More

    ಎಟಿಎಂಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಕಡ್ಡಾಯ  – ಎಸ್ಪಿ ಉಮಾ ಪ್ರಶಾಂತ್ ಸೂಚನೆ – ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ 

    ದಾವಣಗೆರೆ: ಎಲ್ಲ ಬ್ಯಾಂಕ್‌ಗಳ ಎಟಿಎಂ ಕೇಂದ್ರಗಳ ಒಳಗೆ ಮತ್ತು ಹೊರಗೆ ಗುಣಮಟ್ಟದ ಸಿಸಿ ಕ್ಯಾಮರಾಗಳನ್ನು ಅಳವಡಿಸುವುದು ಕಡ್ಡಾಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು.
    ಜಿಲ್ಲೆಯ ಎಟಿಎಂ ಕೇಂದ್ರಗಳ ಭದ್ರತೆ ಕುರಿತಂತೆ ಬ್ಯಾಂಕ್ ಅಧಿಕಾರಿಗಳೊಂದಿಗೆ ಇತ್ತೀಚೆಗೆ ಎಸ್ಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
    ಅಳವಡಿಸುವ ಎಟಿಎಂಗಳು ದಿನದ 24-7 ಅವಧಿಯಲ್ಲಿ ಕಾರ್ಯ ನಿರ್ವಹಿಸಬೇಕು. ಎಟಿಎಂ ಹೊರಭಾಗದಲ್ಲಿ ಸಂಚರಿಸುವವರು ಕಾಣುವಂತೆ ಕ್ಯಾಮರಾಗಳನ್ನು ಅಳವಡಿಸಬೇಕು. ಆಯಾ ಕೇಂದ್ರಗಳಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಿ, ಅಹಿತಕರ ಘಟನೆಗಳು ಆಗದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಹೇಳಿದರು.
    ಬ್ಯಾಂಕ್‌ಗಳಲ್ಲಿಯೂ ಒಳ-ಹೊಗೆ ಸಿಸಿಟಿವಿ ವ್ಯವಸ್ಥೆ ಮಾಡಬೇಕು. ಅವುಗಳ ಕಾರ್ಯಚಾಲನೆ ಬಗ್ಗೆ ಆಗಾಗ್ಗೆ ಪರಿಶೀಲನೆ ಬ್ಯಾಂಕ್‌ಗಳಲ್ಲಿ ಅಲಾರ್ಮ್ ಸುವ್ಯವಸ್ಥಿತವಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.
    ಬ್ಯಾಂಕಿಗೆ ಬರುವವರಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಕೂಡಲೇ ನಿಗಾ ವಹಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಬ್ಯಾಂಕ್ ಅಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ಜತೆಗೆ ಬ್ಯಾಂಕಿಂಗ್ ಪ್ರಕರಣಗಳ ತನಿಖೆಗೆ ಅಗತ್ಯ ಸಹಕಾರ ನೀಡಬೇಕು ಎಂದು ಹೇಳಿದರು.
    ಹಿರಿಯ ನಾಗರಿಕರು ಹಾಗೂ ಹಣ ತೆಗೆದುಕೊಂಡು ಹೋಗುವ ಗ್ರಾಹಕರ ಗಮನ ಬೇರೆಡೆ ಸೆಳೆದು ಹಣ ಲಪಟಾಯಿಸುವ ಸಾಧ್ಯತೆ ಇದ್ದು, ಅವರಿಗೆ ಹಣದ ಭದ್ರತೆ ಬಗ್ಗೆ ಸೂಕ್ತ ತಿಳಿವಳಿಕೆ ನೀಡಬೇಕು. ಬ್ಯಾಂಕ್‌ಗಳ ಒಳಗೆ ಹೊರಗೆ ಹಾಗೂ ಬ್ಯಾಕ್ ಚೆಸ್ಟ್ ಸುತ್ತ ಭದ್ರತಾ ಸಿಬ್ಬಂದಿ, ಸಿಸಿ ಕ್ಯಾಮರಾ ಅಳವಡಿಸವೇಕು ಎಂದು ತಿಳಿಸಿದರು.
    ಇತ್ತೀಚಿಗೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಿದ್ದು, ಬ್ಯಾಂಕ್ ಅಧಿಕಾರಿಗಳು ಸಾರ್ವಜನಿಕರಿಗೆ ಸೈಬರ್ ವಂಚನೆ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಇಂತಹ ಪ್ರಕರಣಗಳ ತನಿಖೆ ವೇಳೆ ಪೊಲೀಸರಿಗೆ ವಿಳಂಬ ಮಾಡದೆ ಸಹಕರಿಸಬೇಕು. ಸೈಬರ್ ವಂಚನೆಗೊಳಗಾದವರನ್ನು ಅಲೆದಾಡಿಸದೆ ಅಗತ್ಯ ಸಹಾಯ ಮಾಡುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಲಾಯಿತು.
    ಸಭೆಯಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥ್ಥಾಪಕ ಜಿ.ಸಿ. ಪ್ರಕಾಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ ಕುಮಾರ ಎಂ. ಸಂತೋಷ, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್. ಬಸವರಾಜ, ಪೊಲೀಸ್ ನಿರೀಕ್ಷಕ ಎಲ್. ರುದ್ರಪ್ಪ ಹಾಗೂ ಪೊಲೀಸ್, ಬ್ಯಾಂಕ್ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts