More

    ಎಪಿಎಂಸಿಯಲ್ಲಿ ಕುಡಿಯಲು ನೀರಿಲ್ಲ

    ಬಸವರಾಜ ಇದ್ಲಿ ಹುಬ್ಬಳ್ಳಿ

    ಇದು ಏಷ್ಯಾದ ಎರಡನೇ ಅತಿ ದೊಡ್ಡ ಎಪಿಎಂಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೇನು ಮಾಡುವುದು… ಇಲ್ಲಿನ ಜನ ಗುಟುಕು ನೀರಿಗೂ ಪರದಾಡಬೇಕು!

    ಹೌದು. ಹುಬ್ಬಳ್ಳಿಯ ಅಮರಗೋಳ ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ ವಿಸ್ತಾರದಲ್ಲಿ ದೊಡ್ಡದು. ಇಲ್ಲಿಯ ವಹಿವಾಟೂ ದೊಡ್ಡದು. ಇಲ್ಲಿಯ ಅಂಗಡಿಕಾರರು, ಕೂಲಿ ಕಾರ್ವಿುಕರು, ಪೇಟೆ ಕಾರ್ಯಕರ್ತರು, ದೂರದೂರುಗಳಿಂದ ಉತ್ಪನ್ನ ತರುವ ರೈತರು ಎಲ್ಲರೂ ನೀರಿನ ಬಾಟಲಿ ತಂದುಕೊಳ್ಳದೇ ಇದ್ದರೆ ಹಿಡಿಶಾಪ ಹಾಕುತ್ತ ಹೋಗಬೇಕಾಗಿದೆ.

    ಎಪಿಎಂಸಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಇದುವರೆಗೂ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಎಪಿಎಂಸಿಯಲ್ಲಿ ಕುಡಿಯುವ ನೀರಿಗಾಗಿ ಪೈಪ್​ಲೈನ್ ಹಾಕಲಾಗಿದೆಯಂತೆ ಆದರೆ, ನೀರು ಮಾತ್ರ ಬರಲ್ಲ. ವಿಪರ್ಯಾಸವೆಂದರೆ ಇಲ್ಲಿ ಬೇಸಿಗೆ ಆರಂಭವಾಗುತ್ತಿದ್ದಂತೆ ಶುದ್ಧ ನೀರಿನ ಘಟಕ ಬಂದ್ ಆಗಿದೆ. ಆಗೊಮ್ಮೆ ಈಗೊಮ್ಮೆ ನಳಗಳ ಮೂಲಕ ಬರುತ್ತಿದ್ದ ನೀರು ಕೂಡ ಸ್ಥಗಿತಗೊಂಡಿದೆ.

    ಸದ್ಯ ಜಲಮಂಡಳಿಯ ಕುಡಿಯುವ ನೀರಿನ ಗಾಡಿಯೇ ಆಧಾರವಾಗಿದೆ. ಅದು ವಾರದಲ್ಲಿ ಕೆಲ ದಿನ ಮಾತ್ರ ಬರುತ್ತದೆಯಂತೆ. ಶುಕ್ರವಾರ ಮಧ್ಯಾಹ್ನ ಜಲಮಂಡಳಿ ಗಾಡಿ ಬರುತ್ತಲೇ ಅಂಗಡಿಗಳಲ್ಲಿ ಕೆಲಸ ಮಾಡುವ ಮಹಿಳೆಯರು, ಪುರುಷರು ಧಾವಿಸಿ ಬಂದು ನೀರು ಹಿಡಿದುಕೊಂಡರು. ಕೊಡ, ನೀರಿನ ಬಾಟಲ್​ಗಳಲ್ಲಿ ಸಂಗ್ರಹಿಸಿಕೊಂಡು ಒಯ್ದರು. ಎಪಿಎಂಸಿಯಿಂದಲೂ ಒಂದು ನೀರಿನ ವಾಹನ ಇದೆಯಂತೆ, ಅದು ಸಾಲದ್ದಕ್ಕೆ ಜಲಮಂಡಳಿಯಿಂದಲೂ ಮತ್ತೊಂದು ವಾಹನ ತರಿಸಲಾಗಿದೆ ಎಂದು ಆಡಳಿತ ಮಂಡಳಿಯವರು ತಿಳಿಸಿದರು. ಎಪಿಎಂಸಿ ವರ್ತಕರ ಸಂಘ, ಉಳ್ಳಾಗಡ್ಡಿ ಮಾರ್ಕೆಟ್, ತರಕಾರಿ, ದಿನಸಿ ಮಾರ್ಕೆಟ್​ನಲ್ಲಿ ನಾಲ್ಕು ಕಡೆ ಶುದ್ಧ ನೀರಿನ ಘಟಕಗಳಿವೆ. ಅದರಲ್ಲಿ ಮಧ್ಯವರ್ತಿ ಸ್ಥಳದಲ್ಲಿರುವ ಉಳ್ಳಾಗಡ್ಡಿ ಮಾರ್ಕೆಟ್ ಘಟಕ ಬಂದ್ ಅಗಿದೆ. ಇದರಿಂದ ನೀರಿಗೆ ಹಾಹಾಕಾರ ಉಂಟಾಗುತ್ತಿದೆ ಎನ್ನುತ್ತಾರೆ ಅಂಗಡಿಗಳಲ್ಲಿ ಕೆಲಸ ಮಾಡುವವರು.

    ಇನ್ನು ಪ್ರತಿ ಅಂಗಡಿಗಳಿಗೆ ನೀರು ಪೂರೈಸುವ ವ್ಯವಸ್ಥೆ ಬಲಪಡಿಸಬೇಕು. ನಿತ್ಯ ಸಾವಿರಾರು ಜನರು ಬರುವ ಎಪಿಎಂಸಿಯಲ್ಲಿ ಕನಿಷ್ಠ ಪಕ್ಷ ಕುಡಿಯುವ ನೀರಾದರೂ ಸರಿಯಾಗಿ ಸಿಗುವಂತೆ ಮಾಡಬೇಕು.

    ಶುದ್ಧ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿ ಇಡುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇನ್ನೆರಡು ದಿನದಲ್ಲಿ ಎಪಿಎಂಸಿ ವ್ಯಾಪ್ತಿಯ ಎಲ್ಲ ಕಡೆ ಕುಡಿಯುವ ನೀರು ಸಮರ್ಪಕವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುವುದು.
    | ರಾಮಚಂದ್ರ ಜಾಧವ ಹುಬ್ಬಳ್ಳಿ ಎಪಿಎಂಸಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts