More

    ಎಚ್.ವಿಶ್ವನಾಥ್ ಮೂರ್ಖ, ಕೃತಜ್ಞತೆಹೀನ

    ಮೈಸೂರು: ಎಚ್.ವಿಶ್ವನಾಥನಂತಹ ಮತ್ತೊಬ್ಬ ಮೂರ್ಖನಿಲ್ಲ. ಈತ ಕೃತಜ್ಞತೆಹೀನ ವ್ಯಕ್ತಿ. ನಕಲಿ ಶಾಮ, ಭಾಷಣ ನಿಪುಣ, ಬೆನ್ನಿಗೆ ಚೂರಿ ಹಾಕುವ ವ್ಯಕ್ತಿ ಎಂದು ಸಂಸದ ವಿ. ಶ್ರೀನಿವಾಸಪ್ರಸಾದ್ ಹರಿಹಾಯ್ದರು.

    ವಿಶ್ವನಾಥ್ ವಿಧಾನ ಪರಿಷತ್‌ಗೆ ಚುನಾಯಿತ ಪ್ರತಿನಿಧಿಯಲ್ಲ, ನಾಮನಿರ್ದೇಶನಗೊಂಡವರು. ಈತನಂತೆ ನಾನು ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿಲ್ಲ. ಅಲೆಮಾರಿಗಳ ರಾಜ ಸಹ ಅಲ್ಲ, ಸ್ವಾಭಿಮಾನಿ. ನನ್ನನ್ನು ಜನರು ಮುತ್ಸದ್ದಿ ಎಂದು ಕರೆಯುತ್ತಾರೆ. ನನ್ನ ವಿರುದ್ಧ ಭ್ರಷ್ಟಾಚಾರದ ಒಂದು ಆರೋಪವೂ ಇಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ವಿಶ್ವನಾಥ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

    ತಮ್ಮ 50 ವರ್ಷಗಳ ರಾಜಕೀಯ ಜೀವನದ ಏಳುಬೀಳುಗಳ ಕುರಿತು ನೆನಪು ಮಾಡಿಕೊಂಡ ಪ್ರಸಾದ್ ಅವರು, ನನ್ನ ರಾಜಕೀಯ ಜೀವನದಲ್ಲಿ ಒಂದೂ ಕಪ್ಪುಚುಕ್ಕೆ ಇಲ್ಲ. ನೇರ ನಡೆ-ನುಡಿಯ ಜೀವನ ನನ್ನದು. ಯಾರಿಗೂ ಹೊರೆಯಾಗಿಲ್ಲ. ಪಕ್ಷಗಳಿಗೆ ಆಸ್ತಿಯಾಗಿರುವೆ. ಪ್ರೀತಿ, ವಿಶ್ವಾಸ ಗಳಿಸಿರುವೆ ಎಂದು ಕುಟುಕಿದರು.

    ರಾಜಕೀಯವಾಗಿ ಬೆಳೆಸಿದ ಡಿ.ದೇವರಾಜ ಅರಸು ಅವರಿಗೆ ವಿಶ್ವನಾಥ್, ಮಲ್ಲಿಕಾರ್ಜುನ ಖರ್ಗೆ ಬೆನ್ನಿಗೆ ಚೂರಿ ಹಾಕಿದರು. ಅರಸು ಅವರಿಗೆ ಕೈಕೊಟ್ಟು ರಾತ್ರೋರಾತ್ರಿ ಕಾಂಗ್ರೆಸ್ ಸೇರಿಕೊಂಡರು ಎಂದು ದೂರಿದರು.

    ನಿನ್ನಹಾಗೆ ಯಾರಿಗೂ ಬಾಯಿಗೆ ಬಂದಂತೆ ಮಾತನಾಡಿಕೊಂಡು ತಿರುಗಾಡಿಲ್ಲ. ಬೊಗಳುವ ನಾಯಿ ಕಚ್ಚಲ್ಲ. ಆದರೆ, ವಿಶ್ವನಾಥ್ ಬೊಗಳುತ್ತಾನೆ, ಜತೆಗೆ ಕಚ್ಚುತ್ತಾನೆ. ಹೀಗಾಗಿಯೇ ‘ಪುಂಡ ವಿಶ್ವನಾಥಗೆ ಟಿಕೆಟ್ ಕೊಡಲ್ಲ’ ಎಂದು ಹೇಳಿದ್ದ ಕೆ.ಎಚ್.ಪಾಟೀಲ್ ಅವರ ಮನವೊಲಿಸಿ ಟಿಕೆಟ್ ಕೊಡಿಸಿದ್ದು ಮರೆತು ಹೋಯಿತೇ? ವೀರೇಂದ್ರ ಪಾಟೀಲ್, ವೀರಪ್ಪ ಮೊಯ್ಲಿಗೆ ಹೇಳಿ ನಿನಗೆ ಸಚಿವ ಸ್ಥಾನ ಕೊಡಿಸಿದ್ದು ಯಾರು ಎಂದು ಪ್ರಶ್ನಿಸಿದರು.

    ನಾನು ಮಂತ್ರಿ ಆಗಲು ಇಷ್ಟಪಡಲಿಲ್ಲ, ನಿನಗೆ ಮಂತ್ರಿ ಮಾಡಿಸಿದೆ. ದೆಹಲಿಯಲ್ಲಿ 4 ವರ್ಷ ಸಾಕಿದೆ. ನನ್ನನ್ನು ತಿರುಪತಿ ತಿಮ್ಮಪ್ಪ ಎಂದು ಕರೆದಿದ್ದು ಈಗ ಮರೆತುಹೋಯಿತೇ ಎಂದು ಕಾಲೆಳೆದರು.
    ಎಚ್.ಎಂ. ರೇವಣ್ಣ, ರಮಾನಾಥ ರೈ, ಡಿ.ಕೆ.ಶಿವಕುಮಾರ್ ಸೇರಿದಂತೆ 42 ಜನರಿಗೆ ಟಿಕೆಟ್ ಕೊಡಿಸಿದೆ. ಅದಕ್ಕಾಗಿ ಅವರು ಈಗಲೂ ನನ್ನನ್ನು ಗೌರವಿಸುತ್ತಾರೆ. ಆದರೆ, ವಿಶ್ವನಾಥ ಒಬ್ಬನೇ ಕೃತಜ್ಞತೆಹೀನ. ರಾಜಕೀಯವಾಗಿ ಆಶ್ರಯ ಕೊಟ್ಟವರನ್ನೇ ಮರೆತು ಮಾತನಾಡುತ್ತಾನೆ ಎಂದು ಹೇಳಿದರು.
    ಸಂಸದನಾಗಿದ್ದಾಗ ವಿಶ್ವನಾಥ ಸಂಸತ್‌ನಲ್ಲಿ ಒಂದೇ ಒಂದು ಪ್ರಶ್ನೆಯನ್ನೂ ಕೇಳಲಿಲ್ಲ. ದೆಹಲಿಯ ಮನೆಯಲ್ಲಿ ಕುಡಿದುಕೊಂಡು ಕಾಲ ಕಳೆದರು ಎಂದು ಲೇವಡಿ ಮಾಡಿದರು.
    ವಿಶ್ವನಾಥ ನನ್ನನ್ನು ಕೇಳಿ ಬಿಜೆಪಿಗೆ ಬರಲಿಲ್ಲ. ನಾನು ಸಹ ಕರೆತರಲಿಲ್ಲ. ಅವನಾಗಿಯೇ ಬಂದು, ಅತೃಪ್ತ ಶಾಸಕರನ್ನು ಕರೆದುಕೊಂಡು ಮುಂಬೈಗೆ ಹೋಗಿ ಕುಡಿದು ಮೋಜು ಮಾಡಿದರು. ನಾನು ದೆಹಲಿಗೆ ಹೋಗಿರಲಿಲ್ಲ ಎಂದು ತಿರುಗೇಟು ಕೊಟ್ಟರು.
    ವಿಶ್ವನಾಥನದ್ದು ಕೊಳಕು ರಾಜಕೀಯ. ಕೀಟಲೆ ಮಾಡಿಕೊಂಡು ರಾಜಕಾರಣ ಮಾಡಿದವರು. ಇಷ್ಟು ದಿನ ರಾಜಕೀಯದಲ್ಲಿ ಇದ್ದರೂ ನಾವು ಏನೂ ಮಾಡಿಕೊಳ್ಳಲಿಲ್ಲ. ಆದರೆ, ವಿಶ್ವನಾಥ್ ಮಾತ್ರ ಪೆಟ್ರೋಲ್ ಬಂಕ್, ಬಾರ್ ಮಾಡಿಕೊಂಡಿದ್ದಾರೆ. ಇದೀಗ ಮಗನ ರಾಜಕೀಯ ಭವಿಷ್ಯಕ್ಕಾಗಿ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ. ಆತ ದೂರಿರುವಂತೆ, ಕುಟುಂಬ ರಾಜಕಾರಣದ ಅಗತ್ಯ ನನಗಿಲ್ಲ ಎಂದು ಗುಡುಗಿದರು.

    ವೇಷ ಬದಲಿಸಿಕೊಂಡು ಶಿಕಾರಿಗೆ ಹೋಗುತ್ತಿದ್ದಾನೆ. ಅವನನ್ನು ಎಲ್ಲ ಕಡೆಯಿಂದಲೂ ಗೂಳಿಗಳು ಅಟ್ಟಿಸಿಕೊಂಡು ಬರುತ್ತಿವೆ ಎಂದು ನೀತಿ ಪಾಠವೊಂದನ್ನು ಹೇಳಿದ ಪ್ರಸಾದ್, ನಾನು ಮಲಗಿರುವ ಹುಲಿಯನ್ನು ಎಬ್ಬಿಸಿ ಬೇಟೆಯಾಡುತ್ತೇನೆ. ನಿನ್ನ ತರಹ ಹಸು ವೇಷ ಹಾಕಿ ಬೇಟೆಗೆ ಹೋಗೋದಿಲ್ಲ ಎಂದು ವಿಶ್ವನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಬಿಟ್ಟದ್ದು ಹಣಕ್ಕಾಗಿ!
    ವಿಶ್ವನಾಥ್ ಕಾಂಗ್ರೆಸ್ ಬಿಟ್ಟದ್ದು ಹಣಕ್ಕಾಗಿ. ಸಿದ್ದರಾಮಯ್ಯರ ಬಳಿ ಹಣ, ಅಧಿಕಾರ ಕೇಳಿದಾಗ ಕೊಡಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಬಿಟ್ಟರು. ಜೆಡಿಎಸ್‌ಗೆ ಹೋದಾಗ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಟಿಕೆಟ್ ಕೊಡಿಸಲಾಗದೆ ಅಸಹಾಯಕರಾಗಿದ್ದರು. ಹೀಗಾಗಿ ಬಿಜೆಪಿಗೆ ಬರುತ್ತೇನೆಂದು ನನ್ನ ಮನೆಗೆ ಬಂದು ದುಂಬಾಲು ಬಿದ್ದ. ಯಡಿಯೂರಪ್ಪ, ನೀವು ಕುಳಿತು ಮಾತನಾಡಿಕೊಳ್ಳಿ ಎಂದು ಹೇಳಿದ್ದೆ. ನನ್ನ ಸಮ್ಮುಖದಲ್ಲಿ ವಿಶ್ವನಾಥ್‌ಗೆ ಯಾರು ಕೂಡ ಹಣ ಕೊಟ್ಟಿಲ್ಲ ಎಂದು ಶ್ರೀನಿವಾಸಪ್ರಸಾದ್ ಸ್ಪಷ್ಟನೆ ಕೊಟ್ಟರು.

    15 ಕೋಟಿ ರೂ. ಪಡೆದು ಹುಣಸೂರು ಉಪಚುನಾವಣೆಗೆ ನಿಂತರು. ಆದರೆ, 5 ಕೋಟಿ ರೂ. ಖರ್ಚು ಮಾಡಿ 10 ಕೋಟಿ ಹಾಗೇ ಜೇಬಿಗಿಳಿಸಿಕೊಂಡರು. ಇಂತಹ ವ್ಯಕ್ತಿಗೆ ನನ್ನನ್ನು ಟೀಕಿಸುವ ನೈತಿಕೆ ಇಲ್ಲ ಎಂದು ವಿ. ಶ್ರೀನಿವಾಸಪ್ರಸಾದ್ ಟೀಕಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts