More

    ಎಲೆಚುಕ್ಕೆ ರೋಗಕ್ಕೆ ಶಿಲೀಂಧ್ರ ನಾಶಕವೇ ಪರಿಹಾರ: ಎಡೆಬಿಡದೆ ಸುರಿಯುತ್ತಿರುವ ಮಳೆಯೇ ತೀವ್ರತೆಗೆ ಕಾರಣ: ವಿಜ್ಞಾನಿ ಡಾ.ನಾರಾಯಣ ಸ್ವಾಮಿ

    ಹೊಸನಗರ: ಮಲೆನಾಡು ಅಡಕೆ ಬೆಳೆಗಾರರನ್ನು ಬೆಂಬಿಡದೆ ಕಾಡುತ್ತಿರುವ ಎಲೆಚುಕ್ಕೆ ರೋಗಕ್ಕೆ ಶಿಲೀಂಧ್ರ ನಾಶಕವೇ ಪರಿಹಾರ ಎಂದು ಶಿವಮೊಗ್ಗ ಅಡಕೆ ಮತ್ತು ತೋಟಗಾರಿಕಾ ಕಾಲೇಜಿನ ವಿಜ್ಞಾನಿ ಡಾ. ನಾರಾಯಣ ಸ್ವಾಮಿ ಸೂಚಿಸಿದರು.
    ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ಚಕ್ಕಾರು ವಿನಾಯಕ ಅವರ ಅಡಕೆ ತೋಟದಲ್ಲಿ ಗುರುವಾರ ತೋಟಗಾರಿಕೆ ಇಲಾಖೆ ಮತ್ತು ನವಿಲೆ ಕೃಷಿ ಮತ್ತು ತೋಟಗಾರಿಕಾ ಕಾಲೇಜು ಹಮ್ಮಿಕೊಂಡಿದ್ದ ಎಲೆಚುಕ್ಕೆ ರೋಗದ ನಿರ್ವಹಣೆ ಕುರಿತಾಗಿ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡು ರೋಗ ನಿರ್ವಹಣೆ ಬಗ್ಗೆ ಅಗತ್ಯ ಮಾಹಿತಿಯನ್ನು ನೀಡಿದರು.
    ಮಲೆನಾಡು ಕೆಂಪು ಅಡಕೆ ಜಾಗತಿಕ ಗುಣಮಟ್ಟ ಕಾಯ್ದುಕೊಂಡಿದೆ. ಈ ಹೊತ್ತಿನಲ್ಲಿ ಬೇಕಾಬಿಟ್ಟಿ ಅಡಕೆ ಬೆಳೆಯುವುದು ಸೂಕ್ತವಲ್ಲ. ಅಡಕೆ ತೋಟ ಶಿಸ್ತುಬದ್ಧವಾಗಿದ್ದು ಬೆಳೆಗೆ ಮಾರಕವಾದ ಗಮನಾರ್ಹ ಅಂಶಗಳ ತೆರವಿಗೆ ಒತ್ತು ನೀಡಬೇಕು. ಮಲೆನಾಡಿನಲ್ಲಿ ತೋಟಗಳು ಎಲೆಚುಕ್ಕೆ ರೋಗಕ್ಕೆ ಬಲಿಯಾಗುತ್ತಿವೆ. ಇದಕ್ಕೆ ಅಕಾಲಿಕ ಮಳೆ ಮತ್ತು ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ತೇವಾಂಶ ಹೆಚ್ಚಾಗುತ್ತಿರುವ ಕಾರಣ ರೋಗ ಉಲ್ಭಣಗೊಳ್ಳುತ್ತಿವೆ ಎಂದರು.
    ತಜ್ಞರು ಹೇಳುವ ಪೋಷಕಾಂಶಗಳನ್ನು ಹಂತಹಂತವಾಗಿ ನೀಡುವುದು, ಸ್ವಚ್ಛತೆ ಕಾಪಾಡುವುದು, ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಗಾಳಿಯ ಹರಿವು ಸರಾಗವಾಗಿರುವಂತೆ ನೋಡಿಕೊಳ್ಳಬೇಕು. ಮ್ಯಾಗ್ನೇಶಿಯಂ, ಬೋರಾನ್, ಪೊಟ್ಯಾಷ್, ಸುಣ್ಣ ಸೇರಿದಂತೆ ಅಗತ್ಯ ಪೋಷಕಾಂಶ ಮತ್ತು ಶಿಲೀಂಧ್ರ ನಾಶಕವನ್ನು ಅಗತ್ಯ ಸಂದರ್ಭದಲ್ಲಿ ನೀಡುವುದರಿಂದ ಎಲೆಚುಕ್ಕೆ ರೋಗವನ್ನು ತಡೆಗಟ್ಟಬಹುದು ಮತ್ತು ಮರಗಳನ್ನು ಇನ್ನಷ್ಟು ಸಮೃದ್ಧಿಗೊಳಿಸಲು ಸಾಧ್ಯ ಎಂದರು.
    ಎಲೆಚುಕ್ಕೆ ರೋಗದ ನಿರ್ವಹಣೆ ಕುರಿತಂತೆ ಬೆಳೆಗಾರರ ಸಂಶಯಗಳಿಗೆ ತಜ್ಞರು ಉತ್ತರ ನೀಡಿದರು. ಅಲ್ಲದೆ ತೋಟದಲ್ಲಿಯೇ ವಿವಿಧ ಔಷಧ ಮತ್ತು ಪೋಷಕಾಂಶಗಳನ್ನು ಬೆರೆಸಿ ಅಡಕೆ ತೋಟಗಳಿಗೆ ಸಿಂಪಡಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts