More

    ಎತ್ತಿನ ಗಾಡಿಗೆ ನೊಗ ಹೂಡುವ ಸುಧಾರಿತ ಪದ್ಧತಿ ಆವಿಷ್ಕಾರ

    ಧಾರವಾಡ: ವಿವಿಧ ಕ್ಷೇತ್ರಗಳ ಜನರಿಗೆ ಅನುಕೂಲವಾಗುವ ತಂತ್ರಜ್ಞಾನಗಳ ಆವಿಷ್ಕಾರ ಮಾಡುವಲ್ಲಿ ಎಸ್​ಡಿಎಂ ಇಂಜಿನಿಯರಿಂಗ್ ಕಾಲೇಜ್ ಸದಾ ಮುಂಚೂಣಿಯಲ್ಲಿದೆ. ಇದೀಗ ಮತ್ತೊಂದು ಆವಿಷ್ಕಾರದ ಮೂಲಕ ಜನರ ಗಮನ ಸೆಳೆಯುತ್ತಿದೆ.

    ಉನ್ನತ ಭಾರತ ಅಭಿಯಾನ ಯೋಜನೆಯಡಿ ‘ಎತ್ತಿನ ಗಾಡಿಗೆ ನೊಗ ಹೂಡುವ ಸುಧಾರಿತ ಪದ್ಧತಿ’ ಆವಿಷ್ಕಾರ ಮಾಡಲಾಗಿದೆ. ಪ್ರಾಧ್ಯಾಪಕ ಡಾ. ಮೃತ್ಯುಂಜಯ ಕಪ್ಪಾಳಿ ಈ ಆವಿಷ್ಕಾರ ಮಾಡಿದ್ದು, ಶನಿವಾರ ಕಾಲೇಜು ಆವರಣದಲ್ಲಿ ಪ್ರಾತ್ಯಕ್ಷಿಕೆ ನಡೆಯಿತು.

    ಈ ಸಂದರ್ಭದಲ್ಲಿ ಹಾಜರಿದ್ದ ಎಸ್​ಡಿಎಂಇ ಸೊಸೈಟಿ ಕಾರ್ಯದರ್ಶಿ ಜೀವಂಧರಕುಮಾರ ಮಾತನಾಡಿ, ನಮ್ಮ ಸುತ್ತಲಿನ ವಿಷಯಗಳನ್ನು ಕೂಲಂಕಷವಾಗಿ ಪರಿಶೀಲಿ ಸಿದಾಗ ಹೊಸ ಆವಿಷ್ಕಾರಗಳು ಸಾಧ್ಯ. ಎಲ್ಲ ಸ್ಥಳಗಳಲ್ಲಿ ಸಂಶೋಧನೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದು, ಸದುಪಯೋಗ ಪಡೆಯಬೇಕು ಎಂದರು. ಡಾ. ಮೃತ್ಯುಂಜಯ ಕಪ್ಪಾಳಿ ಮಾತನಾಡಿ, ಈ ತಂತ್ರಜ್ಞಾನ ಪ್ರಾಥಮಿಕ ಹಂತದಲ್ಲಿ ಯಶಸ್ವಿಯಾಗಿದ್ದು, ಹಲವು ರೈತರು ಸಾಥ್ ನೀಡಿದ್ದಾರೆ. 5.5 ಕೆಜಿ ತೂಕದ ಅಲ್ಯುಮಿನಿಯಂ ಲೋಹದಿಂದ ಎತ್ತಿಗೆ ನೊಗ ಕಟ್ಟುವ ಸಾಧನವನ್ನು ನಿರ್ವಿುಸಲಾಗಿದೆ. ಮುಂದಿನ ದಿನಗಳಲ್ಲಿ ಕೇವಲ ಜಾಕೆಟ್ ರೂಪದಲ್ಲಿ ಎತ್ತಿಗೆ ತೊಡಿಸುವಂತೆ ಮಾಡಲು ಸಂಶೋಧನೆ ನಡೆದಿದೆ ಎಂದರು.

    ಪಶು ಸಂಗೋಪನೆ ಇಲಾಖೆ ನಿವೃತ್ತ ಉಪ ನಿರ್ದೇಶಕ ಡಾ. ವಿಲಾಸ ಕುಲಕರ್ಣಿ, ಡಾ. ಎ.ಎ. ಮುಲ್ಲಾ, ಡಾ. ಆರ್.ಸಿ. ಹಳ್ಳಿಕೇರಿ, ನೂತನ ಮಾದರಿ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಪ್ರಾಚಾರ್ಯ ಡಾ. ಕೆ. ಗೋಪಿನಾಥ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ವಿ.ಕೆ. ಪರ್ವತಿ ನಿರೂಪಿಸಿದರು.ಮಾದರಿ ಆವಿಷ್ಕಾರಕ್ಕೆ ಸಹಕರಿಸಿದ ರೈತರು ಹಾಗೂ ಕಾಲೇಜಿನ ಪ್ರಾಧ್ಯಾಪಕರನ್ನು ಅಭಿನಂದಿಸಲಾಯಿತು.

    ಮಾದರಿ ವಿಶೇಷತೆ
    ಭಾರ ಹೇರಿದ ಗಾಡಿಯನ್ನು ಎತ್ತುಗಳು ಹೊರಬೇಕು ಮತ್ತು ಎಳೆಯಬೇಕು. ಸದೃಢ ಸ್ನಾಯುಗಳು ಇರುವುದರಿಂದ ಕುತ್ತಿಗೆಯು ಭಾರ ಎಳೆಯಲು ಪ್ರಶಸ್ತ ಅಂಗ. ಹೀಗಾಗಿ ಸುಧಾರಿತ ಪದ್ಧತಿ ವಿನ್ಯಾಸಗೊಳಿಸಲಾಗಿದೆ. ಅಲ್ಯುಮಿನಿಯಂ ಪಟ್ಟಿಗಳಿಂದ ಒಂದು ಮಾದರಿ ಸಿದ್ಧಪಡಿಸಿ, ಒಳ ಮೈಗೆ ಮೃದು ಹೊದಿಕೆ ಹಾಕಲಾಗಿದೆ. ಮಾದರಿಯನ್ನು ಎತ್ತಿನ ಬೆನ್ನ ಮೇಲಿಟ್ಟು ಕಟ್ಟಿ, ಅದರ ಮೇಲೆ ನೊಗವನ್ನು ಹಿಡಿಕೆಯಲ್ಲಿ ಬಂಧಿಸಲಾಗುತ್ತದೆ. ನೊಗದ ಮೂಲಕ ಭಾರವು ಬೆನ್ನು ಮೇಲೆ ಸಮನಾಗಿ ಹರಡಿಕೊಳ್ಳಲಿದೆ. ಕೊರಳ ಸುತ್ತಲಿನ ಪಟ್ಟಿ ಗಾಡಿ ಎಳೆಯಲು ಸಹಾಯ ಮಾಡುತ್ತದೆ. ಕುತ್ತಿಗೆ ಭಾರ ಕಡಿಮೆಯಾಗಿ ಎತ್ತಿಗೆ ಹುಣ್ಣು ಆಗುವುದು ತಪ್ಪಿಲಿದ್ದು, ಎಳೆಯುವ ಕ್ಷಮತೆ ಹೆಚ್ಚಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts