಲ್ಲಿದ್ದವರು. ಅವರು ಇದ್ದ ಒತ್ತಡ ತಡೆಯಲಾರದೇ ಹೈರಾಣಾಗಿದ್ದಾರೆ. ನಿತ್ಯ ಹಲವು ಸಮಸ್ಯೆಗಳು, ದೂರುಗಳನ್ನು ಹೇಳಿಕೊಂಡು ಗ್ರಾಹಕರು ಬರುತ್ತಿದ್ದಾರೆ. ಅದನ್ನು ನಿರ್ವಹಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಗ್ರಾಹಕರಿಂದ ಹಿಡಿ ಶಾಪ ಹಾಕಿಸಿಕೊಳ್ಳುತ್ತಿದ್ದಾರೆ.

    ಎಲ್ಲ ಖಾಸಗಿ: ಬಿಎಸ್​ಎನ್​ಎಲ್ ಎಫ್​ಟಿಟಿಎಚ್ ಖಾಸಗೀಕರಣದಿಂದ ಸಾಕಷ್ಟು ಅವಾಂತರವಾಗಿರುವುದು ಬೆಳಕಿಗೆ ಬಂದಿದೆ. ಶೀಘ್ರವೇ ಜಿಲ್ಲೆಯ ಬಿಎಸ್​ಎನ್​ಎಲ್​ನ ಬಹುತೇಕ ಸೇವೆಗಳು ಖಾಸಗೀಕರಣವಾಗುವ ಸೂಚನೆಯನ್ನು ಸಂಸ್ಥೆ ನೀಡಿದೆ. ಈಗಾಗಲೇ ಕೆಲ ಗ್ರಾಹಕರ ಸೇವಾ ಕೇಂದ್ರಗಳನ್ನು ಖಾಸಗಿಗೆ ವಹಿಸಲಾಗಿದೆ. ಮೊಬೈಟ್ ಟವರ್ ನಿರ್ವಹಣೆ, ಬಿಎಸ್​ಎನ್​ಎಲ್ ಬ್ರಾಡ್ ಬ್ಯಾಂಡ್ ಹಾಗೂ ಸ್ಥಿರ ದೂರವಾಣಿ ಮಾರ್ಗಗಳ ನಿರ್ವಹಣೆ ಮತ್ತು ಮೊಬೈಲ್ ನೆರ್ಟÌಂಗ್ ಸರ್ವೀಸ್​ಗಳನ್ನೂ ಖಾಸಗಿಗೆ ವಹಿಸಲಾಗುವುದು ಎಂದು ಬಿಎಸ್​ಎನ್​ಎಲ್ ಡಿಜಿಎಂ ಆರ್.ವಿ. ಜನ್ನು ಮಾಹಿತಿ ನೀಡಿದ್ದಾರೆ.

    ಒಂದೂವರೆ ವರ್ಷದಿಂದ ವೇತನವಿಲ್ಲ
    ಜಿಲ್ಲೆಯಲ್ಲಿ ಒಟ್ಟಾರೆ 340 ಜನ ಗುತ್ತಿಗೆ ನೌಕರರಿದ್ದರು. ಕಳೆದ ವರ್ಷ ಮೇನಲ್ಲಿ ಹೊರ ಗುತ್ತಿಗೆ ನೌಕರರ ಸಂಖ್ಯೆಯನ್ನು ಅರ್ಧಕ್ಕೆ ಇಳಿಸಿ 170 ಜನರನ್ನು ಇಟ್ಟುಕೊಳ್ಳಲಾಯಿತು. ಲೈನ್ ಮೆಂಟೇನೆನ್ಸ್, ಎಕ್ಸ್ ಚೇಂಜ್ ಮೆಂಟೇನೆನ್ಸ್, ಕಚೇರಿ ಕೆಲಸ ಹೀಗೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ಹಲವರಿಗೆ ಕಳೆದ ಒಂದೂವರೆ ವರ್ಷದಿಂದ ವೇತನವೇ ಆಗಿಲ್ಲ. ‘ನಮ್ಮಲ್ಲಿ ಹಲವರು ದಶಕಗಳಿಂದಲೂ ಕೆಲಸ ಮಾಡಿಕೊಂಡವರಿದ್ದಾರೆ. ಅವರು ಈಗ ಬೇರೆಡೆ ಉದ್ಯೋಗ ಗಿಟ್ಟಿಸಲು ವಯಸ್ಸಾಗಿಬಿಟ್ಟಿದೆ. ಅಂಗಡಿಗಳಲ್ಲಿ ಸಾಲ ಮಾಡಿಯಾಗಿದೆ. ಬಂಗಾರದ ಒಡವೆಗಳನ್ನು ಅಡವಿಟ್ಟಿದ್ದೇವೆ. ಕೈಗಡ ಪಡೆದಿದ್ದೂ ಮುಗಿದಿದೆ. ಸಾಲಗಾರರು ಮನೆಗೆ ಬರುತ್ತಿದ್ದಾರೆ. ಸಂಸ್ಥೆಯಿಂದ ನಮಗೆ ಲಕ್ಷಾಂತರ ರೂ. ವೇತನ ಬಾಕಿ ಇದೆ. ಇಂದಲ್ಲ ನಾಳೆ ವೇತನ ಬರಬಹುದು ಎಂಬ ಆಸೆಯಲ್ಲೇ ದಿನ ದೂಡುತ್ತಿದ್ದೇವೆ. ಶಾಸಕರು, ಕಾರ್ವಿುಕ ಇಲಾಖೆ, ಜಿಲ್ಲಾಧಿಕಾರಿ ಎಲ್ಲರ ಬಳಿಯೂ ಮನವಿ ಮಾಡಿಯಾಗಿದೆ. ನಿಗಮ ಅಧಿಕಾರಿಗಳನ್ನು ಕೇಳಿದರೆ, ಇಡೀ ರಾಜ್ಯದ ಸಮಸ್ಯೆ ಎನ್ನುತ್ತಾರೆ’ ಎಂದು ಹೆಸರು ಹೇಳಲಿಚ್ಛಿಸದ ಬಿಎಸ್​ಎನ್​ಎಲ್ ಹೊರ ಗುತ್ತಿಗೆ ಸಿಬ್ಬಂದಿ ತಮ್ಮ ಅಳಲು ತೋಡಿಕೊಳ್ಳುತ್ತಾರೆ.

    ಲಾಕ್​ಡೌನ್ ನಂತರ ಜಿಎಂ ಸುಳಿದಿಲ್ಲ
    ಭಾರತ ಸಂಚಾರ ನಿಗಮದ ಜಿಲ್ಲೆಯ ಸಮಗ್ರ ಆಡಳಿತದ ನಿರ್ವಹಣೆ ನೋಡಿಕೊಳ್ಳುವ ಜಿಎಂ ಕಚೇರಿ ಕಾರವಾರದಲ್ಲಿದೆ. ಆದರೆ, ಉತ್ತರ ಕನ್ನಡಕ್ಕೆ ಕಾಯಂ ಜಿಎಂ ನೇಮಕವಾಗದೇ ಅದೆಷ್ಟೋ ವರ್ಷ ಕಳೆದು ಹೋಗಿದೆ. ಈಗ ಬೆಂಗಳೂರಿನ ಅಧಿಕಾರಿಯೊಬ್ಬರನ್ನು ಪ್ರಭಾರಿಯಾಗಿ ನೇಮಿಸಲಾಗಿತ್ತು. ಜಿಲ್ಲೆಯ ಆಗá–ಹೋಗುಗಳಿಗೆ ಅವರೇ ಜವಾಬ್ದಾರರು. ಆದರೆ, ಕಳೆದ ಲಾಕ್​ಡೌನ್ ನಂತರ ಜಿಎಂ ಇತ್ತ ಸುಳಿದೇ ಇಲ್ಲ ಎಂಬುದು ಕಚೇರಿಯ ಕೆಲ ನೌಕರರೇ ಹೇಳುವ ಮಾತು.

    ಅತಿ ಕಡಿಮೆ ನೌಕರರಲ್ಲಿ ಕಾರ್ಯನಿರ್ವಹಿಸುವುದು ಕಷ್ಟ ಎಂಬ ಕಾರಣಕ್ಕೆ ಮಾರ್ಗಗಳ ನಿರ್ವಹಣೆ, ಟವರ್ ನಿರ್ವಹಣೆಯನ್ನು ಖಾಸಗಿಗೆ ವಹಿಸುವ ಪ್ರಕ್ರಿಯೆ ನಡೆಯುತ್ತಿದೆ. ನಂತರ ಸಮಸ್ಯೆಗಳು ಬಗೆಹರಿಯುವ ವಿಶ್ವಾಸವಿದೆ. ಇನ್ನು ಗುತ್ತಿಗೆ ನೌಕರರ ವೇತನದ ವಿಷಯನ್ನು ಕೇಂದ್ರ ಕಚೇರಿಯಿಂದ ನಿರ್ವಹಿಸಲಾಗುತ್ತಿದ್ದು, ನಾವು ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ.
    | ಆರ್.ವಿ.ಜನ್ನು ಡಿಜಿಎಂ, ಬಿಎಸ್​ಎನ್​ಎಲ್, ಕಾರವಾರ

    ಫ್ರಾಂಚೈಸಿಗಳ ವಿರುದ್ಧ ತನಿಖೆಯಾಗಲಿ
    ಸಿದ್ದಾಪುರ:
    ಬಿಎಸ್​ಎನ್​ಎಲ್​ನ ಕೆಲವು ಫ್ರಾಂಚೈಸಿಗಳು ಮನಸೋ ಇಚ್ಛೆ ದರ ವಿಧಿಸುತ್ತಿರುವ ಬಗ್ಗೆ ತನಿಖೆಯಾಗಬೇಕು ಎಂದು ಹಾರ್ಸಿಕಟ್ಟಾ ಭಾಗದ ಎಫ್​ಟಿಟಿಎಚ್ ಬಳಕೆದಾರರು ಒತ್ತಾಯಿಸಿದ್ದಾರೆ. ‘ವಿಜಯವಾಣಿ‘ಯಲ್ಲಿ ಕಳೆದ ಎರಡು ದಿನಗಳಿಂದ ಪ್ರಕಟವಾದ ಸುದ್ದಿಗೆ ಪ್ರತಿಕ್ರಿಯಿಸಿರುವ ಅವರು, ಇಂದಿನ ದಿನದಲ್ಲಿ ಎಲ್ಲರೂ ಇಂಟರ್​ನೆಟ್ ಬಯಸುತ್ತಾರೆ. ಸಿದ್ದಾಪುರ ಬಿಎಸ್​ಎನ್​ಎಲ್ ಅಧಿಕಾರಿ ಜನರ ಅಪೇಕ್ಷೆಯಂತೆ ಅವರಿಗೆ ಹೊರೆಯಾಗದಂತೆ ಕಡಿಮೆ ದರದಲ್ಲಿ ಎಫ್​ಟಿಟಿಎಚ್ ಇಂಟರ್​ನೆಟ್ ವ್ಯವಸ್ಥೆ ಒದಗಿಸಿಕೊಟ್ಟಿದ್ದಾರೆ. ಆದರೆ, ಅವರ ಮೇಲೆ ವಿನಾ ಕಾರಣ ಆರೋಪ ಮಾಡಲಾಗುತ್ತಿದೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts