More

    ಎರಡು ತಿಂಗಳಿಂದ ಇಲ್ಲ ಮಾಸಾಶನ

    ಔರಾದ್: ಸಾಮಾಜಿಕ ಭದ್ರತಾ ಯೋಜನೆಯಡಿ ವೃದ್ಧರು, ಹಿರಿಯರು ಮತ್ತು ವಿಧವೆಯರ ಮಾಸಾಶನ ಎರಡು ತಿಂಗಳಿಂದ ಸ್ಥಗಿತಗೊಂಡಿದ್ದು, ಪ್ರತಿದಿನ ವಿವಿಧೆಡೆಯಿಂದ ಆಗಮಿಸುವ ಫಲಾನುಭವಿಗಳು ತಹಸಿಲ್ ಹಾಗೂ ಖಜಾನಾಧಿಕಾರಿಗಳ ಕಚೇರಿ ಸುತ್ತುತ್ತಿದ್ದರೂ ಪ್ರಯೋಜನವಾಗಿಲ್ಲ.
    ಎರಡು ತಿಂಗಳಿನಿಂದ ತಾಲೂಕಿನಲ್ಲಿ ಸಾವಿರಾರು ಜನರು ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರು ಮಾಸಾಶನಕ್ಕಾಗಿ ಪರದಾಡುತ್ತಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಸಾರಿಗೆ ಸೌಕರ್ಯ ಇಲ್ಲವಾಗಿದ್ದರಿಂದ ಬಹಳಷ್ಟು ಜನರು ಗ್ರಾಮೀಣ ಭಾಗದಿಂದ ನಡೆದುಕೊಂಡೇ ಪಟ್ಟಣಕ್ಕೆ ಬರುತ್ತಿದ್ದಾರೆ. ತಹಸಿಲ್ ಕಚೇರಿ ಅಧಿಕಾರಿಗಳನ್ನು ಕೇಳಿದರೆ ಕೆ2 ಸರ್ವರ್ ಸಮಸ್ಯೆ ಇದೆ. ಬಗೆಹರಿದ ನಂತರ ಮಾಸಾಶನ ಬರುತ್ತದೆ ಎಂದು ಉತ್ತರ ನೀಡುತ್ತಿದ್ದಾರೆ.
    ಕೆಲವರು ವೇತನ ಮಂಜೂರಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್​, ಮತದಾರರ ಚೀಟಿ, ಅಂಚೆ ಕಚೇರಿ ಪಾಸ್ ಬುಕ್ ನೀಡುವಂತೆ ಹೇಳುತ್ತಿದ್ದಾರೆ. ಕೆಲ ಮಧ್ಯವರ್ತಿಗಳ ಹಾವಳಿಯಿಂದ ಕೆಲವೆಡೆ ಅನರ್ಹರಿಗೂ ಮಾಸಾಶನ ಮಂಜೂರಾಗಿರುವುದು ಕಂಡುಬಂದಿದ್ದರಿಂದ ಸರ್ಕಾರದ ಮೇಲಿನ ಹೊರೆ ತಪ್ಪಿಸಲು ಸಾಮಾಜಿಕ ಭದ್ರತಾ ಯೋಜನೆಯಡಿ ಪ್ರತಿಯೊಬ್ಬರ ದಾಖಲಾತಿ ಪರಿಶೀಲಿಸಿ ಅವರವರ ಬ್ಯಾಂಕ್ ಹಾಗೂ ಅಂಚೆ ಕಚೇರಿ ಖಾತೆಗೆ ಜಮೆ ಮಾಡಲು ಸರ್ಕಾರ ಯೋಚಿಸಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಪತ್ರಾಂಕಿತ ಉಪ ಖಜಾನೆ ಅಧಿಕಾರಿಗಳ ಪ್ರಕಾರ ವೃದ್ಧಾಪ್ಯ ವೇತನ 305, ಅಂಗವಿಕಲರು 619, ಸಂಧ್ಯಾ ಸುರಕ್ಷಾ 1050, ವಿಧವಾ ವೇತನ 369, ಮನಸ್ವಿನಿ 7 ಸೇರಿ 2350 ಫಲಾನುಭವಿಗಳಿದ್ದಾರೆ. ಆದರೆ ಈ ಎಲ್ಲರಿಗೂ ಎರಡು ತಿಂಗಳಿಂದ ಮಾಸಾಶನ ಇಲ್ಲದೆ ಪರದಾಟ ಮುಂದುವರಿದಿದೆ.

    ಸಾಮಾಜಿಕ ಭದ್ರತಾ ಯೋಜನೆ ಮಾಸಾಶನವನ್ನು ಫಲಾನುಭವಿಗಳ ಬ್ಯಾಂಕ್ ಅಥವಾಗ ಅಂಚೆ ಕಚೇರಿ ಖಾತೆಗಳಿಗೆ ಜಮೆ ಮಾಡಲು ದಾಖಲಾತಿ ಜೋಡಣೆ ಕಾರ್ಯ (ಕೆ2)ಕ್ಕೆ ಸರ್ವರ್ ಸಮಸ್ಯೆ ಇರುವುದರಿಂದ ವಿಳಂಬವಾಗುತ್ತಿದ್ದು, ಶೀಘ್ರವೇ ಬಗೆಹರಿಸಲಾಗುವುದು.
    | ಚಂದ್ರಶೇಖರರಾವ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts