More

    ಎನ್‌ಎಫ್‌ಎಸ್‌ಎಂಗೆ 4 ಲಕ್ಷ ಹೆ. ಭೂಮಿ

    ಬೆಳಗಾವಿ: ಮಿಶ್ರ ಬೆಳೆ ಪದ್ಧತಿ ಪ್ರೋತ್ಸಾಹಿಸುವುದರೊಂದಿಗೆ ರೈತರ ಆದಾಯ ದ್ವಿಗುಣಗೊಳಿಸುವ ರಾಷ್ಟ್ರೀಯ ಆಹಾರ ಭದ್ರತಾ ಮಿಷನ್(ಎನ್‌ಎಫ್‌ಎಸ್‌ಎಂ) ವ್ಯಾಪ್ತಿಗೆ ಜಿಲ್ಲೆಯ 4.15 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶವನ್ನು ಸೇರ್ಪಡಿಸಲು ಕೃಷಿ ಇಲಾಖೆ ಗುರಿ ಹಾಕಿಕೊಂಡಿದ್ದು, ಅಗತ್ಯ ಕ್ರಮಗಳನ್ನು ಆರಂಭಿಸಿದೆ.

    ದರ ಕುಸಿತ, ಸಾಗುವಳಿ, ಬಿತ್ತನೆ, ಕೂಲಿ, ಬೀಜ, ರಸಗೊಬ್ಬರ ದರ ಹೆಚ್ಚಳ, ಮಳೆ ಅಭಾದಿಂದಾಗಿ ವರ್ಷದಿಂದ ವರ್ಷಕ್ಕೆ ಎಣ್ಣೆಕಾಳು, ಸಿರಿಧಾನ್ಯ, ದ್ವಿದಳ ಧಾನ್ಯ ಸೇರಿದಂತೆ ಆಹಾರ ಪದಾರ್ಥ ಬೆಳೆಯುವ ಪ್ರದೇಶ ಕುಂಠಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಒಂದೇ ಸಮಯದಲ್ಲಿ ಎರಡು ಬೆಳೆ ಬೆಳೆಯುವ ಮಿಶ್ರಬೆಳೆ ಪದ್ಧತಿ ಅಳವಡಿಕೆ, ರೈತರನ್ನು ಪ್ರೋತ್ಸಾಹಿಸಲು ನಿಟ್ಟಿನಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಮಿಷನ್‌ಯಡಿ ಕೃಷಿ ಇಲಾಖೆ ವಿವಿಧ ಕಾರ್ಯಕ್ರಮ ಜಾರಿಗೊಳಿಸಿದೆ. ಇದಕ್ಕಾಗಿ ವಾರ್ಷಿಕ ಕೋಟ್ಯಂತರ ರೂ. ಅನುದಾನ ವೆಚ್ಚ ಮಾಡುತ್ತಿದೆ.

    ಜಿಲ್ಲೆಯಲ್ಲಿ 2021-22ನೇ ಸಾಲಿನ ಎನ್‌ಎಫ್‌ಎಸ್‌ಎಂ ಯೋಜನೆಯ ವಾರ್ಷಿಕ ಕಾರ್ಯಕ್ರಮದಲ್ಲಿ 4.15 ಲಕ್ಷ ಹೆಕ್ಟೇರ್ ಭೂಮಿಯನ್ನು ಯೋಜನೆ ವ್ಯಾಪ್ತಿಗೆ ಸೇರ್ಪಡೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಈ ಪೈಕಿ ಈಗಾಗಲೇ 44,981 ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳು, ಸಿರಿಧಾನ್ಯ, ದ್ವಿದಳ ಧಾನ್ಯ ಹಾಗೂ ಸಾವಯವ ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ.

    ರೈತರಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಆರ್ಥಿಕ ಸಹಾಯಧನ ಮತ್ತಿತರ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇದರಿಂದಾಗಿ ಮಿಶ್ರಬೆಳೆ ಪದ್ಧತಿ ಪ್ರದೇಶ ಶೇ.20 ವಿಸ್ತರಣೆಗೊಂಡಿದೆ. ಜತೆಗೆ, ರೈತರು ಆದಾಯ ಸಹ ದಿನದಿಂದ ದಿನಕ್ಕೆ ವೃದ್ಧಿಯಾಗುತ್ತಿದೆ. ಈಗಾಗಲೇ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ಮಿಶ್ರ ಬೆಳೆಗಳಾಗಿ ಕಡಲೆ, ಜೋಳ, ಮೆಕ್ಕೆಜೋಳ, ಗೋಧಿ, ಸೋಯಾಬೀನ್, ಹತ್ತಿ, ಸೂರ್ಯಕಾಂತಿ, ಕುಸುಬಿ ಬೆಳೆ ಬೆಳೆಯುವ ಪ್ರದೇಶ ವಿಸ್ತರಣೆಗೊಂಡಿದೆ.ರೈತರು ಮಿಶ್ರ ಬೆಳೆ ಪದ್ಧತಿಯಡಿ ಬೆಳೆ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ. ಅಲ್ಲದೆ, ರಾಸಾಯನಿಕ ಗೊಬ್ಬರ ಬಳಕೆ ಮಾಡದೆ ಸಾವಯವ ಪದ್ಧತಿಯಲ್ಲಿ ಕಬ್ಬು, ಮೆಕ್ಕೆಜೋಳ, ಗೋಧಿ, ಕಡಲೆ, ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲು ನೀರಾವರಿ ಪ್ರದೇಶ ವ್ಯಾಪ್ತಿಯ ರೈತರು ಮುಂದೆ ಬರುತ್ತಿದ್ದಾರೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಯೋಜನೆಯಡಿ ಮಿಶ್ರಬೆಳೆ ಪದ್ಧತಿಯನ್ನು ಪ್ರೋತ್ಸಾಹಿಸಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶ ಹೊಂದಲಾಗಿದೆ. ಜಿಲ್ಲೆಯಲ್ಲಿ ಎಣ್ಣೆ ಕಾಳು, ಸಿರಿಧಾನ್ಯ, ದ್ವಿದಳ ಧಾನ್ಯ, ಸಾವಯವ ಪದಾರ್ಥ ಬೆಳೆಯುವ ಪ್ರದೇಶಗಳ ವಿಸ್ತರಣೆಯಾಗಿದ್ದು, ರೈತರನ್ನು ಪ್ರೋತ್ಸಾಹಿಸಲಾಗುತ್ತಿದೆ.
    | ಶಿವನಗೌಡ ಪಾಟೀಲ, ಕೃಷಿ ಇಲಾಖೆ ಜಂಟಿ ನಿರ್ದೇಶಕ, ಬೆಳಗಾವಿ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts