More

    ಎಚ್ಚರಿಕೆ ಪಾಲಿಸದ ಕ್ವಾರಂಟೈನ್ ವಾಸಿಗಳು

    ಹಳಿಯಾಳ: ರೆಡ್ ಜೋನ್, ಹೊರ ಜಿಲ್ಲೆಗಳಿಂದ ಆಗಮಿಸಿ ಸದ್ಯ ಹೋಂ ಕ್ವಾರಂಟೈನ್​ನಲ್ಲಿರುವವರು ಮತ್ತು ಅವರ ಕುಟುಂಬದ ಸದಸ್ಯರು ಆರೋಗ್ಯ ಇಲಾಖೆ ವಿಧಿಸಿದ ಎಚ್ಚರಿಕೆಯನ್ನು ಮೀರಿ ಪಟ್ಟಣದೆಲ್ಲೆಡೆ ಸಂಚರಿಸುತ್ತಿದ್ದಾರೆ. ಇದು ತಾಲೂಕಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ.

    ಹೊರ ರಾಜ್ಯದಿಂದ ಬಂದ 34 ಜನರನ್ನು ಪ್ರತ್ಯೇಕ ವಸತಿ ನಿಲಯಗಳಲ್ಲಿ ಹಾಗೂ ಹೊರ ಜಿಲ್ಲೆಗಳಿಂದ ಬಂದ 600ಕ್ಕೂ ಹೆಚ್ಚು ಜನರನ್ನು ಹೋಂ ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಇಂಥವರಲ್ಲಿ ಕೆಲವರು ಸಾರ್ವಜನಿಕವಾಗಿ ವ್ಯಾಪಾರ ವಹಿವಾಟು ನಡೆಸುತ್ತಿದ್ದರೆ ಇನ್ನೂ ಕೆಲವರು ವಾಹನ ಓಡಿಸುವ, ಸರಕು, ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಇನ್ನೂ ಕೆಲವರು ಸಂತೆಯಲ್ಲಿ ಸುತ್ತಾಡುತ್ತಿದ್ದರೆ, ಮತ್ತಷ್ಟು ಮಂದಿ ಸಂಬಂಧಿಕರು, ಸ್ನೇಹಿತರ ಮನೆಗಳಿಗೆ ತೆರಳುತ್ತಿದ್ದಾರೆ.

    ಹೊರ ಬರಬೇಡಿ: ತಹಸೀಲ್ದಾರ್ ವಿದ್ಯಾಧರ ಗುಳಗುಳೆ ನೇತೃತ್ವದ ತಾಲೂಕು ಆರೋಗ್ಯಾಧಿಕಾರಿ ಡಾ.ರಮೇಶ ಕದಂ, ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ, ಸಿಪಿಐ ಬಿ.ಎಸ್. ಲೋಕಾಪುರ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಶನಿವಾರ ಪಟ್ಟಣದೆಲ್ಲೆಡೆ ಸಂಚಾರ ನಡೆಸಿ ಕ್ವಾರಂಟೈನ್ ವಾಸಿಗಳ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕ್ವಾರಂಟೈನ್​ಕ್ಕೊಳಗಾದವರು ಹಾಗೂ ಅವರ ಕುಟುಂಬದ ಸದಸ್ಯರು ಮನೆ ಬಿಟ್ಟು ಹೊರಬರದಂತೆ ಅಧಿಕಾರಿಗಳು ಎಚ್ಚರಿಸಿದರು.

    ನಿವಾಸಿಗಳ ದೂರು: ಇಲ್ಲಿಯ ಕೊಳಚೆ ಪ್ರದೇಶದಲ್ಲಿ ಕ್ವಾರಂಟೈನ್ ವಾಸಿಗಳ ಮನೆಯಲ್ಲಿ ನಿಯಮ ಉಲ್ಲಂಘಿಸಿ ತರಕಾರಿ, ದಿನಸಿ ಮಾರಾಟ ಮಾಡಲಾಗುತ್ತಿದೆ. ಅದನ್ನು ನಿರ್ಬಂಧಿಸಬೇಕು ಎಂದು ಕೊಳಗೇರಿ ನಿವಾಸಿಗಳು ತಾಲೂಕಾಡಳಿತಕ್ಕೆ ದೂರು ನೀಡಿದರು. ಕೊಳಗೇರಿಗಳ ದೂರನ್ನು ಆಧರಿಸಿ ಸ್ಥಳಕ್ಕೆ ಭೇಟಿ ನೀಡಿದ ತಾಲೂಕಾಡಳಿತದ ತಂಡ ಕ್ವಾರಂಟೈನ್ ವಾಸಿಯ ಮನೆಯಲ್ಲಿ ತರಕಾರಿ, ಹಣ್ಣು, ದಿನಸಿ ಮಾರಾಟ ಮಾಡುತ್ತಿರುವುದನ್ನು ನಿಲ್ಲಿಸುವಂತೆ ಸೂಚಿಸಿದರು.

    ಕ್ವಾರಂಟೈನ್ ವಾಸಿಗಳ ಮನೆಯ ನಿರಂತರ ನಿಗಾವಹಿಸಲು ತಾಲೂಕಾಡಳಿತದಿಂದ ವಿಶೇಷ ಜಾಗ್ರತಾ ದಳ ರಚಿಸಲಾಗಿದ್ದು, ಅವರು ನಿತ್ಯ ಅವರ ಮನೆಗಳಿಗೆ ಭೇಟಿ ನೀಡಿ ಅವರ ಆರೋಗ್ಯ ಸ್ಥಿತಿ ಮತ್ತು ಚಲನವಲನಗಳ ಬಗ್ಗೆ ನಿಗಾವಹಿಸಲಿದ್ದಾರೆ.
    | ಡಾ. ರಮೇಶ ಕದಂ ತಾಲೂಕು ಆರೋಗ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts