More

    ಎಪಿಎಂಸಿ ಜನಜಂಗುಳಿಗೆ ಜಿಲ್ಲಾಧಿಕಾರಿ ಬೇಸರ

    ರಾಣೆಬೆನ್ನೂರ: ‘ಬಾಪರೇ ಏನ್ ಜನ ಓಡಾಡ್ತಾರ್ ಇದ್ದಾರೆ ಇಲ್ಲಿ. ಜಾತ್ರೆಗೆ ಬಂದಂಗೇ ಬರ್ತಾ ಇದ್ದಾರೆ, ಇಲ್ಲಿಯ ಜನರಿಗೆ ಲಾಕ್​ಡೌನ್ ಗೊತ್ತೇ ಇಲ್ವಾ…? ಲಾಕ್​ಡೌನ್ ಜಾರಿ ಮಾಡುವಲ್ಲಿ ತಾಲೂಕು ಆಡಳಿತ ವಿಫಲ ಆಗಿದೆ ಬಿಡ್ರಿ…!

    ಇದು, ಶುಕ್ರವಾರ ಬೆಳ್ಳಂಬೆಳಗ್ಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಇಲ್ಲಿಯ ಎಪಿಎಂಸಿ ತರಕಾರಿ ಹಾಗೂ ನೆಹರು ದಿನಸಿ ಮಾರುಕಟ್ಟೆಗೆ ಭೇಟಿ ನೀಡಿ, ಪರಿಶೀಲಿಸಿದಾಗ ಸಾಮಾಜಿಕ ಅಂತರ ಉಲ್ಲಂಘಿಸಿ ಜನಜಂಗುಳಿಯಿಂದ ತುಂಬಿದ ಮಾರುಕಟ್ಟೆ ನೋಡಿ ಆಶ್ಚರ್ಯ ವ್ಯಕ್ತಪಡಿಸಿದರು.

    ಜಿಲ್ಲಾಧಿಕಾರಿ ಭೇಟಿ ಸಮಯದಲ್ಲಿ ಎಪಿಎಂಸಿ ಹಾಗೂ ನೆಹರು ಮಾರುಕಟ್ಟೆ ಜನಜಂಗುಳಿಯಿಂದ ತುಂಬಿದ್ದವು. ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ. ಕೆಲವರು ಮಾಸ್ಕ್ ಕೂಡ ಧರಿಸಿರಲಿಲ್ಲ. ಇದರಿಂದಾಗಿ ಗಾಬರಿಗೊಂಡ ಅವರು, ‘ಇಷ್ಟೊಂದು ಜನರನ್ನು ಒಂದೆಡೆ ಸೇರಲು ಯಾಕೆ ಬಿಟ್ಟಿದ್ದೀರಿ. ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ-ವಹಿವಾಟು ನಡೆಸಲು ಹೇಳಬೇಕಲ್ಲವೇ? ಇಲ್ಲಿಯ ದೃಶ್ಯ ನೋಡಿದರೆ ರಾಣೆಬೆನ್ನೂರಿನಲ್ಲಿ ಲಾಕ್​ಡೌನ್ ಪಾಲನೆ ಆಗುತ್ತಿಲ್ಲ ಎಂದು ಎಪಿಎಂಸಿ ಕಾರ್ಯದರ್ಶಿ ಸತೀಶಕುಮಾರ ಹಾಗೂ ತಹಸೀಲ್ದಾರ್ ಬಸನಗೌಡ ಕೋಟೂರು ಅವರನ್ನು ತರಾಟೆಗೆ ತೆಗೆದುಕೊಂಡರು.

    ದಿನಸಿ ಅಂಗಡಿ ಪೂರ್ಣ ತೆರೆಯಲಿ: ನೆಹರು ಮಾರುಕಟ್ಟೆಯ ಕೆಲ ವ್ಯಾಪಾರಸ್ಥರು ಗಡಿಬಿಡಿಯಲ್ಲಿ ಅಂಗಡಿಗಳನ್ನು ಬಂದ್ ಮಾಡಲು ಮುಂದಾದರು. ಅವರನ್ನು ತಡೆದ ಜಿಲ್ಲಾಧಿಕಾರಿ ಪರವಾನಗಿ ಪರಿಶೀಲಿಸಿದರು. ‘ದಿನಸಿ ಅಂಗಡಿ ಬೆಳಗ್ಗೆ 10 ಗಂಟೆಯವರೆಗೆ ಮಾತ್ರ ತೆರೆಯುವ ಕಾರಣ ಜನತೆ ಒಂದೇ ಬಾರಿಗೆ ಮಾರುಕಟ್ಟೆಗೆ ಬಂದು ಜನಜಂಗುಳಿ ಜಾಸ್ತಿಯಾಗುತ್ತಿದೆ. ಆದ್ದರಿಂದ ದಿನಸಿ ಅಂಗಡಿಗಳನ್ನು ದಿನವಿಡಿ ತೆರೆಯಲು ಬಿಡಿ. ಆಗ ಜನತೆ ಸಮಾಧಾನದಿಂದ ಒಬ್ಬೊಬ್ಬರಾಗಿ ಬಂದು ತೆಗೆದುಕೊಂಡು ಹೋಗುತ್ತಾರೆ’ ಎಂದು ನಗರಸಭೆ ಆಯುಕ್ತ ಡಾ. ಎನ್. ಮಹಾಂತೇಶ ಅವರಿಗೆ ಸೂಚಿಸಿದರು.

    ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಉಪ ವಿಭಾಗಾಧಿಕಾರಿ ಡಾ. ದಿಲೀಪ ಸಸಿ, ತಾಲೂಕು ಆರೋಗ್ಯಾಧಿಕಾರಿ ಡಾ. ಸಂತೋಷಕುಮಾರ ಮತ್ತಿತರರು ಪಾಲ್ಗೊಂಡಿದ್ದರು.

    ಸ್ವಚ್ಛತೆ ಕಾಪಾಡಿಕೊಳ್ಳಿ: ಅಡುಗೆ ಎಣ್ಣೆಯನ್ನು ರಸ್ತೆ ಬದಿಯೇ ಮಾರಾಟ ಮಾಡುತ್ತಿರುವುದನ್ನು ಕಂಡ ಜಿಲ್ಲಾಧಿಕಾರಿ, ಖುಲ್ಲಾ ಮಾರಾಟ ಮಾಡುತ್ತಿರುವವರಿಗೆ ಹಾಗೂ ಪರವಾನಗಿ ಪ್ರದರ್ಶಿಸದ ಅಂಗಡಿಕಾರರಿಗೆ ನೋಟಿಸ್ ಜಾರಿ ಮಾಡಿ. ಮೊದಲು ಸ್ವಚ್ಛತೆಗೆ ಕ್ರಮ ಕೈಗೊಳ್ಳಿ ಎಂದು ಪರಿಸರ ಇಂಜಿನಿಯರ್ ಅವರಿಗೆ ತಾಕೀತು ಮಾಡಿದರು.

    ಭಟ್ಕಳದಿಂದ ಬರುವ ವಾಹನಗಳನ್ನು ಮಾರುಕಟ್ಟೆ ಹೊರಗೆ ನಿಲ್ಲಿಸಿ, ಅವರಿಂದ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡಬೇಕು. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ, ಎಪಿಎಂಸಿ ಕಾರ್ಯದರ್ಶಿಗೆ ಸೂಚಿಸಿದರು.

    ಟೊಮ್ಯಾಟೊ ಬೇರೆಡೆ ಸಾಗಿಸಿ: ಕರೊನಾ ಎಫೆಕ್ಟ್​ನಿಂದ ಟೊಮ್ಯಾಟೊ ಖರೀದಿಸಲು ಯಾರೂ ಬರುತ್ತಿಲ್ಲ ಎಂದು ಬೆಳೆಗಾರರು ಜಿಲ್ಲಾಧಿಕಾರಿ ಎದುರು ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಡಿಸಿ, ಜಿಲ್ಲೆಯ ಯಾವ ಎಪಿಎಂಸಿಗಳಲ್ಲಿ ಟೊಮ್ಯಾಟೊಗೆ ಬೇಡಿಕೆಯಿದೆ ಎಂಬುದನ್ನು ತಿಳಿದುಕೊಂಡು ಅಲ್ಲಿಗೆ ಇಲ್ಲಿಯ ರೈತರು ಬೆಳೆದ ಟೊಮ್ಯಾಟೊ ಕಳುಹಿಸಿಕೊಡುವ ವ್ಯವಸ್ಥೆ ಮಾಡಿಕೊಡಿ ಎಂದು ಎಪಿಎಂಸಿಗೆ ಕಾರ್ಯದರ್ಶಿಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts