More

    ಎನ್‌ಪಿಎಸ್, ಒಪಿಎಸ್ ತಾರತಮ್ಯ ನಿವಾರಣೆಗೆ ಮಾತುಕತೆ; ಮಾರ್ಚ್‌ನಿಂದ ಬೇಡಿಕೆ ಈಡೇರಿಕೆಗೆ ಹೋರಾಟ

    ಸಾಗರ: ಎನ್‌ಪಿಎಸ್ ಮತ್ತು ಒಪಿಎಸ್ ನೌಕರರ ನಡುವಿನ ತಾರತಮ್ಯ ನಿವಾರಣೆಗೆ ಸರ್ಕಾರದ ಜತೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಎನ್‌ಪಿಎಸ್ ನೌಕರರ ಪರವಾಗಿ ಸರ್ಕಾರಿ ನೌಕರ ಸಂಘ ಇಲ್ಲ ಎನ್ನುವ ಮಾತು ನಿರಾಧಾರವಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
    ನಗರದ ಗಾಂಧಿ ಮೈದಾನದಲ್ಲಿ ಸರ್ಕಾರಿ ನೌಕರರ ಸಂಘ ಗುರುವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟದ ವಿಜೇತರಿಗೆ ಸನ್ಮಾನ, ನಿವೃತ್ತ ನೌಕರರಿಗೆ ಅಭಿನಂದನೆ, ನೌಕರರ ಸಮಾವೇಶದಲ್ಲಿ ನೌಕರರ ಸಂಘದ ದಿನವಹಿ ಬಿಡುಗಡೆಗೊಳಿಸಿ ಮಾತನಾಡಿದರು.
    ನೌಕರ ಹಿತ ಕಾಯುವುದು ನನ್ನ ಆದ್ಯ ಕರ್ತವ್ಯವಾಗಿದೆ. ಮಾರ್ಚ್ ನಂತರ ಎನ್‌ಪಿಎಸ್ ನೌಕರರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಹೋರಾಟ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಈಗಾಗಲೇ ಹೊಸ ಪಿಂಚಣಿ ಪದ್ಧತಿ ರದ್ದು ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಒಂದೊಮ್ಮೆ ಸರ್ಕಾರ ಇದಕ್ಕೆ ಸ್ಪಂದಿಸದೆ ಹೋದಲ್ಲಿ ಕರ್ನಾಟಕ ರಾಜ್ಯದಾದ್ಯಂತ ನೌಕರರು ಕೆಲಸ ನಿಲ್ಲಿಸಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದರು.
    ಸರ್ಕಾರಿ ನೌಕರರಿಗೆ ಕೆಲಸ ಮಾಡುವಾಗ ಕಿರಿಕಿರಿ ಮಾಡುವುದು, ತೊಂದರೆ ಕೊಟ್ಟರೆ ಸುಮ್ಮನಿರಲ್ಲ. ಏನಾದರೂ ಸಮಸ್ಯೆಯಿದ್ದರೆ ಮಾಹಿತಿ ಹಕ್ಕು ಇದೆ. ಕಾನೂನು ಮೂಲಕ ಹೋರಾಟ ಮಾಡಿ ನೌಕರರಿಗೆ ತೊಂದರೆಕೊಟ್ಟರೆ ನಾವು ಸಹಿಸುವುದಿಲ್ಲ ಎಂದರು.
    ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಹರತಾಳು ಹಾಲಪ್ಪ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕು ಅಂಗಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ನನಗೆ ನೌಕರರು, ಅಧಿಕಾರಿಗಳ ವರ್ಗಾವಣೆಯಲ್ಲಿ ನಂಬಿಕೆ ಇಲ್ಲ. ಅವಮಾನ, ಒತ್ತಡ ಬಂದಾಗ ಕೆಲವೊಮ್ಮೆ ಅನಿವಾರ್ಯವಾಗಿ ವರ್ಗಾವಣೆ ಮಾಡಬೇಕಾಗುತ್ತದೆ. ಸರ್ಕಾರಿ ನೌಕರಿ ಅತ್ಯಂತ ಶ್ರೇಷ್ಠವಾದದ್ದು. ಒಬ್ಬರು ತಪ್ಪು ಮಾಡಿದರೆ ಇಡೀ ವ್ಯವಸ್ಥೆಗೆ ಕೆಟ್ಟ ಹೆಸರು ಬರುತ್ತದೆ. ವೈರುಧ್ಯಗಳ ನಡುವೆಯೂ ನಾವು ಉತ್ತಮ ಕೆಲಸ ಮಾಡುವತ್ತ ಗಮನ ಹರಿಸಬೇಕು, ಹಳೇ ಪಿಂಚಣಿ ಪದ್ಧತಿ ಮತ್ತು ಹೊಸ ಪಿಂಚಣಿ ಪದ್ಧತಿ ನಡುವಣ ತಾರತಮ್ಯ ನಿವಾರಿಸುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ನಾನು ನಿಮ್ಮ ಜತೆ ಇದ್ದೇನೆ ಎಂದು ಅಭಯ ನೀಡಿದರು.
    ಸರ್ಕಾರಿ ನೌಕರರ ಭವನ ಮತ್ತು ಗುರುಭವನ ನಿರ್ಮಾಣಕ್ಕೆ ತಲಾ 1 ಕೋಟಿ ರೂ. ಅನುದಾನಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದರು.
    ಜಿ.ವಿ.ಹರಿಪ್ರಸಾದ್ ಮತ್ತು ಎಂ.ಶೇಖರಪ್ಪ ಉಪನ್ಯಾಸ ನೀಡಿದರು. ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಜಿ.ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ನೌಕರರಿಗೆ, ಮಾಜಿ ಯೋಧರಿಗೆ, ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts